ಕೃಷಿ ಚಟುವಟಿಕೆಗೆ ಮುನ್ನುಡಿ ಬರೆದ ಮಳೆ: ರೈತರಲ್ಲಿ ಸಂತಸ

| Published : May 16 2024, 12:54 AM IST / Updated: May 16 2024, 12:28 PM IST

ಕೃಷಿ ಚಟುವಟಿಕೆಗೆ ಮುನ್ನುಡಿ ಬರೆದ ಮಳೆ: ರೈತರಲ್ಲಿ ಸಂತಸ
Share this Article
  • FB
  • TW
  • Linkdin
  • Email

ಸಾರಾಂಶ

ಎತ್ತುಗಳು ಸಹಾಯದಿಂದ ಭೂಮಿ ಉಳುಮೆ ಮಾಡುತ್ತಿರುವ ರೈತರು। ಬಿತ್ತನೆಗೆ ಬೇಕಾಗುವ ಬೀಜ, ಗೊಬ್ಬರ ದಾಸ್ತಾನಿಗೆ ಸಿದ್ಧತೆ

-ಮಲ್ಲಯ್ಯ ಪೋಲಂಪಲ್ಲಿ

 ಶಹಾಪುರ :  ಕಳೆದ ಎರಡು ದಿನಗಳಿಂದ ತಾಲೂಕು ವ್ಯಾಪ್ತಿಯಲ್ಲಿ ಮಳೆಯಾಗುತ್ತಿದ್ದು, ಮಂಗಳವಾರ ರಾತ್ರಿ ಸುರಿದ ಉತ್ತಮ ಮಳೆ ಬರಗಾಲದಿಂದ ತತ್ತರಿಸಿದ್ದ ರೈತರಿಗೆ ಮುಖದಲ್ಲಿ ಸಂತಸ ತಂದಿದೆ. ರೈತರು ಎತ್ತುಗಳು ಹಾಗೂ ಟ್ರ್ಯಾಕ್ಟರ್ ಮೂಲಕ ಭೂಮಿ ಉಳುಮೆ ಮಾಡುತ್ತಿದ್ದು, ಬಿತ್ತನೆಗೆ ಬೇಕಾಗುವ ಸಿದ್ಧತೆ ಕೈಗೊಂಡು ಕೃಷಿ ಚಟುವಟಿಕೆಗಳಿಗೆ ಮುನ್ನುಡಿ ಬರೆಯಲಿದ್ದಾರೆ.

ಕೃಷಿ ಭೂಮಿ: ಶಹಾಪುರ ತಾಲೂಕಿನಲ್ಲಿ ಒಟ್ಟು 81,770 ಹೆಕ್ಟೇರ್ ಕೃಷಿ ಭೂಮಿ ಇದ್ದು. ಇದರಲ್ಲಿ 56,100 ಹೆಕ್ಟೇರ್ ನೀರಾವರಿ ಇದ್ದು, 25,670 ಹೆಕ್ಟರ್‌ ಒಣ ಬೇಸಾಯ ಭೂಮಿ ಇದೆ. ಇನ್ನೂ 31,047 ಸಣ್ಣ ಅತಿ ಸಣ್ಣ ರೈತರು, 22,736 ಮಧ್ಯಮ ಮತ್ತು ದೊಡ್ಡ ರೈತರು ಸೇರಿ ತಾಲೂಕಿನಲ್ಲಿ 43,856 ರೈತ ಕುಟುಂಬಗಳಿವೆ. 

ಬಿತ್ತನೆ ಬೀಜ ಬೇಡಿಕೆ: ಹೆಸರು 300 ಕ್ವಿಂಟಲ್, ತೊಗರಿ 1050, ಸಜ್ಜೆ 10, ಮೆಕ್ಕೆಜೋಳ 10, ಸೂರ್ಯಕಾಂತಿ 9, ಭತ್ತ 15038, ಹತ್ತಿ 3 ಲಕ್ಷ ಪಾಕೆಟ್ ಬೇಡಿಕೆ ಸಲ್ಲಿಸಲಾಗಿದೆ. ಮೇ 4 ನೇ ವಾರದಲ್ಲಿ ಬೀಜ ಗೊಬ್ಬರಗಳು ಬರುತ್ತಿವೆ. ಎಲ್ಲಾ ಕಡೆ ಬೀಜ ಗೊಬ್ಬರದ ಅಗತ್ಯತೆಯ ಬೇಡಿಕೆಯ ಪಟ್ಟಿ ಈಗಾಗಲೇ ಸಲ್ಲಿಸಲಾಗಿದೆ ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ ತಾಲೂಕಿನಲ್ಲಿ ಈ ವರ್ಷ ಮುಂಗಾರು ಹಂಗಾಮಿಗೆ 24 ಸಾವಿರ ಮೆಟ್ರಿಕ್ ಟನ್ ಗೊಬ್ಬರದ ಬೇಡಿಕೆ ಸಲ್ಲಿಸಲಾಗಿದೆ.

ಅಧಿಕೃತ ಬೀಜ ಖರೀದಿಗೆ ಮನವಿ: ಈಗಾಗಲೇ ರೈತರು ಬಿತ್ತನೆಗಾಗಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದು, ರೈತರು ಕೃಷಿ ಇಲಾಖೆಯಲ್ಲಿ ಹಾಗೂ ಅಧಿಕೃತ ಅಂಗಡಿಗಳಿಂದಲೇ ಬೀಜ ಖರೀದಿಸಿ ಅಧಿಕೃತ ರಸೀದಿ ಪಡೆಯಬೇಕು. ಅನಧಿಕೃತವಾಗಿ ಬೀಜ ಖರೀದಿಸುವುದರಿಂದ ರೈತರು ಮೋಸ ಹೋಗುವ ಸಂದರ್ಭಗಳೆ ಜಾಸ್ತಿ ಇದೆ. ರೈತರು ಮೋಸ ಹೋಗದೆ ಅಧಿಕೃತ ಲೈಸನ್ಸ್ ಪಡೆದಿರುವ ಅಂಗಡಿಗಳಿಂದ ಮಾತ್ರ ಬೀಜ ಖರೀದಿಸಬೇಕು ಎಂದು ಕೃಷಿ ಅಧಿಕಾರಿಗಳು ರೈತರಲ್ಲಿ ಮನವಿ ಮಾಡಿದ್ದಾರೆ.

ರೈತರಿಗೆ ರಾಷ್ಟ್ರೀಕೃತ ಬ್ಯಾಂಕ್‌ ಉತ್ತೇಜಿಸಲಿ: ರಾಷ್ಟ್ರೀಕೃತ ಬ್ಯಾಂಕ್‌ ರೈತಾಪಿ ವರ್ಗದವರ ಚಟುವಟಿಕೆಗೆ ಪ್ರೋತ್ಸಾಹ ನೀಡುವಲ್ಲಿ ಹಿಂದೇಟು ಹಾಕುತ್ತಿವೆ. ರೈತರಿಗೆ ಯಾವುದೇ ಶರತ್ತು ಇಲ್ಲದೆ ಕೃಷಿ ಚಟುವಟಿಕೆಗಳಿಗೆ ಮತ್ತು ಬೀಜ ಗೊಬ್ಬರ ಕರದಿಸಲು ಬೆಳೆ ಸಾಲ ನೀಡಿ ಉತ್ತೇಜಿಸಲು ಬ್ಯಾಂಕುಗಳು ಮುಂದೆ ಬರಬೇಕಾಗಿದೆ ಎಂದು ಖಾನಾಪುರದ ರೈತ ಸುನಿಲ್ ತಿಳಿಸಿದ್ದಾರೆ.

ಮಳೆ ವಿವರ: ಸೋಮವಾರ ಮೇ13 ರಂದು ಶಹಾಪುರ 24ಮಿಮೀ, ದೋರನಹಳ್ಳಿ 40ಮಿಮೀ, ಭೀಮರಾಯನಗುಡಿ 25ಮಿಮೀ, ಗೋಗಿ24 ಮಿಮೀ, ಹತ್ತಿಗುಡೂರ್ 01 ಮಿಮೀ ಮಳೆ ಸುರಿದಿದೆ. ಮಂಗಳವಾರ ಮೇ15 ರ ರಾತ್ರಿ ಶಹಾಪುರ 48.4ಮಿಮೀ, ಭೀಮರಾಯನ ಗುಡಿ 45ಮಿಮೀ, ದೋರನಹಳ್ಳಿ 45 ಮಿಮೀ ಹತ್ತಿಗೂಡುರ 25ಮಿಮೀ, ಗೋಗಿ 38.6 ಮಿಮೀ ಮಳೆ ಸುರಿದಿರುವ ಕುರಿತು ವರದಿಯಾಗಿದೆ.