ತಾಲೂಕಿನ ಕೌದಳ್ಳಿ ಗ್ರಾಮದ ಸಮೀಪ ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಗೆ ಸುಮಾರು 40 ರಿಂದ 45 ವರ್ಷಗಳಷ್ಟು ಹಳೆಯದಾದ ಸೇತುವೆ ಕೊಚ್ಚಿ ಹೋಗಿದ್ದು, ವಾಹನ ಸವಾರರು ಹಾಗೂ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುವ ಭಕ್ತರು ಪರದಾಡುವಂತಾಗಿದೆ.

ಕನ್ನಡಪ್ರಭ ವಾರ್ತೆ ಹನೂರು

ತಾಲೂಕಿನ ಕೌದಳ್ಳಿ ಗ್ರಾಮದ ಸಮೀಪ ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಗೆ ಸುಮಾರು 40 ರಿಂದ 45 ವರ್ಷಗಳಷ್ಟು ಹಳೆಯದಾದ ಸೇತುವೆ ಕೊಚ್ಚಿ ಹೋಗಿದ್ದು, ವಾಹನ ಸವಾರರು ಹಾಗೂ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುವ ಭಕ್ತರು ಪರದಾಡುವಂತಾಗಿದೆ.

ಕಳೆದ ರಾತ್ರಿ ಸುರಿದ ಮಳೆಯ ಅಬ್ಬರಕ್ಕೆ ಕೌದಳ್ಳಿ ಹಳ್ಳ ತುಂಬಿ ಹರಿದ ಪರಿಣಾಮ ಸೇತುವೆ ಸಂಪೂರ್ಣ ಕೊಚ್ಚಿ ಹೋಗಿದೆ. ಹೀಗಾಗಿ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುವ ಭಕ್ತರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ತಡರಾತ್ರಿ ಸುರಿದ ಭಾರಿ ಮಳೆಯಿಂದ ಹಳ್ಳ ತುಂಬಿ ಹರಿಯುತ್ತಿದ್ದ ವೇಳೆಯಲ್ಲಿ ತಮಿಳುನಾಡಿನ ವ್ಯಕ್ತಿ ಓರ್ವ ವ್ಯಕ್ತಿ ತಮ್ಮ ಒಮಿನಿ ವಾಹನವನ್ನು ಹಳ್ಳದ ನೀರಿನಲ್ಲಿ ಸಂಚರಿಸಲು ಪ್ರಯತ್ನಿಸಿದ್ದಾರೆ. ಆಗ ವಾಹನ ತೇಲಿ ಹೋಗಲು ಪ್ರಾರಂಭಿಸಿದೆ. ಇದೇ ರಸ್ತೆಯಲ್ಲಿ ಮುಸುಕಿನ ಜೋಳದ ಮೂಟೆಗಳನ್ನು ತಿಂದುಕೊಂಡು ಹೋಗುತ್ತಿದ್ದ ಲಾರಿ ಚಾಲಕ ಅಡ್ಡಲಾಗಿ ವಾಹನ ನಿಲ್ಲಿಸಿ ಓಮಿನಿ ವಾಹನದಲ್ಲಿದ್ದ ಕುಟುಂಬವನ್ನು ಅಪಾಯದಿಂದ ಪಾರು ಮಾಡಿದ್ದಾರೆ. ನಂತರ ಲಾರಿ ಸಹ ಭಾರಿ ಹಳ್ಳದ ನೀರಿನಲ್ಲಿ ಸಿಲುಕಿ ಪರದಾಡಿದ ಘಟನೆಯು ರಾತ್ರಿ ಜರುಗಿದೆ.

ಕೂಡಲೇ ಸೇತುವೆ ದುರಸ್ತಿ / ನೂತನ ಸೇತುವೆ ನಿರ್ಮಾಣ ಮಾಡಿಕೊಡಬೇಕು ಎಂದು ಮಾದಪ್ಪನ ಭಕ್ತರು ಹಾಗೂ ವಿವಿಧ ಗ್ರಾಮಗಳ ನಿವಾಸಿಗಳು ಮತ್ತು ವಾಹನ ಸವಾರರು ಒತ್ತಾಯಿಸಿದ್ದಾರೆ.