ವಿಘ್ನೇಶ್‌ ಎಂ. ಭೂತನಕಾಡು

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗಿನಲ್ಲಿಯೂ ಬಿಸಿಲಿನ ಪ್ರಮಾಣ ಏರುತ್ತಿದ್ದರೂ ಜಿಲ್ಲೆಯ ವಿವಿಧ ಭಾಗಗಳಲ್ಲಿ ಇತ್ತೀಚೆಗೆ ಮಳೆ ಸುರಿದ ಹಿನ್ನೆಲೆಯಲ್ಲಿ ಜಿಲ್ಲೆಯ ಅರಣ್ಯ ಪ್ರದೇಶ ಬೇಸಗೆಯಲ್ಲೂ ಹಸಿರಿನಿಂದ ಕಂಗೊಳಿಸಿಸುತ್ತಿದೆ. ಇದರಿಂದ ಈ ಬಾರಿ ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು ಆತಂಕ ಸ್ವಲ್ಪ ದೂರವಾಗಿದೆ. ಅಲ್ಲದೆ ಅರಣ್ಯ ಪ್ರದೇಶದಲ್ಲಿ ಸಂಚರಿಸುವ ಸಂದರ್ಭ ಪ್ರಯಾಣ ಅನುಭವ ವಾಹನ ಸವಾರರಿಗೆ ಮುದ ನೀಡುತ್ತಿದೆ.

ಸಾಮಾನ್ಯವಾಗಿ ಬೇಸಗೆ ಅವಧಿಯಲ್ಲಿ ಕಾಡಿನ ಪ್ರದೇಶದಲ್ಲಿ ಮರ ಗಿಡಗಳು ಸೊರಗುವುದರೊಂದಿಗೆ ಅರಣ್ಯ ಪ್ರದೇಶ ಬರಡಾಗಿರುತ್ತದೆ. ಇದರಿಂದ ಕಾಡ್ಗಿಚ್ಚು ಸಂಭವಿಸುವ ಆತಂಕ ಹೆಚ್ಚಾಗಿರುತ್ತದೆ. ಇದರಿಂದಲೇ ಪ್ರತಿ ಬಾರಿ ಅರಣ್ಯ ಇಲಾಖೆಯಿಂದ ಬೇಸಗೆ ಆರಂಭವಾಗುತ್ತಿದ್ದಂತೆ ಬೆಂಕಿ ರೇಖೆಯನ್ನು ಮಾಡಿ ಕಾಡ್ಗಿಚ್ಚು ಉಂಟಾಗದಂತೆ ಮುಂಜಾಗ್ರತೆ ವಹಿಸಲಾಗುತ್ತದೆ. ಆದರೂ ಕೆಲ ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚುವ ಮೂಲಕ ಸಸ್ಯ ಹಾಗೂ ಪ್ರಾಣಿ ಸಂಕುಲದ ಜೀವಕ್ಕೆ ಮಾರಕವಾಗಿದ್ದಾರೆ.

ಬಹುತೇಕ ಸಂದರ್ಭದಲ್ಲಿ ದ್ವೇಷ ತೀರಿಸಿಕೊಳ್ಳುವ ಸಲುವಾಗಿಯೇ ಬೆಂಕಿ ಹಾಕುವುದುಂಟು. ಆದರೆ ಮಳೆ ಬಿದ್ದು ಅರಣ್ಯ ತೇವವಾದರೆ ಇದ್ಯಾವುದಕ್ಕೂ ಅವಕಾಶವೇ ಇಲ್ಲ. ಹೀಗಾಗಿ ಮಳೆಯಿಂದ ನಾಡಿಗಷ್ಟೇ ಅಲ್ಲ. ಅರಣ್ಯವೂ ಹರ್ಷಪಡುತ್ತದೆ. ಅಂತಹ ವಾತಾವರಣ ಇದೀಗ ಕೊಡಗಿನ ಅರಣ್ಯ ಪ್ರದೇಶದಲ್ಲಿ ಕಂಡುಬರುತ್ತಿದೆ.


ಜಿಲ್ಲೆಯ ಆನೆಕಾಡು ಅರಣ್ಯ, ಹಾರಂಗಿ, ಚಿಕ್ಲಿಹೊಳೆ ಅರಣ್ಯ ಪ್ರದೇಶ ಸೇರಿದಂತೆ ವಿವಿಧ ಕಡೆಗಳಲ್ಲಿ ಮಳೆಯಾದ ಹಿನ್ನೆಲೆಯಲ್ಲಿ ಅರಣ್ಯದಲ್ಲಿ ಹಸಿರಿನ ವಾತಾವರಣ ಮುದ ನೀಡುತ್ತಿದೆ. ಏಪ್ರಿಲ್ ತಿಂಗಳಲ್ಲಿ ಅಷ್ಟಾಗಿ ಬೇಸಗೆ ಮಳೆ ಆಗಿರಲಿಲ್ಲ. ಅಂದಿನ ದಿನದಲ್ಲಿ ಕಾಡು ಸಂಪೂರ್ಣ ಒಣಗಿ ಹೋಗಿ ಗಾಡ್ಗಿಚ್ಚು ವಾತಾವರಣವಿತ್ತು. ಇದರಿಂದ ಅರಣ್ಯ ಇಲಾಖೆಯಿಂದ ಮಡಿಕೇರಿ-ಕುಶಾಲನಗರ ರಾಷ್ಟ್ರೀಯ ಹೆದ್ದಾರಿಯ ಆನೆಕಾಡು ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಅರಣ್ಯ ಬದಿಯಲ್ಲೇ ಗಸ್ತು ತಿರುಗುವುದರೊಂದಿಗೆ ಕಾಡ್ಗಿಚ್ಚು ಸಂಭವಿಸಂತೆ ಮುನ್ನಚ್ಚೆರಿಕೆ ಕ್ರಮ ವಹಿಸಿದ್ದರು. ಆದರೆ ಇದೀಗ ಅರಣ್ಯದಲ್ಲಿ ಹಸಿರು ಕಂಡುಬಂದಿದ್ದು, ಅರಣ್ಯ ಇಲಾಖೆಯ ಸಿಬ್ಬಂದಿ ನಿಟ್ಟುಸಿರು ಬಿಡುವಂತಾಗಿದೆ.

ಅರಣ್ಯದಲ್ಲಿ ಬಿದಿರು ಕೂಡ ಚಿಗುರೊಡೆದು ಹಸಿರಾಗಿದ್ದು, ಕಾಡಾನೆಗಳಿಗೂ ಕೂಡ ಆಹಾರ ಅರಣ್ಯದಲ್ಲೇ ದೊರಕುವಂತಹ ವಾತಾವರಣ ಸೃಷ್ಟಿಯಾಗಿದೆ. ಇದಲ್ಲದೆ ಹಲವು ಜಾತಿ ಗಿಡ ಮರಗಳು ಕೂಡ ಹಸಿರಿನಿಂದ ನಳನಳಿಸುತ್ತಿವೆ. ಇದರಿಂದ ಕಾಡುಪ್ರಾಣಿಗಳಿಗೆ ಅರಣ್ಯದಲ್ಲೇ ಪೂರಕ ವಾತಾವರಣ ಸೃಷ್ಟಿಯಾದಂತಿದೆ. ಆದರೆ ಅರಣ್ಯದಲ್ಲಿ ತೇಗದ ಮರಗಳು, ಲಾಂಟನಾ ಸಂಪೂರ್ಣ ಹಬ್ಬಿರುವುದರಿಂದ ಇತರೆ ಗಿಡ ಮರಗಳು ಬೆಳೆಯಲು ಸಮಸ್ಯೆಯಾಗಿದೆ.

ಇದೀಗ ಮೇ ತಿಂಗಳಲ್ಲಿ ಮತ್ತೆ ಮಳೆಗಾಗುವ ಸಂಭವವಿದ್ದು, ಈ ಬಾರಿ ಕಾಡ್ಗಿಚ್ಚಿನ ಸಮಸ್ಯೆ ಕಂಡುಬರುವುದಿಲ್ಲ. ಅರಣ್ಯ ಪ್ರದೇಶದಲ್ಲಿ ತೇವಾಂಶ ಇರುವುದರೊಂದಿಗೆ ಹುಲ್ಲು ಕೂಡ ಚಿಗುರೊಡೆದು, ಜಿಂಕೆ ಮತ್ತಿತರ ಪ್ರಾಣಿಗಳಿಗೂ ಆಹಾರಕ್ಕೆ ಪೂರಕವಾದ ವಾತಾವರಣ ಸೃಷ್ಟಿಯಾಗಿದೆ. ಒಟ್ಟಿನಲ್ಲಿ ಅರಣ್ಯ ಪ್ರದೇಶ ಈಗ ಹಸಿರಾಗಿದ್ದು, ಬೇಸಗೆಯಲ್ಲೂ ಕೂಡ ಸಮೃದ್ಧವಾದ ಪರಿಸರ ಕಂಡುಬಂದಿದೆ.

ಭೀಕರ ಕಾಡ್ಗಿಚ್ಚು ಸಂಭವಿಸಿತ್ತು:

ಕೊಡಗಿನ ಕುಶಾಲನಗರ ಸಮೀಪದ ಆನೆಕಾಡು ಮೀಸಲು ಅರಣ್ಯದಲ್ಲಿ ಬೇಸಗೆ ಸಂದರ್ಭದಲ್ಲಿ (ಮುಖ್ಯವಾಗಿ 2017, 2018, 2019ರ ಮಾರ್ಚ್‌ನಲ್ಲಿ) ಭೀಕರ ಕಾಡ್ಗಿಚ್ಚು ಕಾಣಿಸಿಕೊಂಡಿತ್ತು. ಈ ಅವಘಡದಿಂದಾಗಿ 70 ಎಕರೆಗಿಂತಲೂ ಹೆಚ್ಚು ಅರಣ್ಯ ಪ್ರದೇಶವು ಬೆಂಕಿಗೆ ಆಹುತಿಯಾಗಿ, ಅಪಾರ ಜೀವ ವೈವಿಧ್ಯ ನಾಶವಾಗಿತ್ತು. ಇದರಿಂದ ಬೇಸಗೆ ಅವಧಿಯಲ್ಲಿ ಕೊಡಗಿನಲ್ಲಿ ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚಿ ಸಂಭವಿಸುವ ಭೀತಿ ಕೂಡ ಹೆಚ್ಚಾಗಿತ್ತು.

ವಾರಕ್ಕೊಮ್ಮೆ ಪರಿಶೀಲನೆ!

ಬೇಸಗೆ ಅವಧಿಯಾಗಿರುವುದರಿಂದ ಆಹಾರ ಹಾಗೂ ನೀರು ಹುಡುಕಿಕೊಂಡು ಕಾಡಾನೆ ಸೇರಿದಂತೆ ಇತರೆ ಪ್ರಾಣಿಗಳು ನಾಡಿಗೆ ಬರುತ್ತವೆ. ಆದ್ದರಿಂದ ಅರಣ್ಯದಲ್ಲೇ ಪ್ರಾಣಿಗಳಿಗೆ ಪೂರಕವಾದ ನೀರು ಸಿಗುವಂತಾಗುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯಿಂದ ವಾರಕ್ಕೊಮ್ಮೆ ಅರಣ್ಯ ಇಲಾಖೆಯ ಸಿಬ್ಬಂದಿ ಗಸ್ತು ತಿರುಗಿ ಅರಣ್ಯದಲ್ಲಿನ ಕೆರೆಯಲ್ಲಿ ನೀರಿನ ಮಟ್ಟ ಪರಿಶೀಲಿಸಿ ಕಟ್ರೋಲ್ ರೂಂಗೆ ಮಾಹಿತಿ ನೀಡುತ್ತಾರೆ. ನೀರು ಕಡಿಮೆ ಇದ್ದರೆ ಇಲಾಖೆಯಿಂದ ಕೆರೆಗೆ ನೀರು ತುಂಬಿಸಲಾಗುತ್ತದೆ. ಸದ್ಯಕ್ಕೆ ಕೊಡಗು ಜಿಲ್ಲೆಯ ಅರಣ್ಯ ಪ್ರದೇಶದಲ್ಲಿರುವ ಕೆರೆಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರಿದೆ. ಯಾವುದೇ ಸಮಸ್ಯೆ ಇಲ್ಲ ಎನ್ನುತ್ತಾರೆ ಅರಣ್ಯಾಧಿಕಾರಿಗಳು.ಇದೀಗ ಮಳೆಯಾಗಿರುವುದರಿಂದ ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು ಸಮಸ್ಯೆ ಸಂಭವಿಸುವುದು ವಿರಳ. ಈಗಾಗಲೇ ಕೆಲವು ಕಡೆ ಉತ್ತಮ ಮಳೆಯಾಗಿರುವುದರಿಂದ ಅರಣ್ಯ ಪ್ರದೇಶ ಹಸಿರಾಗಿದೆ. ಅರಣ್ಯ ಪ್ರದೇಶದಲ್ಲಿನ ಕೆರೆಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರಿದೆ. ಸದ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ. ಇತ್ತೀಚೆಗೆ ಎರಡು ಹೊಸ ಕೆರೆಗಳನ್ನು ನಿರ್ಮಿಸಲಾಗಿದೆ. ನೀರಿನ ಪ್ರಮಾಣ ಎಷ್ಟಿದೆ ಎಂಬ ಬಗ್ಗೆ ತಿಳಿಯಲು ನಮ್ಮ ಸಿಬ್ಬಂದಿ ಗಸ್ತು ತೆರಳಿ ಮಾಹಿತಿ ನೀಡುತ್ತಾರೆ.

-ಅಭಿಷೇಕ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಮಡಿಕೇರಿಮಾರ್ಚ್ ತಿಂಗಳವರೆಗೂ ಮಳೆಯನ್ನೇ ಕಾಣದೆ ಒಣಗಿ ಹೋಗಿದ್ದ ಭೂಮಿ ಏಪ್ರಿಲ್‌ನಲ್ಲಿ ಬಂದ ಹದವಾದ ಮಳೆಯಿಂದಾಗಿ ಪುನಃ ಚಿಗುರಿ ನಿಂತಿವೆ. ಇದೀಗ ಬೇಸಗೆಯಲ್ಲೂ ಕೂಡ ಅರಣ್ಯ ಪ್ರದೇಶ ಹಚ್ಚ ಹಸಿರಿನಿಂದ ಕೂಡಿದ್ದು, ರಾಷ್ಟ್ರೀಯ ಹೆದ್ದಾರಿ ಆನೆಕಾಡು ಹಾಗೂ ಹಾರಂಗಿ ರಸ್ತೆ ಸಂಚರಿಸುವಾಗ ಸುಂದರ ಅನುಭವ ನೀಡುತ್ತಿದೆ. ಕಳೆದ ತಿಂಗಳಿನಲ್ಲಿ ಸುರಿದ ಮಳೆಯಿಂದಾಗಿ ಒಣಗಿ ಬೆಂಗಾಡಾಗಿದ್ದ ಕಾಡು, ಮರ, ಗಿಡಗಳು ಚಿಗುರಿ ಹಸಿರಿನಿಂದ ನಳನಳಿಸುತ್ತಿದ್ದು, ಅದರ ನಡುವೆ ಈ ಗುಲ್ಮೊಹರ್ ಮರಗಳು ಮತ್ತಷ್ಟು ಆಕರ್ಷಣೀಯವಾಗಿ ಪ್ರಕೃತಿ ಪ್ರಿಯರ ಗಮನ ಸೆಳೆಯುತ್ತಿವೆ.-ಕವಿತಾ ವಿ. ರಾಮ್, ಮಡಿಕೇರಿ