ರೋಹಿಣಿ ಮಳೆ ನಂಬಿಕೊಂಡು ರೈತರು ಹೆಸರು, ತೊಗರಿ, ಹತ್ತಿ ಸೇರಿದಂತೆ ಇನ್ನಿತರ ಬೆಳೆ ಬಿತ್ತನೆ ಮಾಡಿದ್ದಾರೆ. ಆದರೆ, ಕಳೆದ ೨೦ ದಿನಗಳಿಂದ ತಾಲೂಕಿನಲ್ಲಿ ಮಳೆ ಬೀಳದೇ ಇರುವುದರಿಂದ ಮೊಳಕೆಯೊಡೆದ ಸಸಿಗಳು ಬಾಡುತ್ತಿವೆ.
ಮಹದೇವಪ್ಪ ಎಂ. ಸ್ವಾಮಿ
ಶಿರಹಟ್ಟಿ: ತಾಲೂಕಿನಾದ್ಯಂತ ದಿನ ಕಳೆದಂತೆ ಪ್ರಸಕ್ತ ಸಾಲಿನ ಮುಂಗಾರು ಕ್ಷೀಣಿಸುತ್ತಿದ್ದು, ರೈತರಲ್ಲಿ ಆತಂಕದ ಕಾರ್ಮೋಡ ಕವಿದಿದೆ. ಅವಧಿಗಿಂತ ಮೊದಲೇ ಅರಂಭವಾಗಿದ್ದ ಮುಂಗಾರು ರೈತರಲ್ಲಿ ಆಶಾಭಾವನೆ ಮೂಡಿಸಿತ್ತು. ಅದೇ ರೀತಿ ರೋಹಿಣಿ ಮಳೆ ನಂಬಿಕೊಂಡು ರೈತರು ಹೆಸರು, ತೊಗರಿ, ಹತ್ತಿ ಸೇರಿದಂತೆ ಇನ್ನಿತರ ಬೆಳೆ ಬಿತ್ತನೆ ಮಾಡಿದ್ದಾರೆ. ಆದರೆ, ಕಳೆದ ೨೦ ದಿನಗಳಿಂದ ತಾಲೂಕಿನಲ್ಲಿ ಮಳೆ ಬೀಳದೇ ಇರುವುದರಿಂದ ಮೊಳಕೆಯೊಡೆದ ಸಸಿಗಳು ಬಾಡುತ್ತಿವೆ.ಮಳೆ ಕೊರತೆಯಿಂದ ಹತ್ತಿ ಬೆಳೆ ಒಣಗುವ ಸ್ಥಿತಿಗೆ ತಲುಪಿರುವ ಹಿನ್ನೆಲೆಯಲ್ಲಿ ರೈತರು ಟ್ಯಾಂಕರ್ ಮೂಲಕ ನೀರು ಪೂರೈಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಸಮರ್ಪಕ ಮಳೆಯಿಲ್ಲದ ಕಾರಣ ಹೊಲಗಳಲ್ಲಿನ ತೇವಾಂಶ ಕಡಿಮೆಯಾಗಿದ್ದು, ಬೆಳೆ ಒಣಗುವ ಆತಂಕ ಎದುರಾಗಿದೆ. ಇದರಿಂದ ಬೆಳೆ ಉಳಿಸಿಕೊಳ್ಳಲು ಹೆಚ್ಚಿನ ವೆಚ್ಚ ಭರಿಸಿ ಟ್ಯಾಂಕರ್ ಮೂಲಕ ತಂದು ಬೆಳೆಗೆ ನೀರುಣಿಸುತ್ತಿದ್ದಾರೆ.
ಮುಂಗಾರು ಮಳೆ ಕ್ಷೀಣಗೊಂಡಿರುವ ಹಿನ್ನೆಲೆಯಲ್ಲಿ ರೈತರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಸಮಯಕ್ಕೆ ಸರಿಯಾಗಿ ಮಳೆಯಾಗದ ಕಾರಣ ಹೊಲಗಳಲ್ಲಿನ ತೇವಾಂಶ ಕಡಿಮೆಯಾಗಿದ್ದು, ಹತ್ತಿ ಸೇರಿದಂತೆ ವಿವಿಧ ಬೆಳೆಗಳು ಬಾಡಲಾರಂಭಿಸಿವೆ. ಬೆಳೆ ಉಳಿಸಿಕೊಳ್ಳಲು ಕೆಲ ರೈತರು ಟ್ಯಾಂಕರ್ ಮೂಲಕ ನೀರುಣಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆ ವಿಳಂಬವಾದರೆ ಬೆಳೆ ಉತ್ಪಾದನೆ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ.ಕಳೆದೆರಡು ವಾರಗಳಿಂದ ಒಣ ಹವೆ, ಬಿಸಿಲು ಮುಂದುವರಿದಿದ್ದು, ಬೆಳಗಿನಿಂದ ಮಧ್ಯಾಹ್ನದ ವರೆಗೆ ಬಿರು ಬಿಸಿಲಿನ ವಾತಾವರಣವಿರುತ್ತದೆ. ಸಂಜೆ ವೇಳೆ ತಂಪು ಹವಾಮಾನ ಉಂಟಾಗಿ ಮಳೆ ಬೀಳುವ ಯಾವ ಲಕ್ಷಣಗಳೂ ಕಾಣದಿರುವುದು ರೈತರಲ್ಲಿ ಕಳವಳಕ್ಕೆ ಕಾರಣವಾಗಿದೆ.
ತಾಲೂಕಿನ ವರವಿ ಗ್ರಾಮಕ್ಕೆ ತೆರಳುವ ಮಾರ್ಗದಲ್ಲಿರುವ ರಾಜಪ್ಪ ಅರ್ಕಸಾಲಿ ಎಂಬ ರೈತರೊಬ್ಬರ ಜಮೀನಿನಲ್ಲಿ ಬೆಳೆದ ಹತ್ತಿ ಬೆಳೆ ನೀರಿನ ಕೊರತೆಯಿಂದ ಬಾಡುತ್ತಿರುವುದು ಕೃಷಿ ವಲಯದ ದುಸ್ಥಿತಿಗೆ ಸಾಕ್ಷಿಯಾಗಿದೆ. ಈಗಾಗಲೇ ಸಾವಿರಾರು ರೂಪಾಯಿ ವೆಚ್ಚ ಮಾಡಿ ಬೀಜ ಬಿತ್ತಿ, ರಸಗೊಬ್ಬರ ಹಾಕಿ ಕೃಷಿ ಚಟುವಟಿಕೆ ಕೈಗೊಂಡಿದ್ದು, ಒಂದು ಎಕರೆ ಹತ್ತಿ ಬೆಳೆಗೆ ಬೀಜ, ರಸಾಯನಿಕ ಗೊಬ್ಬರ, ಉಳುಮೆ ಹಾಗೂ ಬಿತ್ತನೆ ವೆಚ್ಚ ಸೇರಿ ಸುಮಾರು ₹೬ ಸಾವಿರದಿಂದ ₹೮ ಸಾವಿರದ ರೆಗೆ ಖರ್ಚು ಮಾಡಲಾಗಿದೆ. ಮಳೆ ಬರದಿದ್ದರೆ ಕೃಷಿ ಕಾರ್ಯಕ್ಕೆ ಹೂಡಿಕೆ ಮಾಡಿದ ಹಣ ಮಣ್ಣುಪಾಲಾಗುವ ಭೀತಿ ಎದುರಾಗಿದೆ.ಹವಾಮಾನ ಇಲಾಖೆ ಮುನ್ಸೂಚನೆಯಂತೆ ಮುಂದಿನ ದಿನಗಳಲ್ಲಿ ಮಳೆಯಾಗುವ ನಿರೀಕ್ಷೆಯಿದ್ದರೂ, ಸಧ್ಯದ ಪರಿಸ್ಥಿತಿ ರೈತರಲ್ಲಿ ಆತಂಕ ಮೂಡಿಸಿದೆ. ಸರ್ಕಾರ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಬೆಳೆ ಪರಿಶೀಲಿಸಿ ಅಗತ್ಯ ನೆರವು ಹಾಗೂ ಮಾರ್ಗದರ್ಶನ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಕಳೆದ ೨೦ ದಿನಗಳಿಂದ ಮಳೆಯಾಗಿಲ್ಲ. ಇದು ಮಳೆಗಾಲೋ ಬ್ಯಾಸಗಿಕಾಲೋ ತಿಳಿಯದಂತಾಗಿದೆ. ಒಂದು ಎಕರೆ ಬೆಳೆಗೆ ೩ರಿಂದ ೪ ಟ್ಯಾಂಕರ್ ನೀರು ಬೇಕಾಗುತ್ತದೆ. ಒಂದು ಟ್ಯಾಂಕರ್ ನೀರಿನ ಬೆಲೆ ₹೫೦೦ರಿಂದ ₹೬೦೦ ವರೆಗೆ ಇದೆ. ಹತ್ತಿ ಬೆಳೆ ಉಳಿಸಿಕೊಳ್ಳಲು ರೈತರು ಸಾವಿರಾರು ಖರ್ಚು ಮಾಡುತ್ತಿದ್ದಾರೆ ಎನ್ನುತ್ತಾರೆ ವರವಿ ಗ್ರಾಮದ ರೈತ ಹನಮಂತಪ್ಪ ಹರಿಜನ.