ಭಟ್ಕಳದಲ್ಲಿ ಮ‍ಳೆಯ ಅವಾಂತರ

| Published : May 23 2024, 01:05 AM IST

ಸಾರಾಂಶ

ಪಟ್ಟಣದ ಕೋಟೇಶ್ವರ ನಗರದಲ್ಲಿರುವ ದಂಡಿನದುರ್ಗಾ ದೇವಸ್ಥಾನಕ್ಕೆ ಮಳೆ ನೀರು ನುಗ್ಗಿದ್ದರಿಂದ ನೀರು ಹೊರ ಹಾಕಲು ಕಮಿಟಿಯ ಸದಸ್ಯರು ಹರಸಾಹಸ ಪಟ್ಟರು.

ಭಟ್ಕಳ: ತಾಲೂಕಿನಲ್ಲಿ ಮಳೆ ಭಾರಿ ಅವಾಂತರ ಸೃಷ್ಟಿ ಮಾಡಿದೆ. ಮಂಗಳವಾರ ರಾತ್ರಿ ಸುರಿದ ಭಾರೀ ಗುಡುಗು ಮಿಂಚು ಸಹಿತ ವ್ಯಾಪಕ ಮಳೆಗೆ ದೇವಸ್ಥಾನ, ಮನೆಗಳಿಗೆ ನೀರು ನುಗ್ಗಿ ತೊಂದರೆ ಉಂಟಾಯಿತು.

ತೀವ್ರ ಸೆಕೆಯಿಂದ ಕಂಗಾಲಾಗಿದ್ದ ಭಟ್ಕಳ ಜನತೆ ಭಾರೀ ಮಳೆಯಿಂದಾಗಿ ತಂಪಿನ ವಾತಾವರಣ ಅನುಭವಿಸಿದ್ದರೂ ರಾತ್ರಿ ಇಡೀ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಆಗಿದ್ದರಿಂದ ತೊಂದರೆ ಅನುಭವಿಸಿದರು. ವ್ಯಾಪಕ ಮಳೆಯಿಂದಾಗಿ ಪಟ್ಟಣದ ಸಂಶದ್ದೀನ ವೃತ್ತ, ಕಿದ್ವಾಯಿ ರಸ್ತೆ, ಹನುಮಾನ ನಗರ, ಮುಗ್ದೂಂ ಕಾಲನಿ ಮುಂತಾದ ಕಡೆ ಮಳೆ ನೀರು ಮನೆಯೊಳಗೆ ನುಗ್ಗಿ ಜನರಿಗೆ ನಿದ್ದೆ ಇಲ್ಲದಂತೆ ಮಾಡಿತು. ಸರಿಯಾದ ಗಟಾರದ ವ್ಯವಸ್ಥೆ ಇಲ್ಲದೇ ಇರುವುದರಿಂದ ಮತ್ತು ಗಟಾರದ ಹೂಳು ಇನ್ನೂ ತೆಗೆಯದೇ ಇರುವುದರಿಂದ ಮಳೆ ನೀರು ಮನೆಗಳಿಗೆ ನುಗ್ಗುವಂತಾಯಿತು.

ಪಟ್ಟಣದ ಹನುಮಾನ್ ನಗರದ ದಿಗಂಬರ್ ಶೇಟ್ ಹಾಗೂ ಮಗ್ದುಂ ಕಾಲನಿಯ ಮನೆಗಳೊಳಗೆ ನೀರು ನುಗ್ಗಿದ್ದರಿಂದ ಅಕ್ಕಿ, ಬಟ್ಟೆ ಹಾಗೂ ಇತರ ವಸ್ತುಗಳು ಒದ್ದೆಯಾಗಿ ಹಾನಿ ಉಂಟಾಗಿದೆ.

ಚರಂಡಿಯ ಕೆಸರು ನೀರು ಮನೆಯೊಳಗೆ ನುಗ್ಗಿದ ಪರಿಣಾಮ ಮನೆಯ ಸ್ವಚ್ಛತೆಗೆ ಹರಸಾಹಸ ಪಡಬೇಕಾಯಿತು. ಸಣ್ಣ ಮಕ್ಕಳನ್ನು ಮತ್ತು ಸಾಮಗ್ರಿಗಳನ್ನು ಮಳೆ ನೀರಿನಿಂದ ರಕ್ಷಿಸಲು ಪರದಾಡುವಂತಾಯಿತು.

ಪಟ್ಟಣದ ಕೋಟೇಶ್ವರ ನಗರದಲ್ಲಿರುವ ದಂಡಿನದುರ್ಗಾ ದೇವಸ್ಥಾನಕ್ಕೆ ಮಳೆ ನೀರು ನುಗ್ಗಿದ್ದರಿಂದ ನೀರು ಹೊರ ಹಾಕಲು ಕಮಿಟಿಯ ಸದಸ್ಯರು ಹರಸಾಹಸ ಪಟ್ಟರು. ಪುರಸಭೆ ಮತ್ತು ತಾಲೂಕು ಆಡಳಿತ ಮಳೆಗಾಲದ ಪೂರ್ವಭಾವಿ ಕೆಲಸದ ಬಗ್ಗೆ ಗಮನ ಹರಿಸದೇ ಇರುವುದರಿಂದಲೇ ಮೊದಲ ಮಳೆಗೆ ಈ ಅವಾಂತರ ಉಂಟಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ಮಳೆಗಾಲದ ಪೂರ್ವಭಾವಿ ಕೆಲಸದ ಬಗ್ಗೆ ಎಚ್ಚೆತ್ತುಕೊಳ್ಳದೇ ಇದ್ದಲ್ಲಿ ಮುಂದೆ ಸುರಿಯವ ಮಳೆಗೆ ಮತ್ತಷ್ಟು ಅವಾಂತರ ಸೃಷ್ಟಿಯಾಗುವ ಸಾಧ್ಯತೆ ಇದೆ. ತಾಲೂಕಿನಲ್ಲಿ ಬುಧವಾರ ಬೆಳಗ್ಗೆವರೆಗೆ 56.4 ಮಿಮೀ ಮಳೆಯಾಗಿದ್ದು, ಈ ಸಲ ಒಟ್ಟೂ 167.2 ಮಿಮೀ ಮಳೆಯಾಗಿದೆ. ಮಂಗಳವಾರ ರಾತ್ರಿ ಯಲ್ವಡಿಕವೂರು ರಸ್ತೆಯಲ್ಲಿ ಮರವೊಂದು ವಿದ್ಯುತ್ ತಂತಿ ಮತ್ತು ರಸ್ತೆ ಮೇಲೆಯೇ ಬಿದ್ದಿದ್ದರಿಂದ ಸಂಚಾರಕ್ಕೆ ತೊಂದರೆ ಉಂಟಾಗುವುದರ ಜತೆಗೆ ವಿದ್ಯುತ್ ವ್ಯತ್ಯಯಕ್ಕೆ ಕಾರಣವಾಯಿತು.

ಹೆಬಳೆಯ 110 ಕೆವಿ ವಿದ್ಯುತ್ ಸ್ಟೇಷನ್‌ನಲ್ಲಿ ತಾಂತ್ರಿಕ ದೋಷ ಉಂಟಾದ ಹಿನ್ನೆಲೆ ಮಂಗಳವಾರ ರಾತ್ರಿ ಪದೇ ಪದೇ ವಿದ್ಯುತ್ ಹೋಗುವುದು ಬರುವುದು ಆಗುತ್ತಿತ್ತು. ಗ್ರಾಮಾಂತರ ಭಾಗದಲ್ಲಿ ರಾತ್ರಿ ಹೋದ ವಿದ್ಯುತ್ ಬೆಳಗ್ಗೆಯವರೆಗೂ ಇರಲಿಲ್ಲ. ಬುಧವಾರ ಸಂಜೆ ವರೆಗೂ ವಿದ್ಯುತ್ ಸರಬರಾಜಿನಲ್ಲಿ ಪದೇ ಪದೇ ತೊಂದರೆ ಉಂಟಾಗಿದ್ದು, ಮಧ್ಯಾಹ್ನದ ನಂತರ ಸರಿ ಆಗಿತ್ತು. ಹೆಬಳೆ ವಿದ್ಯುತ್ ಸ್ಟೇಷನ್ ನಲ್ಲಾದ ತಾಂತ್ರಿಕ ದೋಷ ಸರಿಪಡಿಸಲು ಹೆಸ್ಕಾಂ ಅಧಿಕಾರಿಗಳು, ಸಿಬ್ಬಂದಿ ರಾತ್ರಿ ಇಡೀ ಶ್ರಮ ವಹಿಸಿದ್ದರು. ಬುಧವಾರ ಬೆಳಗ್ಗೆಯಿಂದ ಸಂಜೆ ವರೆಗೂ ಮೋಡದ ವಾತಾವರಣ ಇದ್ದು, ಮಳೆ ಸುರಿಯದ ಹಿನ್ನೆಲೆಯಲ್ಲಿ ಸೆಕೆಯ ಪ್ರಮಾಣ ಅಧಿಕವಾಗಿತ್ತು. ವಿದ್ಯುತ್ ವ್ಯತ್ಯಯ: ತಾಲೂಕಿನ ಹೆಬಳೆ ಗ್ರಿಡ್‌ನಲ್ಲಿ ಪರಿವರ್ತಕವೊಂದು ವಿಫಲಗೊಂಡಿದ್ದು, ಇದರಿಂದ ಹನೀಪಾಬಾದ್, ಕಾರಗದ್ದೆ, ನವಾಯತ್ ಕಾಲನಿ, ಡಿ ಪಿ ಕಾಲನಿ, ನಾಗಪ್ಪ ನಾಯಕ ರಸ್ತೆ, ಸಾಗರ ರೋಡ್, ಕಡವಿನಕಟ್ಟೆ, ಉಸ್ಮಾನ ನಗರ, ಮುಟ್ಟಳ್ಳಿ, ಪುರವರ್ಗ, ಸರ್ಪನಕಟ್ಟೆ, ವಿ.ಟಿ. ರೋಡ್, ಸೋನಾರಕೇರಿ, ತೆಂಗಿನಗುಂಡಿ, ಕ್ರಾಸ್, ಹೊಂಡದ ಕೇರಿ ಪ್ರದೇಶಗಳಲ್ಲಿ ಮೇ 24ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಗ್ರಾಹಕರು ಸಹಕರಿಸುವಂತೆ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮಂಜುನಾಥ ತಿಳಿಸಿದ್ದಾರೆ.