ಸಾರಾಂಶ
ಹಾವೇರಿ: ಜಿಲ್ಲೆಯ ವಿವಿಧಡೆ ಶನಿವಾರ ಸಂಜೆ ಗುಡುಗು, ಮಿಂಚು ಸಹಿತ ಮಳೆಯಾಗಿದ್ದು, ತಂಪು ವಾತಾವರಣ ನಿರ್ಮಾಣವಾಗಿದೆ.ಸಂಜೆ ಒಂದು ಗಂಟೆಗೂ ಹೆಚ್ಚು ಕಾಲ ಮಳೆಯಾಗಿದ್ದರಿಂದ ನಗರದ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟಿಗೆ ಸಮಸ್ಯೆಯಾಯಿತು. ಜನ ಸಂಚಾರಕ್ಕೂ ಸಮಸ್ಯೆಯಾಯಿತು. ಹಾನಗಲ್ಲ, ರಾಣಿಬೆನ್ನೂರು, ಹಿರೇಕೆರೂರು, ಸವಣೂರು ಭಾಗದಲ್ಲೂ ಸಾಧಾರಣ ಮಳೆಯಾಗಿದೆ. ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಬಿಸಿಲಿನ ವಾತಾವರಣವಿತ್ತು. ಸಂಜೆ ಮೋಡ ಕವಿದು ಗುಡುಗು, ಮಿಂಚು ಸಹಿತ ಮಳೆಯಾಯಿತು. ಬಿರು ಬೇಸಿಗೆಯಿಂದ ಕಂಗೆಟ್ಟಿದ್ದ ಜನರಿಗೆ ಮಳೆ ಬಂದಿದ್ದರಿಂದ ನಿಟ್ಟುಸಿರು ಬಿಟ್ಟಿದ್ದು, ವಾತಾವರಣವು ತಂಪಾಯಿತು. ಕಳೆದ ಮೂರ್ನಾಲ್ಕು ದಿನಗಳಿಂದ ಜಿಲ್ಲೆಯ ವಿವಿಧಡೆ ಮಳೆ ಆಗುತ್ತಿದ್ದರಿಂದ ರೈತರು ಜಮೀನುಗಳತ್ತ ಮುಖ ಮಾಡಿದ್ದು ಬಿತ್ತನೆಗೆ ಭೂಮಿಯನ್ನು ಸಿದ್ಧಪಡಿಸುತ್ತಿದ್ದಾರೆ. ಧರೆಗೆ ತಂಪು ಮೂಡಿಸಿದ ಮಳೆ: ರಾಣಿಬೆನ್ನೂರು ನಗರದಲ್ಲಿ ಶನಿವಾರ ಸಂಜೆ 5ರ ಸುಮಾರು ಯಾವ ಮುನ್ಸೂಚನೆಯೂ ಇಲ್ಲದೇ ಏಕಾಏಕಿ ಗುಡುಗು ಸಿಡಿಲಿನಿಂದ ಸುರಿದ ಮಳೆಯು ಬಿಸಿಲಿನಿಂದ ಬೇಸತ್ತಿದ್ದ ಜನರಲ್ಲಿ ತಂಪಿನ ವಾತಾವರಣ ಮೂಡಿಸಿದೆ. ಚರಂಡಿಗಳು ತುಂಬಿ ರಸ್ತೆಯ ಮೇಲೆ ನೀರು ರಭಸದಿಂದ ಹರಿಯಿತು. ಕಚೇರಿ ಕೆಲಸ ಮುಗಿಸಿದ ಸರ್ಕಾರಿ ಇಲಾಖೆಗಳ ಸಿಬ್ಬಂದಿ ಮನೆಗೆ ತೆರಳಲು ಪ್ರಯಾಸ ಪಡಬೇಕಾಯಿತು.