ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಜಿಲ್ಲೆಯಲ್ಲಿ ಶನಿವಾರ ರಾತ್ರಿ ರಭಸದಲ್ಲಿ ಬೇಸಿಗೆ ಮಳೆ ಸುರಿದಿದೆ. ಇದರಿಂದಾಗಿ ಅನೇಕ ಕಡೆ ಹಳ್ಳಗಳು ಉಕ್ಕೇರಿ ಪ್ರವಹಿಸಿವೆ. ಅಫಜಲ್ಪುರ, ಚಿಂಚೋಳಿ, ಕಲಬುರಗಿಯ ಕೆಲವು ಗ್ರಾಮಗಳು ಸೇರಿದಂತೆ ಹಲವೆಡೆ ಮಳೆಯಾಗಿದೆ.ಏತನ್ಮಧ್ಯೆ ಅಫಜಲ್ಪುರ ತಾಲೂಕಿನ ಬಳೂರ್ಗಿ ತಾಂಡದ ಹಳ್ಳದಲ್ಲಿ ದ್ವಿಚಕ್ರ ವಾಹನ ಸಮೇತ ಗೋವಿಂದ ರಾಠೋಡ ಎಂಬಾತ ಹಳ್ಳದ ನೀರಲ್ಲಿ ಹರಿದುಕೊಂಡು ಹೋಗುತ್ತಿದ್ದಾಗ ತಾಂಡಾ ನಿವಾಸಿಗಳು ನೋಡಿ 400 ಮೀಟರ್‌ಗಳಷ್ಟು ಹರಿದುಕೊಂಡು ಹೋಗಿದ್ದ ವ್ಯಕ್ತಿಯನ್ನು ಸಂರಕ್ಷಣೆ ಮಾಡಿ ನೀರಿನಿಂದ ಹೊರ ತೆಗೆದಿದ್ದಾರೆ.
ಹಳ್ಳದಲ್ಲಿ ಹರಿದು ಹೋಗುತ್ತಿದ್ದವನ ರಕ್ಷಣೆ ಮಾಡುವ ಮೂಲಕ ರಾಠೋಡನ ಪ್ರಾಣ ಸಂರಕ್ಷಿಸಿದ್ದಾರೆ.ಶನಿವಾರ ಸಂಜೆ ಗುಡುಗು ಮಿಂಚಿನ ಸಹಿತ ಅಬ್ಬರಿಸಿ ಬಂದ ಅಕಾಲಿಕ ಮಳೆಯಿಂದ ಅಫಜಲ್ಪುರ ತಾಲೂಕಿನ ಬಳೂರ್ಗಿ ಗ್ರಾಮದ ಹಳ್ಳ ತುಂಬಿ ಹರಿಯುತ್ತಿದ್ದು ಹಳ್ಳದ ನೀರಿನಲ್ಲಿ ಬಳೂರ್ಗಿ ತಾಂಡಾ ನಿವಾಸಿ ಗೋವಿಂದ ರಾಠೋಡ ದ್ವಿಚಕ್ರ ವಾಹನ ಸಮೇತ ಕೊಚ್ಚಿಕೊಂಡು ಹೋಗುತ್ತಿದ್ದಾಗ ನೋಡಿದ ತಾಂಡಾ ನಿವಾಸಿಗಳು ಓಡಿ ಹೋಗಿ ಬೈಕ್ ಸವಾರನನ್ನು ರಕ್ಷಣೆ ಮಾಡಿದ್ದಾರೆ.
ಹಳ್ಳದ ನೀರಲ್ಲಿ ಹರಿಕೊಂಡು ಹೋಗುತ್ತಿದ್ದ ಗೋವಿಂದ ರಾಠೋಡ ಹಳ್ಳದಲ್ಲಿ 400 ಮೀಟರ ನಷ್ಟು ಕೊಚ್ಚಿಕೊಂಡು ಹೋಗುತ್ತಿದ್ದಾಗ ತಾಂಡಾ ನಿವಾಸಿಗಳು ರಕ್ಷಣೆ ಮಾಡಿದ್ದಾರೆ. ಆದರೆ ಬೈಕ್ ಹಳ್ಳದ ನೀರಿನ ರಭಸಕ್ಕೆ ಹರಿದಕೊಂಡು ಹೋಗಿದೆ.ಅಫಜಲ್ಪುರ ತಾಲೂಕಿನ ಶಿರವಾಳ ಗೌರ ಬಿ ನಂದರ್ಗಾ ಹಿರೇಜೇವರ್ಗಿ ದಿಕ್ಸಂಗಾ ಗೌರ ಕೆ ಮಾಶಾಳ ಕರಜಗಿ ಭೋಸಗಾ ದುದ್ದುಣಗಿ ಮಂಗಳೂರ ಹಿರಿಯಾಳ ಉಡಚಣ ಉಡಚಣಹಟ್ಟಿ ಶಿವೂರ ಕುಡಗನೂರ ರಾಮನಗರ ಶಿವಬಾಳನಗರ ಉಪ್ಪಾರವಾಡಿ ದೇವಪ್ಪನಗರ ಮಣ್ಣೂರ ಶೇಷಗಿರಿ ಹೊಸೂರ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಮೋಡ ಕವಿದ ವಾತಾವರಣವಿದೆ. ಬಿರುಗಾಳಿ ಗುಡುಗು ಸಹಿತ ಮಳೆಯಾಗಿದೆ.
ಗುಡುಗು ಮಿಂಚು ಸಹಿತ ಮಳೆ: ಯಡ್ರಾಮಿ ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಶನಿವಾರ ಸಂಜೆ ಗುಡುಗು ಮಿಂಚು ಸಹಿತ ಮಳೆ ಸುರಿದಿದೆ. ಮಧ್ಯಾಹ್ನವರೆಗೂ ಮೋಡಕವಿದ ವಾತಾವರಣ ಇತ್ತು. ಸಂಜೆಯಾಗುತ್ತಿದ್ದಂತೆಯೇ ಮಲೆ ಸುರಿದಿದೆ.ಸಂಜೆ 4 ಗಂಟೆ ಸುಮಾರಿಗೆ ಎರಡು ಗಂಟೆ ಮಳೆ ಸುರಿಯಿತು. ನಂತರ ಕೆಲ ಕಾಲ ಬಿಡುವು ನೀಡಿ, ರಾತ್ರಿ ಸುಮಾರಿಗೆ ತಣ್ಣನೆ ಗಾಳಿ ಬೀಸಿತು. ಇದುವರೆಗೂ ಧಗೆ, ಸೆಖೆಯನ್ನೇ ಅನುಭವಿಸಿದ್ದ ತಾಲ್ಲೂಕು ಜನತೆಗೆ ಬೇಸಿಗೆಯ ಮೊದಲ ಮಳೆಗೆ ತಂಪು ಅನುಭವಿಸಿದರು. ಯಡ್ರಾಮಿ ತಾಲೂಕಿನ ಎಲ್ಲಾ ಕೆಗಳಲ್ಲಿ ಗುಡುಗು- ಸಿಡಿಲಿನ ಸಮೇತ ಭಾರಿ ಮಳೆಯಾಗಿದೆ.