ಸಾರಾಂಶ
(ಲೀಡ್)ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯದಲ್ಲಿ ಮುಂಗಾರು ಚುರುಕಾಗಿದ್ದು, ಕೊಡಗು, ಕರಾವಳಿ, ಮಲೆನಾಡು ಭಾಗದಲ್ಲಿ ಮಳೆ ಅಬ್ಬರಿಸುತ್ತಿದೆ. ಮನೆ ಬಿದ್ದು ಮಹಿಳೆ ಮೃತಪಟ್ಟಿದ್ದಾರೆ. ಕೊಡಗಿನ ತ್ರಿವೇಣಿ ಸಂಗಮ, ಶೃಂಗೇರಿಯ ಕಪ್ಪೆಶಂಕರ ಜಲಾವೃತಗೊಂಡಿವೆ. ಶಿರಸಿ ಸಮೀಪ ದೇವಿಮನೆ ಘಾಟಿಯಲ್ಲಿ ಗುಡ್ಡ ಕುಸಿದಿದ್ದು, ಕುಮಟಾ-ಶಿರಸಿ ಸಂಪರ್ಕ ಕಡಿತಗೊಂಡಿದೆ.ಕೊಡಗಿನಲ್ಲಿ ಭಾರಿ ಗಾಳಿ-ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಸೋಮವಾರಪೇಟೆ ತಾಲೂಕಿನ ಹಾನಗಲ್ಲು ಗ್ರಾಮದಲ್ಲಿ ಬೆಳಗಿನ ಜಾವ ಮನೆ ಬಿದ್ದು ಸುಷ್ಮಾ(29) ಅಸುನೀಗಿದ್ದಾರೆ. ಮನೆಯೊಳಗಿದ್ದ ಇಬ್ಬರು ಮಕ್ಕಳು ಹಾಗೂ ಸಹೋದರ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೃತ ಮಹಿಳೆಯನ್ನು ಕಲಬುರಗಿ ಜಿಲ್ಲೆ ಅಫ್ಜಲ್ ಪುರದವರು. ಕಳೆದೆರಡು ವರ್ಷಗಳಿಂದ ಕುಟುಂಬ ಸಮೇತ ಇಲ್ಲಿ ನೆಲೆಸಿದ್ದರು.
ಇದೇ ವೇಳೆ, ಕುಂಬೂರಿನಲ್ಲಿ ಚಲಿಸುತ್ತಿದ್ದ ಆಟೋ ಮೇಲೆ ಮರ ಬಿದ್ದು ಚಾಲಕ ಹಾಗೂ ಮಹಿಳೆ ಗಾಯಗೊಂಡಿದ್ದಾರೆ. ಮಳೆಯಿಂದಾಗಿ ಕಾವೇರಿ, ಕನ್ನಿಕೆ ಮತ್ತು ಸುಜ್ಯೋತಿ ನದಿಗಳು ತುಂಬಿ ಹರಿಯುತ್ತಿದ್ದು, ಮೂರನೇ ಬಾರಿಗೆ ತ್ರಿವೇಣಿ ಸಂಗಮ ಮುಳುಗಡೆಯಾಗಿದೆ. ಮಳೆಗೆ ಮರ ಬಿದ್ದು ವಿರಾಜಪೇಟೆ ತಾಲೂಕಿನ ಚೂರಿಯಾಲದ ದೇವಸ್ಥಾನ ಹಾನಿ ಆಗಿದೆ. ಮಂಡ್ಯ ಜಿಲ್ಲೆಯ ಕೆಆರ್‌ಎಸ್‌ಗೆ 23 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಡ್ಯಾಂನ ಸುರಕ್ಷತೆಯ ದೃಷ್ಟಿಯಿಂದ 50 ಸಾವಿರ ಕ್ಯೂಸೆಕ್ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ.ಉತ್ತರ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕುಮಟಾ-ಶಿರಸಿ ರಾಷ್ಟ್ರೀಯ ಹೆದ್ದಾರಿ ಮಾರ್ಗದ ದೇವಿಮನೆ ಘಟ್ಟದ ಕ್ಷೇತ್ರಪಾಲ ಮಂದಿರದ ಪಕ್ಕದಲ್ಲಿ ಗುಡ್ಡ ಸುಮಾರು 50 ಅಡಿ ಕುಸಿದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸ್ನಾನಘಟ್ಟ ಮುಳುಗಡೆಯಾಗಿದೆ. ಇಲ್ಲಿನ ಡ್ರೆಸ್ಸಿಂಗ್ ರೂಂ ಸ್ಥಳ ಜಲಾವೃತಗೊಂಡಿದೆ. ಲಗೇಜ್ ಕೊಠಡಿಯ ಮೆಟ್ಟಿಲುವರೆಗೆ ನದಿ ನೀರು ಬಂದಿದ್ದು, ಅಲ್ಲಿನ ಅಂಗಡಿಗಳ ವಠಾರಕ್ಕೂ ನೀರು ನುಗ್ಗಿದೆ. ಸುಬ್ರಹ್ಮಣ್ಯ-ಪಂಜ ಹೆದ್ದಾರಿಯ ಕುಮಾರಧಾರ ಬಳಿಯ ದರ್ಪಣ ತೀರ್ಥ ಹೊಳೆ ಸೇತುವೆ ಮುಳುಗಡೆಗೊಂಡಿದ್ದು, ವಾಹನ ಸಂಚಾರಕ್ಕೆ ತೊಡಕುಂಟಾಗಿದೆ.ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಯಿಂದಾಗಿ ತುಂಗಾ, ಭದ್ರಾ, ಹೇಮಾವತಿ ನದಿಗಳು ಮೈದುಂಬಿ ಹರಿಯುತ್ತಿವೆ. ತುಂಗಾ ನದಿ ಉಕ್ಕಿ ಹರಿಯುತ್ತಿದ್ದು, ಶೃಂಗೇರಿಯ ಶ್ರೀಮಠದ ತುಂಗಾನದಿ ದಡದ ಕಪ್ಪೆಶಂಕರ ದೇಗುಲ ಸಂಪೂರ್ಣ ಜಲಾವೃತಗೊಂಡಿದೆ. ಸಂಧ್ಯಾವಂದನ ಮಂಟಪಕ್ಕೂ ನೀರು ನುಗ್ಗಿದೆ. ಇನ್ನು ನೀರು ನುಗ್ಗಿದ್ದರಿಂದ ಶೃಂಗೇರಿ-ವಿದ್ಯಾರಣ್ಯಪುರ ರಸ್ತೆ ಸಂಪರ್ಕ ಕಡಿತಗೊಂಡಿದೆ. ರಾಷ್ಟ್ರೀಯ ಹೆದ್ದಾರಿ 169ರ ಶೃಂಗೇರಿ, ಆನೆಗುಂದ, ತ್ಯಾವಣ, ನೆಮ್ಮಾರು, ತನಿಕೋಡು ಬಳಿ ಗುಡ್ಡಕುಸಿತ ಉಂಟಾಗುತ್ತಿದೆ. ಹೀಗಾಗಿ, ಆನೆಗುಂದ, ನೆಮ್ಮಾರು ಎಸ್ಟೇಟ್‌ಗಳಲ್ಲಿ ಗುಡ್ಡದಂಚಿನಲ್ಲಿರುವ ಮನೆಗಳು ಕುಸಿದು ಬೀಳುವ ಅಪಾಯದಲ್ಲಿದೆ.
ಚಿಕ್ಕಮಗಳೂರು ತಾಲೂಕಿನ ತಳಿಹಳ್ಳ ಬಳಿ ಮರ ಬಿದ್ದು, ವಿದ್ಯುತ್ ಕಂಬ ತುಂಡಾಗಿದೆ. ಈ ವೇಳೆ, ಬೈಕ್ ಸವಾರರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಚಿಕ್ಕಮಗಳೂರು-ಮುತ್ತೋಡಿ ಮಾರ್ಗ ಬಂದ್ ಆಗಿದೆ. ತುಂಗಭದ್ರಾ ಜಲಾಶಯದಿಂದ 26 ಗೇಟ್‌ಗಳ ಮೂಲಕ 85,000 ಕ್ಯುಸೆಕ್ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ. ಇದರಿಂದಾಗಿ ಹಂಪಿಯ ಕೆಲ ಸ್ಮಾರಕಗಳು ಜಲಾವೃತಗೊಂಡಿವೆ. ನದಿ ಪಾತ್ರದ ಜನರು ಯಾವುದೇ ಕಾರಣಕ್ಕೂ ನದಿಗೆ ಇಳಿಯದಂತೆ ಮನವಿ ಮಾಡಲಾಗಿದೆ.ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕೊಯ್ನಾ ಜಲಾಶಯದಿಂದ 23 ಸಾವಿರ ಕ್ಯೂಸೆಕ್ ನೀರನ್ನು ಕೃಷ್ಣಾ ನದಿಗೆ ಬಿಡಲಾಗುತ್ತಿದೆ. ಒಳಹರಿವು 75 ಸಾವಿರ ಕ್ಯೂಸೆಕ್‌ಗಳಿಗೆ ಹೆಚ್ಚಿದೆ. ಅರಬ್ಬಿ ಸಮುದ್ರದಲ್ಲಿ ಗಾಳಿಯ ವೇಗ ಗಂಟೆಗೆ 45ರಿಂದ 47 ಕಿ.ಮೀ.ವರೆಗೆ ಇರುವುದರಿಂದ ಮೀನುಗಾರರು ಹಾಗೂ ಸಮುದ್ರ ತೀರ ವಾಸಿಗಳು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ. ಕೊಡಗು, ಚಿಕ್ಕಮಗಳೂರು, ಉತ್ತರ ಕನ್ನಡ, ಕಲಬುರಗಿ, ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ ಕಲಬುರಗಿ ಜಿಲ್ಲೆಗಳ ವ್ಯಾಪ್ತಿಯಲ್ಲಿ 35ಕ್ಕೂ ಹೆಚ್ಚು ಮನೆಗಳು ಕುಸಿದು ಬಿದ್ದಿವೆ.