ಸಾರಾಂಶ
ಮಳೆಯಿಂದಾಗಿ ಮನೆ ಹಾನಿಯಾಗಿರುವ ಸಂತ್ರಸ್ತ ಗುರುಪಾದಪ್ಪ ಆಯೆಟ್ಟಿ ಗ್ರಾಮದಲ್ಲಿರುವ ಮಾರುತಿ ದೇವಸ್ಥಾನದಲ್ಲಿ ತಮ್ಮ ಕುಟುಂಬದ 8 ಜನರೊಂದಿಗೆ ವಾಸವಾಗಿದ್ದಾರೆ.
ನವಲಗುಂದ:
ತಾಲೂಕಿನ ಕೆಲ ಭಾಗಗಳಲ್ಲಿ ಭಾರಿ ಮಳೆಯಿಂದ ಮನೆಗಳು ಭಾಗಶಃ ನೆಲಕಚ್ಚಿ, ಜನ ಜೀವನವನ್ನೇ ದುಸ್ತರಗೊಳಿಸಿವೆ. ಹನಸಿ ಗ್ರಾಮದಲ್ಲಿ 50 ಮನೆಗಳಿಗೆ ಮಳೆ ನೀರು ನುಗ್ಗಿ 3 ಮನೆಗಳು ಬಿದ್ದಿದ್ದು, ಅವರೆಲ್ಲ ನೆರೆ ಹೊರೆಯವರ ಮನೆ ಅಥವಾ ದೇವಸ್ಥಾನಗಳಲ್ಲಿ ವಾಸಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ತಾಲೂಕಿನಲ್ಲಿ ಸುರಿದ ರೋಹಿಣಿ ಮಳೆಯ ಹೊಡೆತಕ್ಕೆ ಮನೆ ಬಿದ್ದು ಮನೆಯಲ್ಲಿರುವ ಪೀಠೋಪಕರಣ ಹಾಗೂ ಸಾಮಗ್ರಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ಅದೃಷ್ಟವಶಾತ್ ಯಾರಿಗೂ ತೊಂದರೆಯಾಗಿಲ್ಲ. ತಾಲೂಕಿನ ಹನಸಿ ಗ್ರಾಮದ ಕಲ್ಮೇಶ್ವರ ಓಣಿ ಹಾಗೂ ಡಾ. ಬಿ.ಆರ್. ಅಂಬೇಡ್ಕರ ಓಣಿಗಳಿಗೆ ತುಪ್ಪರಿ ಹಳ್ಳದ ನೀರು 50ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದ್ದಲ್ಲದೆ 3 ಮನೆಗಳು ನೆಲಕಚ್ಚಿವೆ. ಈ ಭಾಗದಲ್ಲಿ ಹೆಚ್ಚಾಗಿ ಮಣ್ಣಿನ ಮನೆಗಳು ಇರುವುದರಿಂದ ಮತ್ತಷ್ಟು ಮನೆಗಳು ಧರೆಗುರುಳುವ ಆತಂಕ ಮನೆಮಾಡಿದೆ.ಮಳೆಯಿಂದಾಗಿ ಮನೆ ಹಾನಿಯಾಗಿರುವ ಸಂತ್ರಸ್ತ ಗುರುಪಾದಪ್ಪ ಆಯೆಟ್ಟಿ ಗ್ರಾಮದಲ್ಲಿರುವ ಮಾರುತಿ ದೇವಸ್ಥಾನದಲ್ಲಿ ತಮ್ಮ ಕುಟುಂಬದ 8 ಜನರೊಂದಿಗೆ ವಾಸವಾಗಿದ್ದಾರೆ. ಲಲಿತಾ ಹೆಬ್ಬಳ್ಳಿ ಹಾಗೂ ಬಸಪ್ಪ ಇಂಡಿ ಇವರೂ ತಮ್ಮ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದಾರೆ.
ಈಗಾಗಲೇ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಹಾರ ಒದಗಿಸುವ ಬಗ್ಗೆ ಭರವಸೆ ನೀಡಿದ್ದಾರೆ. ನಾವು ಕೂಲಿನಾಲಿ ಮಾಡುತ್ತಾ ಜೀವನ ಸಾಗಿಸುತ್ತಿದ್ದೇವೆ. ಮಳೆಯಿಂದಾಗಿ ನಮ್ಮ ಮನೆಗೆ ಹಾನಿಯಾಗಿದ್ದು, 4 ದಿನಗಳಿಗೆ ಆಗುವಷ್ಟು ಆಹಾರ ಮಾತ್ರ ಇದೆ. ಮುಂದೆ ಆ ದೇವರೇ ದಾರಿ. ಆದಷ್ಟು ಬೇಗನೆ ಸರ್ಕಾರ ಸೂಕ್ತ ಪರಿಹಾರ ನೀಡಿ ಸೂರು ಮತ್ತು ಜೀವನಕ್ಕೆ ದಾರಿ ಮಾಡಿಕೊಡಬೇಕು ಎಂದು ಸಂತ್ರಸ್ತ ಗುರುಪಾದಪ್ಪ ಆಯೆಟ್ಟಿ ತಮ್ಮ ಅಳಲನ್ನು ತೋಡಿಕೊಂಡನು.ಪರಿಹಾರಕ್ಕೆ ಕ್ರಮ:ಹನಸಿ ಗ್ರಾಮಕ್ಕೆ ಭೇಟಿ ನೀಡಿದ್ದು ಅಲ್ಲಿ ಮಳೆಯಿಂದಾಗಿ ಎರಡು ಮನೆ ಬಿದ್ದಿದ್ದರಿಂದ ಆ ಕುಟುಂಬಸ್ಥರಿಗೆ ತೊಂದರೆಯಾಗಿದೆ. ಅವರಿಗೆ ಕೂಡಲೆ ಸರ್ಕಾರದಿಂದ ಪರಿಹಾರ ಒದಗಿಸಲು ಕ್ರಮಕೈಗೊಳ್ಳಲಾಗುವುದು. ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದ್ದರಿಂದ ಆಯಾ ಗ್ರಾಮಗಳ ಗ್ರಾಮ ಲೆಕ್ಕಾಧಿಕಾರಿಗಳಿಗೆ ಸಮೀಕ್ಷೆ ಮಾಡಲು ತಿಳಿಸಲಾಗಿದೆ ಎಂದು ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರ ಕನ್ನಡಪ್ರಭಕ್ಕೆ ತಿಳಿಸಿದರು.
;Resize=(128,128))
;Resize=(128,128))