ಮಳೆಗೆ ತುಂಬಿಹರಿದ ಹಳ್ಳ: ಹಲವು ಗ್ರಾಮಗಳ ರಸ್ತೆ ಸಂಪರ್ಕ ಕಡಿತ

| Published : May 21 2025, 02:24 AM IST

ಮಳೆಗೆ ತುಂಬಿಹರಿದ ಹಳ್ಳ: ಹಲವು ಗ್ರಾಮಗಳ ರಸ್ತೆ ಸಂಪರ್ಕ ಕಡಿತ
Share this Article
  • FB
  • TW
  • Linkdin
  • Email

ಸಾರಾಂಶ

ಮಂಗಳವಾರದ ಮಳೆಯಿಂದಾಗಿ ಮಳೆಗಾಲದ ಆರಂಭದಲ್ಲಿಯೇ ತುಪ್ಪರಿಹಳ್ಳ ತುಂಬಿ ಹರಿದಿದ್ದು ವಿಶೇಷವಾದರೂ ಶಿರೂರ- ಆಹೆಟ್ಟಿ ಮಧ್ಯದಲ್ಲಿರುವ ತುಪ್ಪರಿಹಳ್ಳದ ನೀರು ಸೇತುವೆ ಮೇಲೆ ತುಂಬಿ ಹರಿಯುತ್ತಿದ್ದ ಪರಿಣಾಮ ಎರಡು ಗ್ರಾಮಗಳ ನಡುವಿನ ರಸ್ತೆ ಸಂಪರ್ಕ ಕಡಿಕಗೊಂಡಿತು.

ನವಲಗುಂದ: ಕ‍ಳೆದ 2-3 ದಿನಗಳಿಂದ ಸುರಿಯುತ್ತಿರುವ ಮ‍ಳೆಯಿಂದ ತಾಲೂಕಿನಲ್ಲಿಯ ತುಪ್ಪರಿಹಳ್ಳ ತುಂಬಿ ಹರಿಯುತ್ತಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ. ಹಳ್ಳದ ಸಮೀಪದ ಗ್ರಾಮಗಳ ಜನತೆಯಲ್ಲಿ ಆತಂಕ ಮನೆ ಮಾಡಿದೆ.

ಮಂಗಳವಾರದ ಮಳೆಯಿಂದಾಗಿ ಮಳೆಗಾಲದ ಆರಂಭದಲ್ಲಿಯೇ ತುಪ್ಪರಿಹಳ್ಳ ತುಂಬಿ ಹರಿದಿದ್ದು ವಿಶೇಷವಾದರೂ ಶಿರೂರ- ಆಹೆಟ್ಟಿ ಮಧ್ಯದಲ್ಲಿರುವ ತುಪ್ಪರಿಹಳ್ಳದ ನೀರು ಸೇತುವೆ ಮೇಲೆ ತುಂಬಿ ಹರಿಯುತ್ತಿದ್ದ ಪರಿಣಾಮ ಎರಡು ಗ್ರಾಮಗಳ ನಡುವಿನ ರಸ್ತೆ ಸಂಪರ್ಕ ಹಾಗೂ ಶಿರಕೋಳ, ಹನಸಿ, ಜಾವೂರು, ಬಳ್ಳೂರ, ಸೇತುವೆ ಮೇಲೆ ನೀರು ಹರಿಯುತ್ತಿರುವ ಪರಿಣಾಮ ರಸ್ತೆ ಸಂಪರ್ಕ ಕಡಿತಗೊಂಡಿದೆ.

ಮಳೆ ಅಥವಾ ಹಳ್ಳದ ನೆರೆಯಿಂದ ಯಾವುದೇ ಅನಾಹುತಗಳಾದ ಬಗ್ಗೆ ವರದಿಯಾಗಿಲ್ಲ. ಬಸ್ ಸಂಚಾರ ಸ್ಥಗಿತಗೊಂಡಿದ್ದರಿಂದ ನವಲಗುಂದಕ್ಕೆ ಮಂಗಳವಾರದ ಸಂತೆಗೆ ಬರುವ ಗ್ರಾಮಸ್ಥರು ಪರದಾಡುವಂತಾಗಿದೆ.

ಇನ್ನೂ 3-4 ದಿನ ಮಳೆಯಾಗುವ ಸಂಭವವಿದ್ದು, ತುರ್ತು ಸಂದರ್ಭದಲ್ಲಿ ತಹಸೀಲ್ದಾರ್ ಕಾರ್ಯಾಲಯದ 0830-229240 ಅಥವಾ 1077 ನಂಬರಿಗೆ ಸಂಪರ್ಕಿಸಬಹುದು ಎಂದು ತಹಸೀಲ್ದಾರ್ ಸುಧೀರ್ ಸಾಹುಕಾರ್ ತಿಳಿಸಿದ್ದಾರೆ.

ಸಿಡಿಲುಬಡಿದು ಯುವಕ ಸಾವು

ಕುಂದಗೋಳ: ಕೆರೆಯಲ್ಲಿ ಎತ್ತುಗಳ ಮೈ ತೊಳೆಯುತ್ತಿರುವ ವೇಳೆ ಸಿಡಿಲು ಬಡಿದು ಯುವಕ ಮೃತಪಟ್ಟ ಘಟನೆ ತಾಲೂಕಿನ ಹಿರೇನೆರ್ತಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಹಿರೇಹರಕುಣಿ ಗ್ರಾಮದ ಮೈಲಾರಪ್ಪ ಬಸವರಾಜ ಉಣಕಲ್ (18) ಮೃತಪಟ್ಟ ದುರ್ದೈವಿ.

ಮೈಲಾರಪ್ಪ ಒಂದು ವಾರದ ಹಿಂದೆ ಮಾವನ ಊರಾದ ಹಿರೇನೆರ್ತಿ ಗ್ರಾಮಕ್ಕೆ ಬಂದಿದ್ದ. ಮಂಗಳವಾರ ಮಧ್ಯಾಹ್ನ ಮಾವನ ಮನೆಯಲ್ಲಿದ್ದ ಎತ್ತುಗಳನ್ನು ಮೈ ತೊಳೆಯಲು ಹೋಗಿದ್ದಾನೆ. ಈ ವೇಳೆ ಮ‍ಳೆ ಬಂದಿದ್ದರಿಂದ ಪಕ್ಕದ ಜಮೀನಿನಲ್ಲಿದ್ದ ಬೇವಿನ ಗಿಡದ ಬಳಿ ನಿಂತಾಗ ಸಿಡಿಲು ಬಡಿದು ಮೃತಪಟ್ಟಿದ್ದಾನೆ. ಆತನ ಜತೆ ಸ್ವಲ್ಪ ದೂರದಲ್ಲಿದ್ದ ಮುಂಜುನಾಥ ಶಿ. ನಾಯ್ಕರ ಅವರಿಗೆ ಗಾಯಗಳಾಗಿದ್ದು, ಕುಂದಗೋಳ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಕೆಎಂಸಿಐಆರ್‌ಗೆ ಕ‍ಳುಹಿಸಲಾಗಿದೆ. ಸ್ಥಳಕ್ಕೆ ಕಂದಾಯ ಇಲಾಖೆ ಹಾಗೂ ಪೊಲೀಸ್‌ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಕುಂದಗೋಳ ‌ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.