ಸಾರಾಂಶ
Rain in Shahapur too: Lands flooded
- ಹುರಸಗುಂಡಗಿಯಲ್ಲಿ ಮನೆ ಗೋಡೆ ಕುಸಿದು ವೃದ್ಧೆ ಸಾವು । ಮನೆಗಳಿಗೆ ನುಗ್ಗಿದ ನೀರು । ಬೆಳೆ ಹಾನಿಕನ್ನಡಪ್ರಭ ವಾರ್ತೆ ಶಹಾಪುರ
ಕಳೆದೆರಡು ದಿನಗಳಿಂದ ಎಡಬಿಡದೆ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿವೆ. ನಗರದ ಹಲವು ಕಡೆ ರಸ್ತೆಗಳು ಹಾಗೂ ಜಮೀನುಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ.ತಾಲೂಕಿನಲ್ಲಿ ಧಾರಾಕಾರವಾಗಿ ಸುರಿದ ಮಳೆಗೆ 70 ವರ್ಷದ ವೃದ್ಧೆ ಬಲಿಯಾಗಿರುವ ಘಟನೆ ತಾಲೂಕಿನ ಹುರಸಗುಂಡಗಿ ಗ್ರಾಮದಲ್ಲಿ ಭಾನುವಾರ ನಡೆದಿದೆ.
ಗ್ರಾಮದ ಮಲ್ಲಿಕಾರ್ಜುನ ಅವರಿಗೆ ಮನೆ ಮುಂಭಾಗದ ಕಟ್ಟೆ ಮೇಲೆ ಮಹಿಳೆಯರ ಜೊತೆ ಮಾತನಾಡುತ್ತಾ ಕುಳಿತಿದ್ದ ವೇಳೆ ಮನೆಯ ಗೋಡೆ ಕುಸಿದು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ವೃದ್ಧೆ ಸಕೀನಾಬಿ (70) ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. ಈ ಕುರಿತು ಭೀಮರಾಯನ ಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮಳೆ ವಿವರ:
ಆ. 28 ರಂದು ಗೋಗಿ 12 ಮಿ. ಮೀ, ಭೀಮರಾಯನ ಗುಡಿ 2 ಮಿ.ಮೀ. ಮಳೆಯಾಗಿದೆ. ಆ. 29ರಂದು ದೋರನಹಳ್ಳಿ 8 ಮಿ.ಮೀ. ಮಳೆಯಾಗಿದೆ. ಆ.30 ರಂದು ಶಹಾಪುರ 13.4, ಭೀಮರಾಯನ ಗುಡಿ 15.2, ದೋರನಹಳ್ಳಿ 4 ಮಿ.ಮೀ. ಮಳೆಯಾಗಿದೆ.ಆ.31 ರಂದು ಶಹಾಪುರ 4.4, ಭೀಮರಾಯನ ಗುಡಿ 5.2, ದೋರನಹಳ್ಳಿ 6, ಗೋಗಿ 4.8 ಮಿ.ಮೀ. ಮಳೆಯಾಗಿದೆ. ಸೆ.1ರಂದು ಶಹಾಪುರ 32, ಭೀಮರಾಯನ ಗುಡಿ 33, ದೋರನಹಳ್ಳಿ 41, ಗೋಗಿ 28, ಹತ್ತಿಗೂಡೂರು 16 ಮೀಮೀ ಮಳೆಯಾಗಿದೆ. ಸೆ. 2ರಂದು ಶಹಾಪುರ 14.6, ಭೀಮರಾಯನ ಗುಡಿ 15.2, ದೋರನಹಳ್ಳಿ 15, ಗೋಗಿ 14, ಹತ್ತಿಗೂಡೂರು 12 ಮಿಮೀ ಮಳೆಯಾಗಿದೆ.
ತಾಲೂಕಿನಲ್ಲಿ ಸುರಿದ ಮಳೆಗೆ ಚಾಮನಾಳ, ರಸ್ತಾಪುರ, ವನದುರ್ಗ, ಗೋಗಿ, ವಿಭೂತಿಹಳ್ಳಿ ಸೇರಿದಂತೆ ಆರು ಮನೆಗಳು ಬಿದ್ದಿವೆ. ದೋರನಹಳ್ಳಿ ಹಾಗೂ ಹುರಸಗುಂಡಿಗಿ ಗ್ರಾಮದಲ್ಲಿ ಮನೆಗಳಿಗೆ ನೀರು ನುಗ್ಗಿವೆ.ಮಳೆಗೆ ಹೊಲಗಳಲ್ಲಿ ನೀರು ನಿಂತು ತೇವಾಂಶದಿಂದ ಬೆಳೆಗಳು ಹಾಳಾಗುತ್ತಿವೆ. ಇಂತಹ ಕಷ್ಟದ ಸಂದರ್ಭದಲ್ಲಿ ಜಿಲ್ಲಾಡಳಿತ ಹಾಗೂ ತಾಲೂಕಾಡಳಿತ ರೈತರ ನೆರವಿಗೆ ಬರಬೇಕೆಂದು ರೈತ ಮುಖಂಡ ಶಿವರೆಡ್ಡಿ ಕೊಳ್ಳೂರು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.
ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಾಗಿ ಜೊತೆಗೆ ತಂಪು ಗಾಳಿ ಬೀಸುತ್ತಿರುವುದರಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವ ಭೀತಿ ಶುರುವಾಗಿದೆ. ರಸ್ತೆ, ಚರಂಡಿ, ತೆಗ್ಗು ಪ್ರದೇಶದಲ್ಲಿ ನೀರು ನಿಂತಿರುವುದರಿಂದ ಸಾಂಕ್ರಾಮಿಕ ರೋಗ ಹರಡುವ ಆತಂಕ ಎದುರಾಗಿದೆ.