ಮೇಲ್ಸೇತುವೆಯಿಂದ ಆಗಿರುವ ಸಮಸ್ಯೆಯನ್ನು ತಕ್ಷಣವೇ ನಿವಾರಿಸಿ ಮಳೆನೀರು ಪಟ್ಟಣದೊಳಗೆ ನುಗ್ಗದಂತೆ ಕ್ರಮಕೈಗೊಳ್ಳಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.
ಅಣ್ಣಿಗೇರಿ:
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ರೈಲ್ವೆ ಇಲಾಖೆಯಿಂದ ನವಲಗುಂದ ರಸ್ತೆಗೆ ಮೇಲ್ಸೆತುವೆಯನ್ನು ಅವೈಜ್ಞಾನಿಕವಾಗಿ ನಿರ್ಮಿಸಿರುವ ಹಿನ್ನೆಲೆಯಲ್ಲಿ ಬುಧವಾರ ಸುರಿದ ಭಾರೀ ಮಳೆಗೆ ಅಣ್ಣಿಗೇರಿ ಪಟ್ಟಣಕ್ಕೆ ಮಳೆ ನೀರು ನುಗ್ಗಿದೆ. ಈ ಹಿನ್ನೆಲೆಯಲ್ಲಿ ಗುರುವಾರ ಜಿಲ್ಲಾಧಿಕಾರಿ ಸ್ನೇಹಲ್ ಆರ್ ಹಾಗೂ ಶಾಸಕ ಎನ್.ಎಚ್. ಕೋನರಡ್ಡಿ ಭೇಟಿ ನೀಡಿ ಪರಿಶೀಲಿಸಿದರು.ಇದೇ ವೇಳೆ ಶಾಸಕರು, ಮೇಲ್ಸೇತುವೆಯಿಂದ ಆಗಿರುವ ಸಮಸ್ಯೆಯನ್ನು ತಕ್ಷಣವೇ ನಿವಾರಿಸಿ ಮಳೆನೀರು ಪಟ್ಟಣದೊಳಗೆ ನುಗ್ಗದಂತೆ ಕ್ರಮಕೈಗೊಳ್ಳಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ರೈಲ್ವೆ ಇಲಾಖೆ ಅಧಿಕಾರಿಗಳು ಸೂಚಿಸಿದರು.
ಸಭೆ ಕರೆಯಿರಿ:ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಮಿಸಿದ ಬೈಪಾಸ್ ರಸ್ತೆ, ಡಾ. ಬಿ.ಆರ್ ಅಂಬೇಡ್ಕರ್ ನಗರಗಳಿಗೆ ಗಟಾರ ಹಾಗೂ ಸರ್ವೀಸ್ ರಸ್ತೆ ನಿರ್ಮಿಸದೆ ಇರುವುದು, ರೈಲ್ವೆ ಇಲಾಖೆಯಿಂದ ಹಳ್ಳಿಕೇರಿ ರಸ್ತೆ ಹತ್ತಿರ ಅಂಡರ್ ಪಾಸ್ ಅಗಲೀಕರಣ, ನವಲಗುಂದ ರಸ್ತೆಗೆ ಮೇಲ್ಸೇತುವೆ ನಿರ್ಮಿಸುತ್ತಿರುವ ಕಾಮಗಾರಿ, ಕೊಂಡಿಕೊಪ್ಪ ಅಂಡರ್ ಪಾಸ್ ಸರಿಯಾಗಿ ಡಿಪಿಆರ್ ಮಾಡದೆ ಅವೈಜ್ಞಾನಿಕ ಕಾಮಗಾರಿ ಆರಂಭಿಸಿದ ಪರಿಣಾಮ ಪಟ್ಟಣ ಜಲಾವೃತವಾಗಿದೆ. ಹೀಗಾಗಿ ತಕ್ಷಣ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ರೈಲ್ವೆ ಇಲಾಖೆಯ ಅಧಿಕಾರಿಗಳು ಪಟ್ಟಣಕ್ಕೆ ನೀರು ಬರದಂತೆ ತಕ್ಷಣ ಕ್ರಮ ಕೈಗೊಳ್ಳಬೇಕು. ಜತೆಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಅಧ್ಯಕ್ಷತೆಯಲ್ಲಿ ಸಭೆ ಕರೆದು ಬಾಕಿ ಉಳಿದ ಕಾಮಗಾರಿಗಳನ್ನು ತೀವ್ರಗತಿಯಲ್ಲಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಕೋನರಡ್ಡಿ ಸೂಚಿಸಿದರು.
ಜಿಲ್ಲಾಧಿಕಾರಿ ಆರ್. ಸ್ನೇಹಲ್, ಯಾವುದೇ ಕಾಮಗಾರಿ ಮಾಡುವ ಮುಂಚೆ ಆ ಸ್ಥಳಕ್ಕೆ ಭೇಟಿ ನೀಡಿ ಎಲ್ಲಿಂದ ಮಳೆ ನೀರು ಬರುತ್ತದೆ ಎಂಬುದನ್ನು ತಿಳಿದು ಅಂದಾಜು ಪಟ್ಟಿ ತಯಾರಿಸಬೇಕು. ಇಲ್ಲದೇ ಹೋದಲ್ಲಿ ಈ ರೀತಿಯ ಅವಾಂತರಗಳು ನಡೆಯುತ್ತವೆ. ಕೂಡಲೇ ಪಟ್ಟಣಕ್ಕೆ ನೀರು ಬರದಂತೆ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿದರು.ನವಲಗುಂದ, ಅಣ್ಣಿಗೇರಿ ಹಳೇ ರಸ್ತೆ ಹಾಗೂ ಹೆಬಸೂರ ಪ್ಲಾಟ್, ಅಂಬಿಕಾ ನಗರ ಪ್ಲಾಟ್, ಎಸ್.ಎಂ. ಪಾಟೀಲ ಸಭಾಭವನ ಆವರಣ ಹಾಗೂ ನಗರದ ಹಲವು ಕಡೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬರುವುದನ್ನು ತಡೆಯಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.ಈ ವೇಳೆ ಪುರಸಭೆ ಅಧ್ಯಕ್ಷ ಶಿವಾನಂದ ಬೆಳಗಾರ, ಉಪವಿಭಾಗಾಧಿಕಾರಿ ಶಾಲಂ ಹುಸೇನ, ಎನ್‌ಎಚ್‌ಐ ಅಧಿಕಾರಿ ಭುವನೇಶಕುಮಾರ, ರೈಲ್ವೆ ಅಧಿಕಾರಿ ಶ್ರೀಕಾಂತ, ಬಸವರಾಜ ಹುಬ್ಬಳ್ಳಿ, ರಾಷ್ಟ್ರೀಯ ಹೆದ್ದಾರಿ ಕಾರ್ಯನಿರ್ವಾಹಕ ಎಂಜೀನಿಯರ್ ವಿ.ಎನ್. ಪಾಟೀಲ, ಎಇಇ ಸತೀಶ ನಾಗನೂರ, ಸೋಮನಗೌಡ ಪಾಟೀಲ, ತಹಸೀಲ್ದಾರ್ ಮಂಜುನಾಥ ದಾಸಪ್ಪನವರ ಸೇರಿ ಹಲವರಿದ್ದರು.