ಸಾರಾಂಶ
ಖಾಜು ಸಿಂಗೆಗೋಳ
ಕನ್ನಡಪ್ರಭ ವಾರ್ತೆ ಇಂಡಿಬೀಸುವ ಗಾಳಿ, ಓಡುವ ಮೋಡ, ನೆಲಕ್ಕೆ ಬೀಳುವ ತುಂತುರು ಮಳೆ ಹನಿ ಇವೆಲ್ಲವನ್ನು ನೋಡಿ ರೈತರು ಕಂಗಾಲಾಗಿದ್ದಾರೆ. ಸುರಿಯಬೇಕಿದ್ದ ಮಳೆ ಕೈ ಕೊಡುತ್ತಿದ್ದು, ಕೈಗೆ ಬರಬೇಕಿದ್ದ ಬೆಳೆಗಳು ಎಲ್ಲಿ ಒಣಗಿ ಹೋಗುತ್ತವೆಯೋ ಎಂಬ ಆತಂಕದಲ್ಲಿಯೇ ಬೆಳೆಗಳನ್ನು ರಕ್ಷಿಸಿಕೊಳ್ಳಲು ಪರದಾಟ ನಡೆಸಿದ್ದಾರೆ ರೈತರು. ಅಲ್ಲದೇ, ಮಳೆ ಯಾವಾಗ ಬರುತ್ತೋ ಅಂತ ಕಾಯ್ದು ಕುಳಿತಿದ್ದಾರೆ.
ಸಾಲ ಮಾಡಿ ಹಾಕಿದ ಬೀಜ, ಬಿತ್ತನೆ ಮಾಡಿದ ಖರ್ಚು ಇಷ್ಟಾದರೂ ಸಿಗುತ್ತದೆಯೋ ಇಲ್ಲ ಎಂಬ ಅಳಕಿನಲ್ಲಿಯೇ ದೇವರ ಮೊರೆ ಹೊಗುತ್ತಿದ್ದಾನೆ. ಕಳೆದ ವರ್ಷ ಮುಂಗಾರು, ಹಿಂಗಾರು ಮಳೆ ಕೈಕೊಟ್ಟು ರೈತರು ಬೆಳೆ ಬಾರದೆ ಆರ್ಥಿಕ ಸಂಕಷ್ಟ ಎದುರಿಸಿದರೆ, ಈ ಬಾರಿ ಮುಂಗಾರು ಮಳೆ ಬಿತ್ತನೆಗೆ ಅನುಕೂಲವಾಗುವಂತೆ ಸುರಿಯಿತು. ಮಳೆ ನಂಬಿ ಬಿತ್ತನೆ ಮಾಡಿದ ಬೆಳೆಗಳಿಗೆ ಸಮಯಕ್ಕೆ ತಕ್ಕಂತೆ ಮಳೆ ಬಾರದಿರುವುದರಿಂದ ಬೆಳೆ ಒಣಗುವ ಚಿಂತೆ ರೈತರನ್ನು ಕಾಡುತ್ತಿದೆ. ಇಂಡಿ ಸುತ್ತಮುತ್ತಲಿನ ಗ್ರಾಮಗಳ ವ್ಯಾಪ್ತಿಯಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ರಭಸದ ಮಳೆ ಇಲ್ಲದ್ದರಿಂದ ಅಂತರ್ಜಲಮಟ್ಟವೂ ಕಡಿಮೆಯಾಗುತ್ತಿದ್ದು, ನೀರಿನ ಪ್ರಮಾಣ ಕಡಿಮೆಯಾಗುತ್ತದೆ. ಇದೇ ಪರಿಸ್ಥಿತಿ ಮುಂದಿನ 15 ದಿನಗಳವರೆಗೆ ಮುಂದುವರಿದರೆ ಬೆಳೆಗಳ ತಪ್ಪಲು ಬಾಡಿ, ಇಳುವರಿ ಕಡಿಮೆಯಾಗುವ ಸಾಧ್ಯತೆ ಇದೆ.ಈಗಾಗಲೇ ಮುಂಗಾರು ಮಳೆ ಉತ್ತಮವಾಗಿದ್ದರಿಂದ ಎಲ್ಲರೂ ಹತ್ತಿ, ತೊಗರಿ, ಮೆಣಸಿನಕಾಯಿ, ಗೋವಿನಜೋಳ ಸೇರಿದಂತೆ ಹಲವಾರು ಬೆಳೆಗಳನ್ನು ಬೆಳೆದಿದ್ದಾರೆ. ಆದರೆ, ಸಮಯಕ್ಕೆ ಮಳೆ ಕೈಕೊಟ್ಟಿರುವುದರಿಂದ ರೈತರು ಅಗಸದತ್ತ ನೋಡಿಕೊಂಡು ಕೂರುವಂತಾಗಿದೆ.
ಇಂಡಿ ತಾಲೂಕು ಮಳೆ ಎಂದರೆ ಅಪರೂಪ ಎನ್ನುವಂತಾಗಿದೆ. ಮಳೆಯಾಶ್ರಿತ ಪ್ರದೇಶದಲ್ಲಿನ ರೈತರು ಮೇ, ಜೂನ್ ತಿಂಗಳಲ್ಲಿ ಬಿತ್ತನೆ ಅವಧಿಗೂ ಮುಂಚೆ ಮಳೆ ಚನ್ನಾಗಿ ಆಗಿದ್ದರಿಂದ ಗುರಿಗಿಂತ ಹೆಚ್ಚು ಬಿತ್ತನೆ ಮಾಡಿದ್ದಾರೆ. ಕೃಷಿ ಇಲಾಖೆಯ ಪ್ರಕಾರ ತೊಗರಿ 91,750 ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿದ್ದರೆ 99,405 ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಮುಸುಕಿನಜೋಳ, ಸಜ್ಜೆ, ನವಣಿ, ತೊಗರಿ, ಹೆಸರು, ಹುರುಲಿ, ಉದ್ದು, ಶೇಂಗಾ, ಸೂರ್ಯಕಾಂತಿ, ಹತ್ತಿ ಸೇರಿದಂತೆ ಮುಂಗಾರು ಹಂಗಾಮಿನಲ್ಲಿ ಶೇ. 99.1 ರಷ್ಟು ಸಾಧನೆ ಮಾಡಲಾಗಿದೆ. ಆದರೆ ಬೀಜ ಮೊಳಕೆಯೊಡೆದು ಮೇಲೆ ಬರುತ್ತಿದ್ದಂತೆ ಮಳೆ ಕೈಕೊಟ್ಟಿದೆ. ಆಗಸ್ಟ್ ತಿಂಗಳು ಅರ್ಧ ಕಳೆದರೂ ಮಳೆ ಬಾರದೆ ಇರುವುದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ.2024ರ ಜ.1 ರಿಂದ ಡಿಸೆಂಬರ್ ವರೆಗೆ ಬರಬೇಕಾಗಿದ್ದ ಸಾಮಾನ್ಯ ಮಳೆ 636 ಎಂಎಂ. ಜ.1ರಿಂದ ಜುಲೈ ತಿಂಗಳವರೆಗೆ ಕೇವಲ 338 ಎಂಎಂ ಮಳೆಯಾಗಿದೆ. ಹೀಗಾಗಿ ಮಳೆಯ ಕೊರತೆಯಿಂದ ತೇವಾಂಶ ಕಡಿಮೆಯಾಗುತ್ತಿದ್ದು, ಹೀಗೆ ಆದರೆ ಮುಂದೇನು ಎಂಬ ಚಿಂತೆ ರೈತರನ್ನು ಕಾಡುತ್ತಿದೆ.
-----------------------------------ಕೋಟ್
ತಾಲೂಕಿನಲ್ಲಿ ಒಟ್ಟು 1.55 ಲಕ್ಷ ಹೆಕ್ಟರ್ ಮುಂಗಾರು ಬಿತ್ತನೆ ಗುರಿ ಹೊಂದಲಾಗಿತ್ತು. 1.53 ಸಾವಿರ ಹೆಕ್ಟರ್ ಪ್ರದೇಶದಲ್ಲಿ ವಿವಿಧ ಮುಂಗಾರು ಬೆಳೆಗಳನ್ನು ಬಿತ್ತನೆ ಮಾಡಲಾಗಿದೆ. ತೊಗರಿ ಗುರಿಮೀರಿ ಬಿತ್ತನೆಯಾಗಿದೆ. ಆರಂಭದಲ್ಲಿ ಚನ್ನಾಗಿ ಮಳೆಯಾಗಿದ್ದರಿಂದ ಹೆಚ್ಚು ತೊಗರಿ ಬಿತ್ತನೆ ಮಾಡಿದ್ದಾರೆ. ಬೆಳೆಗಳು ಚನ್ನಾಗಿವೆ. ಬೆಳೆಗಳಿಗೆ 15 ದಿನಗಳೊಳಗಾಗಿ ಮಳೆ ಬೇಕು. ಮಳೆ ಬಾರದಿದ್ದರೆ ಬೆಳೆಗಳು ಬಾಡಲು ಶುರು ಮಾಡುತ್ತವೆ.ಮಹಾದೇವಪ್ಪ ಏವೂರ, ಸಹಾಯಕ ಕೃಷಿ ನಿರ್ದೇಶಕರು ಇಂಡಿ
------ಬಾಕ್ಸ್
ನೀರಿನ ಬರ ಯಾವಾಗ ನೀಗತ್ತೆ:ಇಂಡಿ ತಾಲೂಕಿನಲ್ಲಿ ಇರುವುದು ಎರಡೇ ಕಾಲ, ಒಂದು ಚಳಿಗಾಲ, ಇನ್ನೊಂದು ಕಡು ಬೆಸಿಗೆ ಕಾಲ. ಮಳೆಗಾಲದ ಬದಲು ಬರಗಾಲ ಆರಂಭವಾಗುತ್ತಿದೆ. ಸುಮಾರು 10 ವರ್ಷಗಳಿಂದ ಇಂಡಿ ಭಾಗದಲ್ಲಿ ಸರಿಯಾದ ಪ್ರಮಾಣದಲ್ಲಿ ಮಳೆ ಇಲ್ಲದ್ದರಿಂದ ಬೆಳೆಯು ಇಲ್ಲ, ಜನ, ಜಾನುವಾರುಗಳು ಇರುವ ವಸತಿ ಪ್ರದೇಶಕ್ಕೆ ಟ್ಯಾಂಕರ್ ಮೂಲಕ ನೀರು ಹರಿಸುವುದು ತಪ್ಪಿದ್ದಲ್ಲ. ಮಳೆಗಾಲದಲ್ಲಿಯೂ ಜನರಿಗೆ ಕುಡಿಯುವ ನೀರಿಗಾಗಿ ಪಂಚಾಯಿತಿಯಿಂದ ಟ್ಯಾಂಕರ್ ಬೇಡಿಕೆ ಬರುತ್ತದೆ ಎಂದರೆ, ಈ ಭಾಗ ಮಳೆಯಿಂದ ವಂಚಿತವಾಗಿರುವುದು ಸ್ಪಷ್ಟವಾಗುತ್ತದೆ. ಹೀಗಾಗಿ ಇಂಡಿ ಭಾಗ ಸಂಪೂರ್ಣ ನೀರಾವರಿಗೆ ಒಳಪಡುವಂತೆ, ವರ್ಷವಿಡಿ ಕಾಲುವೆಗಳಿಗೆ ನೀರು ಹರಿಯುವ ಹಾಗೆ ನೀರಾವರಿ ಸೌಲಭ್ಯ ವ್ಯವಸ್ಥೆ ಮಾಡುವ ಅವಶ್ಯಕತೆ ಇದೆ.