ಜಿಲ್ಲೆಯಾದ್ಯಂತ ಮೃಗಶಿರ ಮಳೆಯಾರ್ಭಟ, ಹರ್ಷಗೊಂಡ ರೈತರು

| Published : Jun 09 2024, 01:43 AM IST

ಸಾರಾಂಶ

ಮಳಿಗೆ, ಮನೆಗಳಿಗೆ ನುಗ್ಗಿದ ನೀರು. ನದಿಗಳಲ್ಲಿಯೂ ಹೆಚ್ಚುತ್ತಿದೆ ನೀರಿನ ಪ್ರಮಾಣ. ಅನ್ನದಾತರಲ್ಲಿ ಹರ್ಷವಾಗಿದೆ

ಕನ್ನಡಪ್ರಭ ವಾರ್ತೆ ಬೆಳಗಾವಿ

ನಗರ ಸೇರಿದಂತೆ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಶನಿವಾರ ಧಾರಾಕಾರ ಮಳೆ ಸುರಿದಿದೆ. ಪರಿಣಾಮ ಅಲ್ಲಲ್ಲಿ ಮಳೆಯ ಅವಾಂತರ ಸೃಷ್ಟಿಯಾಗಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ಸಂಚಾರ ತೀವ್ರ ದುಸ್ತರವಾಗಿದೆ. ನದಿಗಳಿಗೆ ನೀರಿನ ಪ್ರಮಾಣ ಕೂಡ ನಿಧಾನವಾಗಿ ಹೆಚ್ಚಳವಾಗುತ್ತಿದೆ.

ಶನಿವಾರ ಬೆಳಗ್ಗೆಯಿಂದಲೇ ಮೋಡ ಕವಿದ ವಾತಾರಣ ನಿರ್ಮಾಣವಾಗಿತ್ತು. ಜತೆಗೆ ಜಿಲ್ಲೆಯ ಕೆಲವು ಭಾಗಗಳಲ್ಲಿ ಜಿಟಿಜಿಟಿ ಮಳೆ ಸುರಿದಿದೆ. ಮಧ್ಯಾಹ್ನದ ಹೊತ್ತಿಗೆ ಕಾರ್ಮೋಡ ಕವಿದ ಕೆಲವೇ ಸಮಯದಲ್ಲಿ ಬಿರುಸಿನಿಂದ ಮಳೆ ಸುರಿಯಲು ಆರಂಭಿಸಿತು. ಇದರಿಂದಾಗಿ ನಗರದ ಗೋವಾವೇಸ್‌ ಬಳಿಯ ಇರುವ ಕಾರ್ಪೊನ್‌ ಕಾಂಪ್ಲೆಕ್ಸ್‌ ಜಲಾವೃತವಾಯಿತು. ಅಲ್ಲಿರುವ ಬಾಡಿಗೆ ಆಧಾರದ ಮೇಲೆ ವ್ಯಾಪಾರ ನಡೆಸುತ್ತಿರುವ ಅಟೋಮೊಬೈಲ್‌ ಅಂಗಡಿಗಳಲ್ಲಿ ನೀರು ನುಗ್ಗಿದೆ. ಈ ಮಳಿಗೆಯಲ್ಲಿ ಸ್ಮಾರ್ಟ್‌ಸಿಟಿ, ಪಾಲಿಕೆ ಕಚೇರಿ, ಬ್ಯಾಂಕ್‌, ಟೀ ಸ್ಟಾಲ್‌ ಸೇರಿದಂತೆ ಇನ್ನಿತರೆ ವ್ಯಾಪಾರ ವಹಿವಾಟಿನ ಅಂಗಡಿಗಳಿವೆ. ಕೆಳಮಹಡಿಯಲ್ಲಿರುವ ಅಂಗಡಿ ಮುಂಗಟ್ಟುಗಳಲ್ಲಿ ನೀರು ನುಗ್ಗಿದ್ದರಿಂದ ವ್ಯಾಪಾರಿಗಳಿಗೆ ಭಾರೀ ನಷ್ಟವಾಗಿದೆ.

ಮನೆಯೊಳಗೆ ನುಗ್ಗಿದ ನೀರು:

ನಗರದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ವಡಗಾವಿ ಪ್ರದೇಶದ ಆನಂದ ನಗರದಲ್ಲಿರುವ 30ಕ್ಕೂ ಅಧಿಕ ಮನೆಗಳಿಗೆ ನುಗ್ಗಿದ ನೀರು ನುಗ್ಗಿದೆ. ಅಡುಗೆ ಮನೆ, ಬೆಡ್ ರೂಂಗೆ ನುಗ್ಗಿದ ನೀರು ಹೊರಹಾಕಲು ನಿವಾಸಿಗಳು ಹರಸಾಹಸ ಪಟ್ಟರು. ಅಲ್ಲದೇ ಕಾಲುವೆ ಅತಿಕ್ರಮಣದಿಂದ ಸಮಸ್ಯೆ ಆಗುತ್ತಿದೆ. ಸೂಕ್ತ ಚರಂಡಿ ವ್ಯವಸ್ಥೆ ಇಲ್ಲ, ಬಳ್ಳಾರಿ ನಾಲಾ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಳಿಸಿದ್ದರಿಂದ ಮಳೆ ನೀರು ಮನೆಗೆ ನುಗ್ಗುತ್ತಿದೆ. ಸಮಸ್ಯೆ ಬಗ್ಗೆ ಸ್ಥಳೀಯ ಶಾಸಕರು, ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಮನೆಗೆ ನೀರು ನುಗ್ಗಿದ್ದರಿಂದ ಮಹಿಳೆಯರು, ವೃದ್ಧರು, ಬಾಣಂತಿಯರು ಮತ್ತು ಮಕ್ಕಳು ಕೂಡ ಪರದಾಡಿದರು. ಇನ್ನೂ ಬಸವನ ಗಲ್ಲಿಯಲ್ಲಿ ಮನೆ ಕುಸಿದಿದ್ದು, ಅದೃಷ್ಟವಶಾತ್‌ ಯಾವುದೇ ಅನಾಹುತ ಸಂಭವಿಸಿಲ್ಲ.

ಇನ್ನೂ ಪಾಂಗುಳಗಲ್ಲಿ, ಸಾಂಬ್ರಾ ರಸ್ತೆಯ ಮೆಲ್ಸೇತುವೆ, ಪೋರ್ಟ್‌ರಸ್ತೆ, ಪೀರನವಾಡಿ, ಭಾಗ್ಯ ನಗರ, ಅನಗೋಳ, ಗಣಪತಿ ಗಲ್ಲಿ, ಸದಾಶಿವ ನಗರ ಅಶೋಕ ವೃತ್ತದಿಂದ ಮಹಾಂತೇಶ ನಗರ ಕಡೆಗೆ ಸಾಗಿದ ರಸ್ತೆಗಳಲ್ಲಿ ಮೊಳಕಾಲು ಎತ್ತರಕ್ಕೆ ನೀರು ಹರಿದಿದೆ. ಗಣಪತಿಯಲ್ಲಿ ಬೀದಿ ವ್ಯಾಪಾರಿಗಳ ತರಕಾರಿ, ಹಣ್ಣು, ಹೂ ನೀರಿಗೆ ಕೊಚ್ಚಿ ಹೋಗಿದ್ದು, ಹಿಡಿದಿಟ್ಟುಕೊಳ್ಳಲು ವ್ಯಾಪಾರಿಗಳು ಹರಸಾಹಸ ಪಟ್ಟರು.

ದಂಡು ಮಂಡಳಿ ಕಚೇರಿ ಮುಂಭಾಗದಲ್ಲಿ ಹಾದು ಹೋಗಿರುವ ಖಾನಾಪೂರ ರಸ್ತೆ ಹಾಗೂ ಗ್ಲೋಬ್‌ ಚಿತ್ರ ಮಂದಿರ ಜಲಾವೃತವಾಗಿದ್ದು, ಅಕ್ಷರಶಃ ಹಳ್ಳದ ರೀತಿಯ ಕಾಣಿಸತೊಡಗಿತ್ತು. ಹೆಚ್ಚಿನ ಪ್ರಮಾಣದ ನೀರು ಸಂಗ್ರಹವಾಗಿದ್ದರಿಂದ ವಾಹನ ಸವಾರರು ಪರದಾಡಿದರು. ಸವಾರರು ಅನಿವಾರ್ಯ ಎಂಬಂತೆ ನೀರಿನಲ್ಲೇ ವಾಹನ ಸಂಚರಿಸಿಕೊಂಡು ಹೋದರು. ಪೋರ್ಟ್‌ ರಸ್ತೆ ಜೀಜಾಮಾತಾ ವೃತ್ತದಿಂದ ಪೊಲೀಸ್‌ ಚೌಕ್‌ ಕಡೆಗೆ ಸಾಗಿದ ರಸ್ತೆಯ ಎರಡು ಬದಿ ಭಾರೀ ಪ್ರಮಾಣದಲ್ಲಿ ನೀರು ಸಂಗ್ರಹವಾಗಿತ್ತು. ಕೆಲವು ದ್ವಿಚಕ್ರ ವಾಹನಗಳು ಅರ್ಧದಷ್ಟು ನೀರಿನಲ್ಲಿ ಮುಳಗಿದ್ದವು. ಮುಖ್ಯ ಹಾಗೂ ಸಂಪರ್ಕ ರಸ್ತೆಗಳಲ್ಲಿ ನೀರು ಸಂಗ್ರಹವಾಗಿದ್ದರಿಂದ ನಗರದಲ್ಲಿ ವಾಹನ ದಟ್ಟಣೆ ಹೆಚ್ಚಾಗಿತ್ತು. ರಸ್ತೆಯಲ್ಲಿ ನೀರು ಸಂಗ್ರಹವಾಗಿದ್ದನ್ನು ಕಂಡ ಜನರು ಪಾಲಿಕೆ, ದಂಡು ಮಂಡಳಿ ಹಾಗೂ ಜಿಲ್ಲಾಡಳಿತ, ಜನಪ್ರತಿನಿಧಿಗಳ ವಿರುದ್ಧ ಹಿಡಿಶಾಪ ಹಾಕಿದರು. ಅಲ್ಲದೇ ಪ್ರತಿ ವರ್ಷವೂ ನಗರದಲ್ಲಿ ಮಳೆಗಾಲ ಸಮಯದಲ್ಲಿ ಇಂತಹ ಸಮಸ್ಯೆ ಉದ್ಬವಿಸುತ್ತಲೇ ಇದ್ದು, ಪರಿಹಾರ ಕಂಡುಕೊಳ್ಳಲು ಇಚ್ಛಾಶಕ್ತಿ ಪ್ರದರ್ಶಿಸುವಲ್ಲಿ ಸಂಪೂರ್ಣ ವಿಫಲವಾಗಿರುವುದಕ್ಕೆ ಸಾರ್ವಜನಿಕರು ಕೆಂಡ ಕಾರಿದರು.

ಮಾರುಕಟ್ಟೆ ಪ್ರದೇಶಗಳಾದ ಕಾಕತಿ ವೇಸ್‌, ಶನಿವಾರ ಕೂಟ, ಗಣಪತಿ ಗಲ್ಲಿ, ಪಾಂಗುಳ ಗಲ್ಲಿ, ನರಗುಂದಕರ ಭಾವಿ ಚೌಕ, ಟೆಂಗಿನಕೇರಿ ಗಲ್ಲಿ, ಮಾರುತಿ ಗಲ್ಲಿ, ರವಿವಾರ ಪೇಟ, ಸೇರಿದಂತೆ ಇನ್ನೀತರ ಪ್ರದೇಶಗಳಲ್ಲಿ ಚರಂಡಿ ತುಂಬಿದ ಪರಿಣಾಮ ಕೊಳಚೆ ನೀರು ರಸ್ತೆಯ ಮೇಲೆ ಹಳ್ಳದಂತೆ ಹರಿಯುತ್ತಿರುವುದರಿಂದ ಬೀದಿಬದಿ ವ್ಯಾಪಾರಿಗಳು ತೀವ್ರ ಸಮಸ್ಯೆ ಎದುರಿಸುವಂತಾಯಿತು.

ನದಿಗಳಿಗೆ ಬಂದ ನೀರು:

ಮಹಾರಾಷ್ಟ್ರ ಘಟ್ಟ ಪ್ರದೇಶದಲ್ಲಿಯೂ ಉತ್ತಮ ಮಳೆಯಾಗುತ್ತಿದೆ. ಮಹಾರಾಷ್ಟ್ರದ ಮಹಾಬಲೇಶ್ವರದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಕೃಷ್ಣಾ ನದಿಗೆ ಬರುತ್ತಿರುವ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ. ಅದರಂತೆ ಮಲಪ್ರಭಾ, ಘಟಪ್ರಭಾ, ಹಿರಣ್ಯಕೇಶಿ, ದೂಧಗಂಗಾ, ವೇದಗಂಗಾ ನದಿಗಳಲ್ಲಿಯೂ ನೀರಿನ ಪ್ರಮಾಣ ಏರಿಕೆಯಾಗಿದೆ.

ಬೆಳಗಾವಿ ಜಿಲ್ಲೆಯ ವಿವಿಧೆಡೆಯೂ ಉತ್ತಮ ಮಳೆಯಾಗುತ್ತಿದೆ. ಹುಕ್ಕೇರಿ, ಚಿಕ್ಕೋಡಿ, ರಾಯಬಾಗ, ಅಥಣಿ ತಾಲೂಕುಗಳಲ್ಲಿ ಮುಂಗಾರು ಮಳೆ ಅಬ್ಬರ ತುಸು ಜೋರಾಗಿಯೆ ಇತ್ತು. ತಾಲೂಕಿನಲ್ಲಿರುವ ಬಹುತೇಕ ರಸ್ತೆಗಳು ಜಲಾವೃತವಾಗಿದ್ದವು.