ಮಲೆನಾಡಿನಲ್ಲಿ ಮಳೆರಾಯನ ಆರ್ಭಟ ಜೋರು

| Published : May 20 2024, 01:35 AM IST

ಸಾರಾಂಶ

ಚಿಕ್ಕಮಗಳೂರಿನ ಹೌಸಿಂಗ್‌ ಬೋರ್ಡ್‌ನಲ್ಲಿರುವ ಹೋಲಿ ಕ್ರಾಸ್‌ ಆಸ್ಪತ್ರೆ ಬಳಿ ಮನೆಯ ಕಾಂಪೌಂಡ್ ಬಿದ್ದು ಜಖಂಗೊಂಡಿರುವ ಬೈಕ್‌ಗಳು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಮಳೆ ಇಲ್ಲದೆ ಆಕಾಶದತ್ತ ರೈತರ ಚಿತ್ತ ಮೂಡಿತ್ತು. ಅಂತರ್ಜಲ ಮಟ್ಟ ನೂರಾರು ಅಡಿಗೆ ಕುಸಿದಿತ್ತು. ಕುಡಿಯುವ ನೀರಿನ ಸಮಸ್ಯೆ ಗಂಭೀರ ಸ್ವರೂಪ ಪಡೆಯುತ್ತಾ ಹೋಗಿತ್ತು, ನೀರಿನ ಸಮಸ್ಯಾತ್ಮಕ ಗ್ರಾಮಗಳ ಸಂಖ್ಯೆ ದಿನೇ ದಿನೇ ಏರು ಮುಖ ಮಾಡಿತ್ತು. ಈ ಕರಾಳ ಚಿತ್ರಣವನ್ನುಮುಂಗಾರು ಮಳೆ ದೂರು ಮಾಡಿದೆ. ಕಳೆದ ನಾಲ್ಕೈದು ದಿನಗಳಿಂದ ಪ್ರತಿ ದಿನ ರಾತ್ರಿ ಜಿಲ್ಲೆಯಾದ್ಯಂತ ಮಳೆ ಧಾರಾಕಾರವಾಗಿ ಸುರಿಯುತ್ತಿದೆ. ಈ ಮಳೆಯ ವಿಶೇಷತೆ, ಬೆಳಗ್ಗೆ ಬಿಸಿಲು, ಮಧ್ಯಾಹ್ನದ ನಂತರ ಮೋಡ, ರಾತ್ರಿ 10.30ರಿಂದ ಬೆಳಗಿನ ಜಾವದವರೆಗೆ ಮಳೆ ಬೀಳುತ್ತಿದೆ. ಮಳೆ ಅವಲಂಬಿತ ಅಜ್ಜಂಪುರ, ತರೀಕೆರೆ, ಕಡೂರು ಹಾಗೂ ಚಿಕ್ಕಮಗಳೂರು ತಾಲೂಕಿನಲ್ಲಿ ಕೃಷಿ ಚಟುವಟಿಕೆ ಚುರುಕುಗೊಳಿಸಲು ಅಗತ್ಯವಾಗಿ ಬೇಕಾಗುವಷ್ಟು ಮಳೆ ಬರುತ್ತಿದೆ.

ಶನಿವಾರ ರಾತ್ರಿ ವಿಡೀ ಸುರಿದ ಮಳೆಗೆ ಹಲವೆಡೆ ಹಾನಿ ಸಂಭವಿಸಿದೆ. ಚಿಕ್ಕಮಗಳೂರು ನಗರದ ಹೌಸಿಂಗ್ ಬೋರ್ಡ್ ಬಡಾವಣೆಯಲ್ಲಿ ರಾತ್ರಿ ಇಡಿ ಸುರಿದ ಮಳೆಗೆ ಕಾಂಪೌಂಡ್ ಶೀಥಿಲಾವಸ್ಥೆಗೊಂಡು ಕುಸಿದು ಬಿದ್ದಿದೆ. ಕಾಂಪೌಂಡ್ ಪಕ್ಕದಲ್ಲಿ ನಿಲ್ಲಿಸಿದ್ದ ನಾಲ್ಕು ಬೈಕ್‌ಗಳು ಜಖಂಗೊಂಡಿವೆ. ಸ್ಥಳೀಯರು ಹಳೆ ಕಾಂಪೌಂಡ್ ತೆರೆವಿಗೆ ನಗರಸಭೆ ಆಗ್ರಹಿಸಿದ್ದಾರೆ.

ಚಿಕ್ಕಮಗಳೂರು ನಗರದ ಉದ್ದೇಬೋರನಹಳ್ಳಿಯಲ್ಲಿ ರಾತ್ರಿಯಿಡೀ ಸುರಿದ ಮಳೆಯಿಂದಾಗಿ ಗೊಬ್ಬರದ ಅಂಗಡಿಗೆ ಮೋರಿ ನೀರು ನುಗ್ಗಿತ್ತು. ಲಕ್ಷಾಂತರ ರುಪಾಯಿ ರಾಸಾಯನಿಕ ಗೊಬ್ಬರ, ಸಿಮೆಂಟ್ ನಾಶವಾಗಿತ್ತು. ರಾಷ್ಟ್ರೀಯ ಹೆದ್ದಾರಿ ಪಕ್ಕದ ನೀರು ನುಗ್ಗಿ ಗೊಬ್ಬರ ನೀರು ಪಾಲಾಗಿತ್ತು. ಮೋರಿ ಕಾಮಗಾರಿ ಮಾಡದೆ ಅರ್ಧಕ್ಕೆ ಬಿಟ್ಟಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವಿರುದ್ಧ ಸ್ಥಳೀಯರು ಕಿಡಿಕಾರಿದ್ದಾರೆ.

ಚಿಕ್ಕಮಗಳೂರು ತಾಲೂಕಿನ ಆಲ್ದೂರು ಹೋಬಳಿಯ ಕಸ್ಕೆ ಗ್ರಾಮದಲ್ಲಿ ಭಾರಿ ಮಳೆಗೆ ಮನೆಯ ಮೇಲೆ ಮರ ಬಿದ್ದಿದೆ. ಕೂದಲೆಳೆ ಅಂತರದಲ್ಲಿ ಮನೆಯಲ್ಲಿದ್ದವರು ಪಾರಾಗಿದ್ದಾರೆ. ಮರ ಬಿದ್ದ ಪರಿಣಾಮ ಮನೆಯಲ್ಲಿದ್ದ ಪೀಠೋಪಕರಣಗಳು, ಆಹಾರ ಪದಾರ್ಥ ನಾಶವಾಗಿವೆ.

ಕಳೆದ ರಾತ್ರಿ ಭಾರೀ ಮಳೆಯಿಂದಾಗಿ ಗುಡಿಸಲಿಗೆ ಚರಂಡಿ ನೀರು ನುಗ್ಗಿತ್ತು.

ಜಿಲ್ಲೆಯ ಕಳಸ ತಾಲೂಕಿನಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಎತ್ತರದ ಪ್ರದೇಶದಲ್ಲಿರುವ ದಕ್ಷಿಣ ಕಾಶಿ ಕಳಸೇಶ್ವರ ಸ್ವಾಮಿ ದೇವಸ್ಥಾನದ ಮೆಟ್ಟಿಲು ಮೇಲಿಂದ ನೀರು ಹರಿಯುತ್ತಿದೆ. ಇತ್ತ ಕುದುರೆಮುಖ ಘಟ್ಟ ಪ್ರದೇಶದಲ್ಲಿ ಭಾರೀ ಮಳೆ ಹಿನ್ನಲೆ ಭದ್ರಾ ನದಿ ಒಳಹರಿವಿನಲ್ಲಿ ನೀರಿನ ಪ್ರಮಾಣ ಹೆಚ್ಚಳವಾಗಿದೆ.

ಭಾನುವಾರ ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣ ಜಿಲ್ಲೆಯಲ್ಲಿತ್ತು. ಚಿಕ್ಕಮಗಳೂರು ಗ್ರಾಮಾಂತರ ಪ್ರದೇಶದಲ್ಲಿ ಮಳೆ ಬಂದಿದ್ದು, ನಗರದ ಕಲ್ಯಾಣನಗರಕ್ಕೆ ಹೊಂದಿಕೊಂಡಿರುವ ಹುಣಸೆಹಳ್ಳಿ ಕೆರೆ ತುಂಬಿ ಕೋಡಿ ಬಿದ್ದು ಕಾಲುವೆಯಲ್ಲಿ ಹರಿದ ನೀರಿನಲ್ಲಿ ಕೆರೆಯ ಮೀನು ಬಂದಿದ್ದರಿಂದ ಅದನ್ನು ಹಿಡಿಯಲು ಜನರು ಮುಗಿ ಬಿದ್ದಿದ್ದರು.

ಮೂಡಿಗೆರೆಯಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ಸಾಧಾರಣ ಮಳೆ ಬಂದಿತು. ಶೃಂಗೇರಿ ತಾಲೂಕಿನಾದ್ಯಂತ ಮಧ್ಯಾಹ್ನ 3 ಗಂಟೆಯ ನಂತರ ಗುಡುಗು ಮಿಂಚಿನ ಅರ್ಭಟ ಜೋರಾಗಿತ್ತು. ಆದರೆ, ಮಳೆ ಬಂದಿರಲಿಲ್ಲ. ಕೊಪ್ಪ, ಎನ್‌.ಆರ್.ಪುರದಲ್ಲೂ ಮೋಡ ಕವಿದ ವಾತಾವರಣ ಇತ್ತು. ಆದರೆ, ಬಯಲುಸೀಮೆಯ ತರೀಕೆರೆ ಪಟ್ಟಣದಲ್ಲಿ ಅರಣ್ಯ ಇಲಾಖೆ ಕಚೇರಿ ಮುಂಭಾಗದಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದ ಪರಿಣಾಮ ಹಸುವೊಂದು ಸ್ಥಳದಲ್ಲೇ ಮೃತಪಟ್ಟಿತು.

ಎಲ್ಲಿ- ಎಷ್ಟು ಮಳೆ

ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಧಾರಾಕಾರವಾಗಿ ಮಳೆ ಸುರಿದಿದೆ.

ಕಡೂರು ಪಟ್ಟಣದಲ್ಲಿ 74.5 ಮಿ.ಮೀ., ಬೀರೂರು- 93.2, ಸಿಂಗಟಗೆರೆ- 25.6, ಯಗಟಿ- 73.2, ಎಮ್ಮೆದೊಡ್ಡಿ- 64, ಪಂಚನಹಳ್ಳಿ- 21.6, ಗಿರಿಯಾಪುರ- 38, ಬಾಸೂರು- 103, ಸಖರಾಯಪಟ್ಟಣ- 74.4, ಎನ್‌.ಆರ್‌.ಪುರ- 20.2, ಬಾಳೆಹೊನ್ನೂರು- 30, ಮೆಗಾರಮಕ್ಕಿ- 42, ಶೃಂಗೇರಿ- 5.0, ಕೊಪ್ಪ- 7.0, ಹರಿಹರಪುರ- 6.6, ಜಯಪುರ- 11, ಅಜ್ಜಂಪುರ- 39, ಬುಕ್ಕಾಂಬೂದಿ- 76, ಶಿವನಿ- 62.2, ತರೀಕೆರೆ- 12.4, ಲಿಂಗದಹಳ್ಳಿ- 42, ಹುಣಸಘಟ್ಟ- 81, ರಂಗೇನಹಳ್ಳಿ- 11.8, ಲಕ್ಕವಳ್ಳಿ- 56.6. ಮೂಡಿಗೆರೆ- 32.8, ಕೊಟ್ಟಿಗೆಹಾರ- 17.6, ಚಿಕ್ಕಮಗಳೂರು ನಗರ- 69.2, ವಸ್ತಾರೆ- 28.2, ಜೋಳ್ದಾಳ್‌- 13, ಆಲ್ದೂರು- 27.5, ಕೆ.ಆರ್‌.ಪೇಟೆ- 36, ಅತ್ತಿಗುಂಡಿ- 27.2, ಮಳಲೂರು- 44.3, ಕಳಸಾಪುರ- 63, ದಾಸರಹಳ್ಳಿಯಲ್ಲಿ 90.3 ಮಿ.ಮೀ. ಮಳೆ ಬಂದಿದೆ.