ಬಂಡೀಪುರದಲ್ಲಿ ಮಳೆ: ಬೆಂಕಿಯಿಂದ ಕಾಡು ಪಾರು

| Published : May 16 2024, 12:45 AM IST

ಸಾರಾಂಶ

ಬೇಸಿಗೆಯ ರಣ ಬಿಸಿಲಿಗೆ ಒಣಗಿ ತರಗಾಗೋಗಿದ್ದ ಬಂಡೀಪುರ ಅರಣ್ಯ ಇತ್ತೀಚೆಗೆ ಬಿದ್ದ ಮಳೆಯಿಂದ ಬಂಡೀಪುರ ಕಾಡು ಬೆಂಕಿಯಿಂದ ಬಚಾವ್ ಆಗಿದೆ!

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಬೇಸಿಗೆಯ ರಣ ಬಿಸಿಲಿಗೆ ಒಣಗಿ ತರಗಾಗೋಗಿದ್ದ ಬಂಡೀಪುರ ಅರಣ್ಯ ಇತ್ತೀಚೆಗೆ ಬಿದ್ದ ಮಳೆಯಿಂದ ಬಂಡೀಪುರ ಕಾಡು ಬೆಂಕಿಯಿಂದ ಬಚಾವ್ ಆಗಿದೆ!

ಬೇಸಿಗೆಯಲ್ಲಿ ಕಾಡನ್ನು ಅರಣ್ಯ ಇಲಾಖೆ ಸಿಬ್ಬಂದಿ ಹಗಲು ರಾತ್ರಿ ಎನ್ನದೆ ಕಳೆದ 3 ತಿಂಗಳಿಂದ ಕಾಯುತ್ತಿದ್ದರು. ಅಧಿಕಾರಿ ಹಾಗೂ ಸಿಬ್ಬಂದಿ ವರುಣ ದೇವನ ಕೃಪೆಯಿಂದ ನಿಟ್ಟುಸಿರು ಬಿಟ್ಟಿದ್ದಾರೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಎಲ್ಲಾ ವಲಯಗಳಲ್ಲಿ ಮಳೆ ಬಿದ್ದಿರುವ ಕಾರಣ ಬೆಂಕಿಯಿಂದ ಕಾಡು ಪಾರಾಯಿತ್ತಲ್ಲ ಎಂಬ ಖುಷಿಯಲ್ಲಿದ್ದಾರೆ. ಕಳೆದ ವಾರದಿಂದೀಚೆಗೆ ಬಿದ್ದ ಮಳೆಗೆ ಬಂಡೀಪುರ ಅರಣ್ಯದ ಕೆಲ ಕೆರೆ ಕಟ್ಟೆಗಳಿಗೆ ನೀರು ಬಂದಿದೆ.

ಆದರೆ ಬಹುತೇಕ ವಲಯಗಳಲ್ಲಿ ಮಳೆ ಬಿದ್ದರೂ ಕೆರೆ ಕಟ್ಟೆಗಳಿಗೆ ನೀರು ಬಂದಿಲ್ಲ. ಸದ್ಯಕ್ಕೆ ಕೆರೆ ಕಟ್ಟೆಗಳಿಗೆ ನೀರು ಬರದಿದ್ದರೂ ಪರವಾಗಿಲ್ಲ ಕಾಡು ಹಾಗೂ ಪ್ರಾಣಿಗಳು ಬೆಂಕಿಯಿಂದ ಪಾರಾಗಿವೆ. ಸೋಲಾರ್ ಮೂಲಕ ಕೆರೆಗಳಿಗೆ ನೀರು ತುಂಬಿಸುವ ಕಾರಣ ಬಂಡೀಪುರ ವನ್ಯಜೀವಿಗಳಿಗೆ ನೀರಿನ ಹಾಹಾಕಾರ ಬೇಸಿಗೆಯಲ್ಲೂ ಅಷ್ಟಾಗಿ ಇರಲಿಲ್ಲ.

ವನ್ಯಜೀವಿಗಳು ಬಂಡೀಪುರದತ್ತ ವಾಪಸ್‌:

ನೀರಿನ ಹಾಹಾಕಾರ ಇಲ್ಲದಿದ್ದರೂ ಮೇವಿಗಾಗಿ ಕಬಿನಿ ಹಿನ್ನೀರು ಹಾಗೂ ಮುದುಮಲೈ, ವೈನಾಡ್ ಗಡಿಯತ್ತ ವಲಸೆ ಹೋಗಿದ್ದ ವನ್ಯಜೀವಿಗಳು ಈಗ ಮಳೆ ಬಿದ್ದ ಕಾರಣ ಬಂಡೀಪುರ ಸಂರಕ್ಷಿತ ಪ್ರದೇಶದತ್ತ ವಾಪಸ್ ಆಗುತ್ತಿದೆ.

ಬೆಂಕಿ ಬಿದ್ದಿತ್ತು:

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ಕರಿಕಲ್ ಗುಡ್ಡದಲ್ಲಿ ಕಿಡಿಗೇಡಿಗಳ ಬೆಂಕಿಗೆ ಸುಮಾರು ೧೦ ಎಕರೆ, ಗೋಪಾಲಸ್ವಾಮಿ ಬೆಟ್ಟ ವಲಯದಲ್ಲಿ ೨೦ ಎಕರೆ ಅರಣ್ಯ ಪ್ರದೇಶ ಬೆಂಕಿಗಾಹುತಿಯಾಗಿದ್ದು ಬಿಟ್ಟರೆ ಉಳಿದೆಲ್ಲೂ ಬೆಂಕಿ ಬಿದ್ದಿಲ್ಲ.ಮದ್ದೂರು ಅರಣ್ಯದಲ್ಲಿ ಬೆಂಕಿ ಹಚ್ಚಿದ್ದ ೨ಮಂದಿ ಆರೋಪಿಗಳನ್ನು ಮದ್ದೂರು ಅರಣ್ಯಾಧಿಕಾರಿ ಬಿ.ಎಂ. ಮಲ್ಲೇಶ್‌ ಎಸಿಎಫ್‌ ಜಿ. ರವೀಂದ್ರ ಮಾರ್ಗದಲ್ಲಿ ಹೆಡೆ ಮುರಿ ಕಟ್ಟಿ ಜೈಲಿಗೆ ಅಟ್ಟುವಲ್ಲಿ ಸಫಲರಾಗಿದ್ದಾರೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೆಂಕಿ ಬೀಳದ ಹಾಗೆ ಕಾಪಾಡಿದ ಅರಣ್ಯ ಸಿಬ್ಬಂದಿಯ ಶ್ರಮ ಕಂಡ ವರುಣ ದೇವ ಕೃಪೆ ತೋರಿದ ಕಾರಣ ಬಂಡೀಪುರ ಈ ಬಾರಿ ಬೆಂಕಿಯಿಂದ ಬಚಾವ್ ಆಗಿದೆ.

ಬಂಡೀಪುರ ಅರಣ್ಯದಲ್ಲಿ ಬೇಸಿಗೆಯಲ್ಲಿ ಕಾಡು ಕಾಪಾಡುವಲ್ಲಿ ಅರಣ್ಯ ಸಿಬ್ಬಂದಿ ಪಾತ್ರ ಅಪಾರ. ಮದ್ದೂರು, ಗೋಪಾಲಸ್ವಾಮಿ ವಲಯದಲ್ಲಿ ಅಲ್ಪ ಪ್ರಮಾಣದ ಬೆಂಕಿ ಬಿದ್ದಿದ್ದು ಬಿಟ್ಟರೆ, ಬೆಂಕಿ ಎಲ್ಲೂ ಬೀಳಲಿಲ್ಲ. ಮಳೆರಾಯನ ಆಗಮನದಿಂದ ಬಂಡೀಪುರ ಸೇಫಾಗಿದೆ. ಕೆಲವು ಚಿಗುರು ಬರುತ್ತಿದೆ.ಮುಂದಿನ ಡಿಸೆಂಬರ್‌ ಏನು ಸಮಸ್ಯೆ ಇಲ್ಲ.

ಪ್ರಭಾಕರನ್‌ ಎಸ್‌ಡಿಸಿಎಫ್, ಬಂಡೀಪುರ