ಸಾರಾಂಶ
ಮುಂಡರಗಿ ತಾಲೂಕಿನ ಹಮ್ಮಿಗಿ ಬಳಿ ಇರುವ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಬ್ಯಾರೇಜ್‌ನಿಂದ ಶನಿವಾರ ಸುಮಾರು 122437 ಕ್ಯುಸೆಕ್ ನೀರನ್ನು 26 ಗೇಟುಗಳ ಪೈಕಿ 17 ಗೇಟ ತೆರೆದು ನದಿಗೆ ಹರಿಬಿಡಲಾಗಿದೆ
ಶರಣು ಸೊಲಗಿ ಮುಂಡರಗಿ
ಶಿವಮೊಗ್ಗ, ಚಿಕ್ಕಮಂಗಳೂರು ಸೇರಿದಂತೆ ಮಲೆನಾಡಿನಲ್ಲಿ ಹೆಚ್ಚಿನ ಮಳೆಯಾಗುತ್ತಿರುವ ಹಿನ್ನೆಲೆ ತುಂಗಾ ಹಾಗೂ ಭದ್ರಾ ಎರಡೂ ಜಲಾಶಯಗಳು ತುಂಬಿದ್ದರ ಪರಿಣಾಮ ತಾಲೂಕಿನ ಕೊರ್ಲಹಳ್ಳಿ ಬಳಿ ಇರುವ ತುಂಗಭದ್ರಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ತುಂಗಭದ್ರಾ ಮೈದುಂಬಿ ಹರಿಯುತ್ತಿದ್ದಾಳೆ.ಮಲೆನಾಡಿನಲ್ಲಿ ಹೆಚ್ಚಿನ ಮಳೆಯಾಗುತ್ತಿರುವುದರಿಂದ ತುಂಗಭದ್ರೆ ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ತುಂಗಭದ್ರಾ ನದಿ ನೀರನ್ನೇ ಅವಲಂಬಿಸಿರುವ ಗದಗ ಜಿಲ್ಲೆಯ ಮುಂಡರಗಿ, ಶಿರಹಟ್ಟಿ, ಲಕ್ಷ್ಮೇಶ್ವರ ತಾಲೂಕುಗಳು ಹಾಗೂ ಜಿಲ್ಲಾ ಕೇಂದ್ರವಾಗಿರುವ ಗದಗ-ಬೆಟಗೇರಿ ಅವಳಿ ನಗರದಲ್ಲಿ ವರ್ಷ ಪೂರ್ತಿ ಕುಡಿಯುವ ನೀರಿಗೆ ಯಾವುದೇ ರೀತಿಯ ತೊಂದರೆ ಇಲ್ಲದಂತಾಗಿದೆ.
ಮುಂಡರಗಿ ತಾಲೂಕಿನ ಹಮ್ಮಿಗಿ ಬಳಿ ಇರುವ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಬ್ಯಾರೇಜ್‌ನಿಂದ ಶನಿವಾರ ಸುಮಾರು 122437 ಕ್ಯುಸೆಕ್ ನೀರನ್ನು 26 ಗೇಟುಗಳ ಪೈಕಿ 17 ಗೇಟ ತೆರೆದು ನದಿಗೆ ಹರಿಬಿಡಲಾಗಿದೆ.ಹಮ್ಮಿಗಿ ಬ್ಯಾರೇಜಿನಲ್ಲಿ ಒಟ್ಟು 3.12 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಬ್ಯಾರೇಜ್ ಹಿನ್ನೀರಿನಿಂದ ಮುಂಡರಗಿ ತಾಲೂಕಿನ ಗುಮ್ಮಗೋಳ, ಬಿದರಹಳ್ಳಿ, ವಿಠಲಾಪೂರ ಹಾಗೂ ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಅಲ್ಲಿಪುರ ಗ್ರಾಮಗಳು ಮುಳುಗಡೆಯಾಗಲಿದ್ದು, ಇಲ್ಲಿಯವರೆಗೂ ಈ ನಾಲ್ಕು ಗ್ರಾಮಗಳ ಸ್ಥಳಾಂತರ ಕಾರ್ಯವಾಗದ ಹಿನ್ನೆಲೆಯಲ್ಲಿ ಇದೀಗ ಬ್ಯಾರೇಜ್ ನಲ್ಲಿ ಕೇವಲ 1.98 ಟಿಎಂಸಿ ನೀರನ್ನು ಮಾತ್ರ ಸಂಗ್ರಹಿಸಲಾಗುತ್ತಿದ್ದು, ಹೆಚ್ಚುವರಿ ನೀರನ್ನು ನದಿಗೆ ಹರಿಬಿಡಲಾಗುತ್ತಿದೆ.
ಶಿವಮೊಗ್ಗ, ಚಿಕ್ಕಮಂಗಳೂರು ಸೇರಿದಂತೆ ಮಲೆನಾಡಿನ ಭಾಗಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಶನಿವಾರ 122437 ಕ್ಯುಸೆಕ್ ನೀರನ್ನು ನದಿಗೆ ಹರಿಬಿಡಲಾಗಿದೆ. ಈಗಲೂ ಸಹ ಮಲೆನಾಡಿನಲ್ಲಿ ಮಳೆಯಾಗುತ್ತಿದ್ದು, ಇನ್ನೂ ಹೆಚ್ಚಿನ ನೀರು ಬರುವ ಸಾಧ್ಯತೆ ಇದೆ ಎಂದು ಸಿಂಗಟಾಲೂರು ಬ್ಯಾರೇಜ್ ಎಇಇ ರಾಘವೇಂದ್ರ ಎಚ್.ಸಿ. ತಿಳಿಸಿದ್ದಾರೆ.