ಕನ್ನಡಪ್ರಭ ವಾರ್ತೆ ಮಡಿಕೇರಿ

ಕಳೆದ ಹಲವು ದಿನಗಳಿಂದ ಸಾಧಾರಣ ಮಳೆ ಸುರಿಯುತ್ತಿದ್ದ ಕೊಡಗು ಜಿಲ್ಲೆಯಲ್ಲಿ ಗುರುವಾರ ಚುರುಕುಗೊಂಡಿದೆ. ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಹಲವು ಕಡೆಗಳಲ್ಲಿ ಬಿಡುವು ನೀಡಿ ಆಗಾಗ್ಗೆ ಭಾರಿ ಮಳೆ ಸುರಿದಿದೆ.

ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಪ್ರಮುಖ ಜಲಾಶಯ ಹಾರಂಗಿಯ ಒಳಹರಿವು ಏರಿಕೆ ಕಂಡಿದ್ದು, ಸುಮಾರು 5000 ಕ್ಯೂಸೆಕ್ ನೀರು ಹಾರಂಗಿಗೆ ಹರಿದು ಬರುತ್ತಿದೆ. ಜಿಲ್ಲೆಯ ವಿವಿಧ ಕಡೆಗಳಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ರೈತರು ಭತ್ತದ ನಾಟಿ ಕಾರ್ಯ ಮಾಡಬಹುದೆಂಬ ನಿರೀಕ್ಷೆಯಲ್ಲಿದ್ದಾರೆ. ಗಾಳಿ ಸಹಿತ ಮಳೆಯಾಗುತ್ತಿದ್ದು, ಅಲ್ಲಲ್ಲಿ ಮರ ಬೀಳುತ್ತಿದೆ. ಭಾರಿ ಗಾಳಿಗೆ ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ನಿಲ್ಲಿಸಲಾಗಿದ್ದ ಬೈಕ್‌ಗಳ ಮೇಲೆ ಮರ ಉರುಳಿದೆ.

ಮಡಿಕೇರಿಯ ಮಂಗಳಾದೇವಿ ನಗರದ ಖಾಸಗಿ ಜಾಗದಲ್ಲಿ ಸಣ್ಣ ಪ್ರಮಾಣದಲ್ಲಿ ಭೂಕುಸಿತ ಸಂಭವಿಸಿದೆ. ಕಳೆದ ವರ್ಷವೂ ಇದೇ ಜಾಗದಲ್ಲಿ ಭೂಕುಸಿತ ಉಂಟಾಗಿತ್ತು. ಇದೀಗ ಮತ್ತೆ ಮಣ್ಣು ಕುಸಿಯುತ್ತಿರುವುದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಕೊಡಗು ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 21.20 ಮಿ.ಮೀ. ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ 26.35 ಮಿ.ಮೀ., ವಿರಾಜಪೇಟೆ ತಾಲೂಕಿನಲ್ಲಿ 21.45 ಮಿ.ಮೀ, ಪೊನ್ನಂಪೇಟೆ ತಾಲೂಕಿನಲ್ಲಿ 21.35 ಮಿ.ಮೀ, ಸೋಮವಾರಪೇಟೆ ತಾಲೂಕಿನಲ್ಲಿ 25.25 ಮಿ.ಮೀ, ಕುಶಾಲನಗರ ತಾಲೂಕಿನಲ್ಲಿ 11.60 ಮಿ.ಮೀ ಮಳೆಯಾಗಿದೆ. ಮಡಿಕೇರಿ 36, ನಾಪೋಕ್ಲು 25.60, ಸಂಪಾಜೆ 16, ಭಾಗಮಂಡಲ 27.80, ವಿರಾಜಪೇಟೆ 27.40, ಅಮ್ಮತ್ತಿ 15.50, ಹುದಿಕೇರಿ 19.30, ಶ್ರೀಮಂಗಲ 38, ಪೊನ್ನಂಪೇಟೆ 15, ಬಾಳೆಲೆ 13.09, ಸೋಮವಾರಪೇಟೆ 18.60, ಶನಿವಾರಸಂತೆ 23, ಶಾಂತಳ್ಳಿ 37, ಕೊಡ್ಲಿಪೇಟೆ 22.40, ಕುಶಾಲನಗರ 3.20, ಸುಂಟಿಕೊಪ್ಪ 20 ಮಿ.ಮೀ.ಮಳೆಯಾಗಿದೆ.


ಹಾರಂಗಿ ಜಲಾಶಯ ಮಟ್ಟ: ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2857.81 ಅಡಿಗಳು. ಕಳೆದ ವರ್ಷ ಇದೇ ದಿನ 2854.49 ಅಡಿಗಳು. ಹಾರಂಗಿಯಲ್ಲಿ ಬಿದ್ದ ಮಳೆ 8.20 ಮಿ.ಮೀ., ಕಳೆದ ವರ್ಷ ಇದೇ ದಿನ 20.20 ಮಿ.ಮೀ., ಇಂದಿನ ನೀರಿನ ಒಳಹರಿವು 4613 ಕ್ಯುಸೆಕ್, ಕಳೆದ ವರ್ಷ ಇದೇ ದಿನ 7422 ಕ್ಯುಸೆಕ್., ಇಂದಿನ ನೀರಿನ ಹೊರ ಹರಿವು ನದಿಗೆ 4854 ಕ್ಯುಸೆಕ್. ಕಳೆದ ವರ್ಷ ಇದೇ ದಿನ ನೀರಿನ ಹೊರ ಹರಿವು ನದಿಗೆ 5000 ಕ್ಯುಸೆಕ್. ನಾಲೆಗೆ 350 ಕ್ಯುಸೆಕ್.