ಸಾರಾಂಶ
- ನೂರಾರು ಎಕರೆ ಬೆಳೆ ಜಲಾವೃತ: ರೈತರ ಅಳಲು
- - - ಕನ್ನಡಪ್ರಭ ವಾರ್ತೆ, ದಾವಣಗೆರೆ ರಾತ್ರೋರಾತ್ರಿ ಸುರಿಯುತ್ತಿದ್ದ ಮಳೆ ಬುಧವಾರ ದಾವಣಗೆರೆ ನಗರ, ತಾಲೂಕು ಸೇರಿದಂತೆ ಜಿಲ್ಲೆಯ ವಿವಿಧೆಡೆ ಮತ್ತೆ ಜನರನ್ನು ಆತಂಕಕ್ಕೆ ನೂಕಿದೆ.ನಗರದಲ್ಲಿ ಬುಧವಾರ ಸಂಜೆ 7 ಗಂಟೆ ನಂತರ ದಟ್ಟಮೋಡ ಆವರಿಸಿ, ದಿಢೀರನೇ 25-30 ನಿಮಿಷ ಭರ್ಜರಿ ಮಳೆಯಾಯಿತು. ನೋಡ ನೋಡುತ್ತಿದ್ದಂತೆಯೇ ರಸ್ತೆಗಳಲ್ಲಿ ಜನಸಂಚಾರ ವಿರಳವಾಗಿ, ಮಾರುಕಟ್ಟೆ ಪ್ರದೇಶದಲ್ಲಿ ವ್ಯಾಪಾರ ವಹಿವಾಟು ಸ್ಥಬ್ಧಗೊಂಡಿತು.
ಜೋರು ಮಳೆಯಾದಾಗ ಎಂದಿನಂತೆ ತಗ್ಗು ಪ್ರದೇಶಕ್ಕೆ ನೀರು ನುಗ್ಗುವುದು, ಹೊಸ ಬಡಾವಣೆಗಳು, ಸೌಕರ್ಯ ವಂಚಿತ ಪ್ರದೇಶಗಳು, ಮಂಡಕ್ಕಿ ಭಟ್ಟಿ ಪ್ರದೇಶ, ಕಿಷ್ಕಿಂದೆಯಂತಹ ಪ್ರದೇಶಗಳಲ್ಲಿ, ಹೆಂಚಿನ ಮನೆ, ತಗಡಿನ ಶೀಟುಗಳ ಮನೆಗಳಿರುವ ಜನರು ತೀವ್ರ ಪರದಾಡಬೇಕಾಯಿತು.ನ್ಯಾಮತಿ ತಾಲೂಕಿನ ಆರುಂಡಿ ಗ್ರಾಮದಲ್ಲಿ ರೈತ ಸುರೇಶ ಜವಳಿ ತೋಟದಲ್ಲಿ ಬೆಳೆದಿದ್ದ ಟೊಮೆಟೋ ಬೆಳೆ ಮಳೆ ಹೊಡೆತಕ್ಕೆ ಸಿಲುಕಿತು. ಬಾಕ್ಸ್‌ಗಳಿಗೆ ಟೊಮೆಟೋ ತುಂಬುತ್ತಿದ್ದ ವೇಳೆ ಮಳೆನೀರಿನಲ್ಲಿ ಕೊಚ್ಚಿಹೋದವು. 1 ಗಂಟೆಗೂ ಹೆಚ್ಚು ಕಾಲ ರೈತ ಪರದಾಡುತ್ತಿದ್ದ ದೃಶ್ಯ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಸುಮಾರು ₹25-₹30 ಸಾವಿರ ನಷ್ಟವಾಗಿದೆ ಎನ್ನಲಾಗಿದೆ.
ಮಂಗಳವಾರ ರಾತ್ರಿ ಸುರಿದ ಮಳೆ, ಬುಧವಾರ ಮಧ್ಯಾಹ್ನ, ಸಂಜೆ ಅಲ್ಲಲ್ಲಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಯಿತು. ಚನ್ನಗಿರಿ ತಾಲೂಕಿನ ಬಿಲ್ಲಹಳ್ಳಿಯಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿತ್ತು. ಒಂದೂವರೆ ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯಿಂದಾಗಿ ರೈತರು, ಗ್ರಾಮೀಣರು ಕಂಗಾಲಾಗಿದ್ದರು. ರಾತ್ರೋರಾತ್ರಿ ಮಳೆಯಿಂದಾಗಿ ಮನೆಯೊಳಗೆ ನುಗ್ಗಿದ ನೀರನ್ನು ಮನೆ ಮಂದಿಯೆಲ್ಲಾ ಸೇರಿ, ನೀರು ಹೊರಹಾಕುವಲ್ಲಿ ಸಾಕಾಗಿಹೋದರು. ಚಿಕ್ಕ ಉಡ ಗ್ರಾಮದಲ್ಲಿ ಮಳೆ ನೀರು ಹಳ್ಳದಂತೆ ಗ್ರಾಮದಲ್ಲಿ ಹರಿಯಿತು.ದಾವಣಗೆರೆ ತಾಲೂಕಿನ ನೀರ್ಥಡಿ ಕೆರೆ ಕೋಡಿ ಬಿದ್ದಿದ್ದು, ತುಂಬಿ ಹರಿದ ಹಳ್ಳಗಳಿಂದಾಗಿ ಹುಲಿಕಟ್ಟೆ ಗ್ರಾಮದಲ್ಲಿ ನೂರಾರು ಎಕರೆ ಬೆಳೆ ಜಲಾವೃತವಾಗಿದೆ. ಹುಲಿಕಟ್ಟೆ, ಗುಮ್ಮನೂರು, ಗುಡಾಳ್ ಭಾಗದಲ್ಲಿ 350 ಎಕರೆಗೂ ಅಧಿಕ ಮೆಕ್ಕೆಜೋಳ, ಅಡಕೆ, ಇತರೆ ತರಕಾರಿ ಬೆಳೆಗಲು ಜಲಾವೃತವಾಗಿವೆ. ಮಳೆ ನೀರಲ್ಲಿ ಬೆಳೆ ಜಲಾವೃತವಾಗಿ ಕೈಗೆ ತುತ್ತು ಬಾಯಿಗೆ ಬರದೇ ರೈತರು ಕಂಗಾಲು ಬೆಳೆ ಕಳೆದುಕೊಂಡ ರೈತರು ಒತ್ತಾಯಿಸಿದ್ದಾರೆ.
- - - (-ಫೋಟೋ:)