- ಅಡಕೆ, ಪಪ್ಪಾಯಿ, ಬಾಳೆ ತೋಟಗಳು ನಾಶ । ನೂರಾರು ಮರಗಳು ಧರೆಗೆ

- - -

ಕನ್ನಡಪ್ರಭ ವಾರ್ತೆ ಜಗಳೂರು

ತಾಲೂಕಿನಾದ್ಯಂತ ಸೋಮವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಕೃತ್ತಿಕಾ ಮಳೆ ಜನಜೀವನ ತಲ್ಲಣಗೊಳಿಸಿದೆ. ಬಿರುಗಾಳಿ ಆರ್ಭಟಕ್ಕೆ ತಾಲೂಕಿನಾದ್ಯಂತ ೧೦ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಹಾಗೂ 100ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ. ತಾಲೂಕಿನಲ್ಲಿ ಒಟ್ಟು ಶೇ.೨೦.೫೪ ಮಿ.ಮೀ.ನಷ್ಟು ಮಳೆಯಾಗಿದ್ದು, ಲಕ್ಷಾಂತರ ರು. ಮೌಲ್ಯದ ಬೆಳೆ ಹಾನಿಯಾಗಿದೆ.

​ಪಟ್ಟಣದ ಪ್ರತಿಷ್ಟಿತ ಬಡಾವಣೆಯಾದ ಜೆ.ಡಿ.ಲೇಔಟ್‌ನಲ್ಲಿ ಪುರಸಭೆಯ ಅವೈಜ್ಞಾನಿಕ ಚರಂಡಿ ಕಾಮಗಾರಿಯ ಅಸಲಿ ರೂಪ ಬಯಲಾಗಿದೆ. ಚರಂಡಿಯನ್ನು ರಸ್ತೆಗಳಿಗಿಂತ ಒಂದೆರಡು ಅಡಿ ಎತ್ತರಕ್ಕೆ ನಿರ್ಮಿಸಿ, ಸರಿಯಾಗಿ ವಾಟ ಮಾಡದೇ ಇರುವ ಜೊತೆಗೆ ಮೇಲ್ಭಾಗ ಮುಚ್ಚಿರುವುದರಿಂದ ಮಳೆನೀರು ಸರಾಗವಾಗಿ ಹರಿಯಲು ಸಾಧ್ಯವಾಗಿಲ್ಲ. ​ಪರಿಣಾಮ ಇಡೀ ಬೀದಿಯ ಕೊಳಚೆ ನೀರು ಡಾ.ಶಾಂತಪ್ಪ ಎಂಬವರ ಮನೆ ಸೇರಿದಂತೆ ಹತ್ತಾರು ಮನೆಗಳ ಒಳಗೆ ನುಗ್ಗಿದೆ. ಕಾಂಪೌಂಡ್ ಒಳಗೆ ೨-೩ ಅಡಿ ನೀರು ನಿಂತಿದ್ದು, ಬೈಕ್‌ಗಳು ಜಲಾವೃತವಾಗಿವೆ. ಶೀಘ್ರವೇ ಸರಿಯಾಗಿ ಚರಂಡಿ ವಾಟ ಮಾಡಿ ನೀರು ಹರಿಯುವಂತೆ ಮಾಡಬೇಕು. ಇಲ್ಲದಿದ್ದರೆ ಜಿ.ಪಂ. ಹಾಗೂ ಪಟ್ಟಣ ಪಂಚಾಯಿತಿ ಮುಂಭಾಗ ಧರಣಿ ಮಾಡಲಾಗುತ್ತದೆ ಎಂದು ಬಡಾವಣೆ ಮಹಿಳೆಯರು ಎಚ್ಚರಿಸಿದ್ದಾರೆ.


​ಬಿರುಗಾಳಿ ರೌದ್ರಾವತಾರ:

​ಮರೇನಹಳ್ಳಿಯಲ್ಲಿ ಬಿರುಗಾಳಿಗೆ ದೊಡ್ಡ ಮರ ವಿದ್ಯುತ್ ತಂತಿ ಮೇಲೆ ಬಿದ್ದಿದ್ದರಿಂದ ೫ ವಿದ್ಯುತ್ ಕಂಬಗಳು ನೆಲಸಮವಾಗಿವೆ. ತಾಲೂಕಿನಾದ್ಯಂತ ಒಟ್ಟು ೧೦ ಕಂಬಗಳು ಉರುಳಿವೆ. ​ಕೆಳಗೋಟೆಯ ಸರ್ಕಾರಿ ಶಾಲೆ ಮುಂಭಾಗದಲ್ಲಿದ್ದ ಬೃಹತ್ ಬೇವಿನ ಮರ ನಡುರಸ್ತೆಗೆ ಬಿದ್ದು ವಾಹನ ಸಂಚಾರ ಸ್ಥಗಿತಗೊಂಡಿತ್ತು. ಗ್ರಾಮಸ್ಥರೇ ಸ್ವಪ್ರೇರಣೆಯಿಂದ ಮರ ತೆರವುಗೊಳಿಸಿದರು. ಇನ್ನು ​ಉದ್ದಗಟ್ಟದ ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಿಸಿಯೂಟದ ಕೊಠಡಿಯ ಮೇಲೆ ಮರ ಬಿದ್ದು, ಮೇಲ್ಚಾವಣಿ ಕುಸಿದುಬಿದ್ದಿದೆ.

​ಭರಮಸಮುದ್ರದಲ್ಲಿ ಇತ್ತೀಚೆಗಷ್ಟೇ ಗೃಹಪ್ರವೇಶವಾಗಿದ್ದ ಹೊಸ ಮನೆಯೊಂದರ ಮೇಲೆ ಬೃಹತ್ ಆಲದ ಮರದ ಕೊಂಬೆ ಮುರಿದುಬಿದ್ದಿದೆ. ಜಯಪ್ಪ ಎಂಬವರ ಮನೆಗೆ ಮಳೆನೀರು ನುಗ್ಗಿದೆ. ​ಅಶ್ವಿನಿ ಬಡಾವಣೆಯಲ್ಲೂ ೫ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ.

​ಬೆಳೆ ಹಾನಿ- ಸಿಡಿಲಿಗೆ ಆಕಳು ಬಲಿ:

​ಮಳೆಯೊಂದಿಗೆ ಬೀಸಿದ ಬಿರುಗಾಳಿಗೆ ತಾಲೂಕಿನಲ್ಲಿ ಅಂದಾಜು ₹೨೩ ಲಕ್ಷ ಮೌಲ್ಯದ ಬೆಳೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಯರ್ಲಕಟ್ಟೆ ಗ್ರಾಮದ ರೈತ ಬಸಪ್ಪ ಅವರ ೨ ಎಕರೆ ಅಡಕೆ ತೋಟ, ಭರಮಸಮುದ್ರದ ಶಿಲ್ಪ ಅವರ ೩ ಎಕರೆಯಲ್ಲಿದ್ದ ೧೦ಕ್ಕೂ ಹೆಚ್ಚು ಫಲ ಕೊಡುತ್ತಿದ್ದ ಅಡಕೆ ಮರಗಳು ನೆಲಕಚ್ಚಿವೆ. ಒಟ್ಟು ೧೨ ಎಕರೆ ಅಡಕೆ ನಾಶವಾಗಿದೆ. ​ದೊಣೆಹಳ್ಳಿಯ ಎಚ್.ತಿಪ್ಪೇಸ್ವಾಮಿ ಹಾಗೂ ಸಿದ್ದಮ್ಮನಹಳ್ಳಿಯ ನರಸಿಂಹಪ್ಪ ಅವರಿಗೆ ಸೇರಿದ ಒಟ್ಟು ೨೫ ಎಕರೆ ಪಪ್ಪಾಯಿ ಬೆಳೆ ಸಂಪೂರ್ಣ ನಾಶವಾಗಿದೆ. ​ಭರಮಸಮುದ್ರದ ಮನೋಜ್ ಅವರಿಗೆ ಸೇರಿದ ೫ ಎಕರೆ ಬಾಳೆ ತೋಟ ಸಹ ನೆಲಸಮವಾಗಿದೆ. ​ಹುಚ್ಚವ್ವನಹಳ್ಳಿ ಗ್ರಾಮದ ಮಹಮದ್ ಗನಿ ಅವರಿಗೆ ಸೇರಿದ ಆಕಳು ಸಿಡಿಲು ಬಡಿದು ಸಾವನ್ನಪ್ಪಿದೆ.

- - -

* ಚನ್ನಗಿರಿಯಲ್ಲಿ ಮಳೆ: ಸಿಡಿಲಿಗೆ 20 ಅಡಕೆ ಮರಗಳಿಗೆ ಹಾನಿ

ಚನ್ನಗಿರಿ: ತಾಲೂಕಿನಾದ್ಯಂತ ಸೋಮವಾರ ಸಂಜೆ ಗುಡುಗು, ಮಿಂಚಿನ ಆರ್ಭಟದೊಂದಿಗೆ 2 ಗಂಟೆಗೂ ಹೆಚ್ಚು ಕಾಲ ಮಳೆಸುರಿದು ಅವಾಂತರವನ್ನೇ ಸೃಷ್ಠಿಸಿದೆ.ತಾಲೂಕಿನ ಸಂತೆಬೆನ್ನೂರು ಗ್ರಾಮದಲ್ಲಿನ ತಿಪ್ಪೇಸ್ವಾಮಿ ಎಂಬವರ ಹೊಟೇಲ್‌ಗೆ ಸಿಡಿಲು ಬಡಿದು ಹೊಟೇಲ್‌ನಲ್ಲಿದ್ದ ಸಾಮಾನುಗಳು ಸುಟ್ಟುಹೋಗಿ ಸುಮಾರು ₹1 ಲಕ್ಷ ನಷ್ಟ ಸಂಭವಿಸಿದೆ. ಚಿಕ್ಕಗಂಗೂರು ಗ್ರಾಮದಲ್ಲಿ ಲೋಕೇಶಪ್ಪ ಎಂಬವರ ಅಡಕೆ ತೋಟದಲ್ಲಿ ಸಿಡಿಲಿನ ಹೊಡೆತಕ್ಕೆ 20 ಅಡಕೆ ಮರಗಳು ಸುಟ್ಟುಹೋಗಿವೆ.ಚನ್ನಗಿರಿ ಪಟ್ಟಣದಲ್ಲಿನ ಕೆಲವು ಮನೆಗಳಲ್ಲಿನ ಯು.ಪಿ.ಎಸ್.ಗಳು ಮಿಂಚು, ಸಿಡಿಲಿನ ವೇಗಕ್ಕೆ ಅಧಿಕ ವಿದ್ಯುತ್ ಪ್ರವಹಿಸಿ ಯುಪಿಎಸ್‌ಗಳು ಹಾನಿಗೊಳಗಾಗಿವೆ. ನಾಲ್ಕೈದು ದಿನಗಳಿಂದ ಸಂಜೆ ಆಗುತ್ತಿದ್ದಂತೆಯೇ ಮಳೆಯ ಆರ್ಭಟ ಆರಂಭವಾಗುತ್ತಿದೆ. ಮಳೆ ಇನ್ನೆಂತಹ ಅವಾಂತರಗಳನ್ನು ಸೃಷ್ಠಿಸುವುದೋ ಎಂದು ಜನರು ಆತಂಕದಲ್ಲಿ ಕಾಲ ಕಳೆಯುವಂತಾಗಿದೆ.

ಚನ್ನಗಿರಿ ತಾಲೂಕಿನ 9 ಮಳೆಮಾಪನ ಕೇಂದ್ರಗಳಲ್ಲಿ ಮಂಗಳವಾರ ದಾಖಲಾದ ಮಳೆಯ ಪ್ರಮಾಣ ಇಂತಿದೆ. ಚನ್ನಗಿರಿ ಮಳೆ ಮಾಪನ ಕೇಂದ್ರದಲ್ಲಿ 29.0 ಮಿ.ಮೀ, ದೇವರಹಳ್ಳಿ 10.2, ಕತ್ತಲಗೆರೆಯಲ್ಲಿ 53.0, ತ್ಯಾವಣಿಗೆಯಲ್ಲಿ 10.0, ಬಸವಾಪಟ್ಟಣದಲ್ಲಿ 6.2, ಜೋಳದಾಳ್ 38.8, ಸಂತೆಬೆನ್ನೂರಿನಲ್ಲಿ 5.0, ಉಬ್ರಾಣಿಯಲ್ಲಿ 12.6, ಕೆರೆಬಿಳಚಿಯಲ್ಲಿ 14.2 ಮಿ.ಮೀ. ಮಳೆಯಾಗಿದೆ. ಒಟ್ಟು 182 ಮಿ.ಮೀ. ಮಳೆಯಾಗಿದೆ ಎಂದು ತಹಸೀಲ್ದಾರ್ ಎನ್.ಜೆ.ನಾಗರಾಜ್ ತಿಳಿಸಿದ್ದಾರೆ.- - -

-19ಕೆಸಿಎನ್‌ಜಿ2:ಚಿಕ್ಕಗಂಗೂರು ಗ್ರಾಮದಲ್ಲಿ ಸೋಮವಾರ ಸಂಜೆ ಲೋಕೇಶಪ್ಪ ಎಂಬವರ ಅಡಕೆ ತೋಟದಲ್ಲಿ ಸಿಡಿಲಿನ ಹೊಡೆತಕ್ಕೆ 20 ಅಡಕೆ ಮರಗಳು ಸುಟ್ಟುಹೋಗಿವೆ.

- - -

-​೧೯ಜೆಎಲ್‌ಆರ್‌ಚಿತ್ರ೨ಎ: ಜಗಳೂರು ಪಟ್ಟಣದ ಜೆ.ಡಿ. ಬಡಾವಣೆಯ ರಸ್ತೆ ಮಳೆಯಿಂದಾಗಿ ಜಲಾವೃತವಾಗಿ ಮನೆಗಳಿಗೆ ನೀರು ನುಗ್ಗಿರುವುದು.

-೧೯ಜೆಎಲ್‌ಆರ್‌ಚಿತ್ರ೨ಬಿ: ಹುಚ್ಚವ್ವನಹಳ್ಳಿ ಗ್ರಾಮದ ಮಹಮದ್ ಗನಿ ಅವರಿಗೆ ಸೇರಿದ ಆಕಳು ಸಿಡಿಲು ಬಡಿದು ಸಾವನ್ನಪ್ಪಿದೆ.