ಸಾರಾಂಶ
- ಜಗಳೂರು ತಾಲೂಕಿನಲ್ಲಿ ಧಾರಾಕಾರ ಮಳೆ, ಶಾಲೆ ಕಾಂಪೌಂಡ್ ಕುಸಿತ - ದಾವಣಗೆರೆ ಸೇಂಟ್ ಮೇರಿಸ್ ಕಾಲೇಜಿನ ತೆಂಗಿನ ಮರಕ್ಕೆ ಸಿಡಿಲು ಬಡಿದು ಬೆಂಕಿ
- ಹೊನ್ನಾಳಿ, ಚನ್ನಗಿರಿ ತಾಲೂಕುಗಳಲ್ಲೂ ಸಣ್ಣ ಪ್ರಮಾಣದಲ್ಲಿ ಮಳೆ- - -
ಕನ್ನಡಪ್ರಭ ವಾರ್ತೆ ದಾವಣಗೆರೆ ಭಾರಿ ಗುಡುಗು, ಸಿಡಿಲು, ಮಿಂಚಿನ ಆರ್ಭಟದೊಂದಿಗೆ ದಾವಣಗೆರೆ, ಹರಿಹರ, ಜಗಳೂರು ತಾಲೂಕಿನಲ್ಲಿ ಮಂಗಳವಾರ ಸಂಜೆಯಿಂದ ಮಳೆ ಸುರಿಯುತ್ತಿದೆ. ಬರಪೀಡಿತ ಜಗಳೂರು ತಾಲೂಕಿನ ನೆಲ ತಣಿಯುವಂತೆ ಜೋರು ಮಳೆ ಆಗಿರುವುದು ರೈತರ ಖುಷಿಗೆ ಕಾರಣವಾಗಿದೆ.ಜಗಳೂರು ತಾಲೂಕಿನಲ್ಲಿ ಬೆಳಗ್ಗೆಯಿಂದಲೇ ಉತ್ತಮ ಮಳೆಯಾಗಿದೆ. ಮಳೆ ಹೊಡೆತಕ್ಕೆ ಶಾಲಾ ಕಾಪಾಂಡ್ ಕುಸಿದುಬಿದ್ದರೆ, ತಾಲೂಕಿನ ವಿವಿಧೆಡೆ ಚೆಕ್ ಡ್ಯಾಂಗಳಿಗೆ ನೀರು ಹರಿದುಬಂದಿದೆ. ಎಲೆಬಳ್ಳಿ ತೋಟಗಳಿಗೆ ಭಾಗಶಃ ಹಾನಿಯಾಗಿದೆ. ಒಟ್ಟಾರೆ ಮಳೆಯಾಶ್ರಿತ ತಾಲೂಕಿನಲ್ಲಿ ಕೃಷಿ ಚಟುವಟಿಕೆ ಚುರುಕುಗೊಳ್ಳುವಂತಾಗಿದೆ.
ದಾವಣಗೆರೆ ನಗರದ ವಿನೋಬ ನಗರ 4ನೇ ಮುಖ್ಯರಸ್ತೆ, 1ನೇ ಅಡ್ಡ ರಸ್ತೆಯ ಸೇಂಟ್ ಮೇರಿಸ್ ಶಾಲೆ ಹಾಗೂ ಕಾಲೇಜು ಆವರಣದಲ್ಲಿ ತೆಂಗಿನ ಮರಕ್ಕೆ ಸಂಜೆ 5.30ರ ವೇಳೆಗೆ ಸಿಡಿಲು ಬಡಿದು ತೆಂಗಿನ ಮರದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ವಿದ್ಯುತ್ ಸಂಪರ್ಕವೂ ಕಡಿತಗೊಂಡಿದೆ. ಬೆಸ್ಕಾಂ ಅಧಿಕಾರಿಗಳು, ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದರು. ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದರು.ಸಂಜೆ 4 ಗಂಟೆಯಿಂದಲೇ ದಟ್ಟಮೋಡಗಳು ಆವರಿಸಿ, ತಂಪು ಗಾಳಿ ಬೀಸತೊಡಗಿತ್ತು. ಅನಂತರ 5 ಗಂಟೆಯಿಂದ ಸಿಡಿಲು, ಗುಡುಗಿನ ಆರ್ಭಟದೊಂದಿಗೆ ಶುರುವಾದ ಮಳೆ ರಭಸವಾಗಿ ಸುರಿಯತೊಡಗಿತು. ಸಂಜೆ ಕೆಲಸ ಮುಗಿಸಿ, ಮನೆಗೆ ಹೋಗುವ ಸಮಯಕ್ಕೆ ಸರಿಯಾಗಿ ಮಳೆ ಆಗಿದ್ದರಿಂದ ಜನರು ಪರದಾಡಬೇಕಾಯಿತು. ವ್ಯಾಪಾರ ವಹಿವಾಟು, ಮಾರುಕಟ್ಟೆ ಪ್ರದೇಶದಲ್ಲಿ ಜೋರು ಮಳೆಯಿಂದಾಗಿ ಜನಸಂಚಾರ, ವಾಹನ ಸಂಚಾರವೇ ಸ್ತಬ್ಧವಾಯಿತು.
ಜನರು ಮನೆಗೆ ಹೋಗಲು ಆಟೋ ರಿಕ್ಷಾಗಳ ಮೊರೆ ಹೋಗಬೇಕಾಯಿತು. ಆಟೋ ರಿಕ್ಷಾಗಳಲ್ಲಿ ಚಾಲಕರು ಮೊದಲೇ ಜನರ ಸುಲಿಗೆ ಮಾಡುತ್ತಾರೆಂಬ ಅಪವಾದವಿದೆ. ಅಂಥದ್ದರಲ್ಲಿ ಮಳೆಯನ್ನೇ ನೆಪ ಮಾಡಿಕೊಂಡು, ಕೆಲವೇ ಕಿಮೀ ದೂರಕ್ಕೆ ಹೋಗಿ ಬಿಡಲು ₹100, ₹150 ವರೆಗೂ ಕೇಳಿರುವ ಬಗ್ಗೆ ಗ್ರಾಹಕರಿಂದ ದೂರು ಕೇಳಿಬರುತ್ತಿವೆ.ಒಟ್ಟಾರೆ ಕಳೆದ ಕೆಲ ದಿನಗಳಿಂದ ನೀರಿಲ್ಲದೇ ಒಣಗಿದ್ದ ಭೂರಮೆಗೆ ತಣಿಸುವಂತೆ ಮಳೆಯಾಗುತ್ತಿದೆ. ಸೋಮವಾರ ಸಂಜೆ ಸಹ ಜೋರು ಮಳೆಯಾಗಿ ನಂತರ ನಿಂತಿತ್ತು. ಮಂಗಳವಾರ ರಾತ್ರಿಯೂ ದಟ್ಟ ಮೋಡಗಳು ಕಂಡುಬಂದವು. ಹೊನ್ನಾಳಿ, ಚನ್ನಗಿರಿ ತಾಲೂಕಿನಲ್ಲೂ ಸಣ್ಣ ಪ್ರಮಾಣದಲ್ಲಿ ಮಳೆಯಾಗಿದೆ. ದಾವಣಗೆರೆ, ಜಗಳೂರು, ಹರಿಹರದ ಕೆಲ ಭಾಗದಲ್ಲಿ ಜೋರು ಮಳೆಯಾಗಿದೆ. ಹರಿಹರದಲ್ಲಿ ಮಂಗಳವಾರ ರಾತ್ರಿ 7 ರಿಂದ ಪ್ರಾರಂಭವಾಗಿ ರಾತ್ರಿ 8 ರವರೆಗೆ ಮಳೆಯಾಯಿತು.
- - --13ಕೆಡಿವಿಜಿ18, 19:
ದಾವಣಗೆರೆ ವಿನೋಬ ನಗರದಲ್ಲಿ ತೆಂಗಿನ ಮರಕ್ಕೆ ಸಿಡಿಲು ಬಡಿದು, ಬೆಂಕಿ ಹೊತ್ತಿರುವುದು.