ಸಕಲೇಶಪುರದಲ್ಲಿ ವರ್ಷಧಾರೆ

| Published : Oct 12 2023, 12:00 AM IST

ಸಾರಾಂಶ

ಸಕಲೇಶಪುರದಲ್ಲಿ ಭಾರಿ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಕನ್ನಡಪ್ರಭ ವಾರ್ತೆ ಸಕಲೇಶಪುರ ಮಲೆನಾಡು ಭಾಗದಲ್ಲಿ ಬುಧವಾರ ಮಧ್ಯಾಹ್ನ‌ದ ನಂತರ ವರುಣ ಅಬ್ಬರಿಸುತ್ತಿದ್ದು ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡು ವಾಹನ ಸವಾರರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ತಾಲೂಕಿನಲ್ಲಿ ಕಳೆದ ಮೂರು ತಿಂಗಳಿನಲ್ಲಿ ಬಿದ್ದ ಮಳೆಯ ಪ್ರಮಾಣ ಕಡಿಮೆಯಾಗಿದ್ದರಿಂದ ತಾಲೂಕನ್ನು ಸರ್ಕಾರ ಸಾಧಾರಣ ಬರಪೀಡಿತ ಪ್ರದೇಶಗಳ ಪಟ್ಟಿಯಲ್ಲಿ ಸೇರಿಸಿತ್ತು. ಆದರೆ ಕಳೆದ ಒಂದು ವಾರದಿಂದ ಆಗಾಗ ಮಳೆ ಸುರಿಯುತ್ತಿದ್ದು ಬುಧವಾರ ಮಧ್ಯಾಹ್ನದ ನಂತರ ಸತತವಾಗಿ ಪಟ್ಟಣ ಹಾಗೂ ತಾಲೂಕಿನ ವಿವಿಧೆಡೆ ಧಾರಕಾರವಾಗಿ ಮಳೆ ಸುರಿದಿದ್ದರಿಂದ ವಾಹನ ಸವಾರರು ಪರದಾಟ ಮಾಡುವಂತಾಯಿತು. ಅಶೋಕ ರಸ್ತೆ ಹಾಗೂ ಬಿ.ಎಮ್ ರಸ್ತೆಯಲ್ಲಿ ಚರಂಡಿಯ ಮೇಲೆಯೆ ಬಾರಿ ಪ್ರಮಾಣದ ನೀರು ಹರಿದಿದ್ದು ಇದರಿಂದ ಅಲ್ಲಲ್ಲಿ ಸಣ್ಣಪುಟ್ಟ ಹೊಂಡಗಳು ನಿರ್ಮಾಣವಾಯಿತು. ಒಟ್ಟಾರೆಯಾಗಿ ಮಧ್ಯಾಹ್ನದಿಂದ ಸುರಿಯುತ್ತಿರುವ ಎಡಬಿಡದ ಮಳೆ ರೈತರಿಗೆ ನೆಮ್ಮದಿ ತಂದರೆ ಜನ ಸಾಮಾನ್ಯರಿಗೆ ಬೇಸರ ತಂದಿತು. ಸಂಜೆ 4 ಗಂಟೆಯ ವೇಳೆಗೆ ಮಳೆಯಿಂದಾಗಿ ಕತ್ತಲಿನ ವಾತಾವರಣ ನಿರ್ಮಾಣವಾಗಿತ್ತು. ಹಲವು ದಿನಗಳ ನಂತರ ಸಕಲೇಶಪುರದಲ್ಲಿ ವರುಣ ಅಬ್ಬರಿಸಿದ್ದು, ಬಿಸಿಲ ಬೇಗೆಗೆ ಬೆಂದಿದ್ದ ಭೂಮಿಗೆ ಮಳೆ ತಂಪೆರೆದಿದೆ. ನಿರಂತರವಾಗಿ ಸುರಿಯುತ್ತಿರುವ ವರ್ಷಧಾರೆಗೆ ಪಟ್ಟಣ ಸಂಪೂರ್ಣ ಸ್ತಬ್ಧವಾಗಿತ್ತು.