ಈ ಬಾರಿ ಮುಂಗಾರು ಮಳೆ ಕೈಕೊಟ್ಟಿದ್ದು, ತಾಲೂಕಿನಲ್ಲಿ ಕೃಷಿ ಚಟುವಟಿಕೆ ಸಂಪೂರ್ಣ ಕುಂಠಿತಗೊಂಡಿವೆ. ಕೃಷಿ ಮಾತ್ರವಲ್ಲದೆ, ಮುಂಬರುವ ದಿನಗಳಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೂ ತತ್ವಾರ ಉಂಟಾಗುವ ಮುನ್ಸೂಚನೆ ಕಾಣಿಸುತ್ತಿದೆ.
ಬಸವರಾಜ ಸರೂರ
ಕನ್ನಡಪ್ರಭ ವಾರ್ತೆ ರಾಣಿಬೆನ್ನೂರುಈ ಬಾರಿ ಮುಂಗಾರು ಮಳೆ ಕೈಕೊಟ್ಟಿದ್ದು, ತಾಲೂಕಿನಲ್ಲಿ ಕೃಷಿ ಚಟುವಟಿಕೆ ಸಂಪೂರ್ಣ ಕುಂಠಿತಗೊಂಡಿವೆ. ಕೃಷಿ ಮಾತ್ರವಲ್ಲದೆ, ಮುಂಬರುವ ದಿನಗಳಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೂ ತತ್ವಾರ ಉಂಟಾಗುವ ಮುನ್ಸೂಚನೆ ಕಾಣಿಸುತ್ತಿದೆ.
ಮಳೆಯ ಅಭಾವ:ತಾಲೂಕಿನ ಜೂನ್ ತಿಂಗಳಿನಲ್ಲಿ ವಾಡಿಕೆ ಮಳೆ 73.90 ಮಿ.ಮೀ. ಇದ್ದು, 63.95 ಮಿಮೀ ಮಾತ್ರ ಮಳೆಯಾಗಿದೆ. ಜುಲೈ ತಿಂಗಳಿನಲ್ಲಿ ವಾಡಿಕೆ ಮಳೆ 98.10 ಮಿ.ಮೀ. ಇದ್ದು ಇದುವರೆಗೂ ಕೇವಲ 18.8 ಮಿಮೀ ಮಾತ್ರ ಮಳೆಯಾಗಿದ್ದು, ರೈತರಲ್ಲಿ ಆತಂಕ ಮೂಡಿಸಿದೆ.
ಬಿತ್ತನೆ ಕ್ಷೇತ್ರ: ಪ್ರತಿ ವರ್ಷ ಮುಂಗಾರು ಹಂಗಾಮಿನಲ್ಲಿ 51266 (ಮಳೆ ಆಶ್ರಿತ 38348, ನೀರಾವರಿ 12918) ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗುತ್ತಿದ್ದು, ಆ ಪೈಕಿ ಪ್ರಸಕ್ತ ಸಾಲಿನಲ್ಲಿ 43,585 (ಮಳೆ ಆಶ್ರಿತ 36,098, ನೀರಾವರಿ 7,487) ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಹೆಚ್ಚಿನ ಪ್ರಮಾಣದಲ್ಲಿ (36,098) ಮೆಕ್ಕೆಜೋಳ ಬಿತ್ತನೆ ಮಾಡಲಾಗಿದೆ.ಒಣಗುತ್ತಿರುವ ಬಿತ್ತಿದ ಪೈರು: ಸಕಾಲಕ್ಕೆ ಮಳೆಯಾಗದ ಹಿನ್ನೆಲೆಯಲ್ಲಿ ಈಗಾಗಲೇ ಬಿತ್ತನೆ ಮಾಡಿರುವ ಕೃಷಿಭೂಮಿಯಲ್ಲಿ ಮೊಳಕೆಗಳು ಒಣಗುತ್ತಿವೆ. ವರುಣನ ನಿರೀಕ್ಷೆಯಲ್ಲಿ ರೈತರು ದಿನ ದೂಡುವಂತಾಗಿದೆ. ನೀರಾವರಿ ಸೌಲಭ್ಯ ಹೊಂದಿದವರು ಮಾತ್ರ ಸ್ವಲ್ಪ ಮಟ್ಟಿಗೆ ನಿರಾಳರಾಗಿದ್ದಾರೆ.
ಸ್ಥಗಿತಗೊಂಡ ಬಿತ್ತನೆ ಕಾರ್ಯ: ಜಮೀನುಗಳನ್ನು ಹದಮಾಡಿಟ್ಟುಕೊಂಡಿರುವ ರೈತರು ಮಳೆ ಬಾರದ ಮುನ್ಸೂಚನೆ ಅರಿತು ಬಿತ್ತನೆ ಕಾರ್ಯವನ್ನೇ ಕೈಬಿಟ್ಟಿದ್ದಾರೆ. ಜುಲೈ ತಿಂಗಳಿನಲ್ಲಿ ಮೂರ‍್ನಾಲ್ಕು ದಿನ ಮಳೆ ಸುರಿದು ರೈತರಲ್ಲಿ ಆಶಾಭಾವನೆ ನಿರ್ಮಾಣವಾಗಿತ್ತು. ಆದರೆ ಇದೀಗ ಪುನಃ ಮಳೆ ಕೈಕೊಟ್ಟಿರುವುದು ರೈತರನ್ನು ಚಿಂತೆಗೀಡು ಮಾಡಿದೆ.ಆರ್ಥಿಕ ನಷ್ಟದ ಭೀತಿ: ಬಿತ್ತನೆ ಬೀಜ, ಗೊಬ್ಬರ ಹಾಗೂ ಕೂಲಿಗಾಗಿ ಸಾವಿರಾರು ರುಪಾಯಿ ಸಾಲ ಮಾಡಿರುವ ರೈತರು ಈಗ ಕಂಗಾಲಾಗಿದ್ದಾರೆ.
ಬರಗಾಲ ಘೋಷಣೆಗೆ ಆಗ್ರಹ: ಮಳೆ ಕೊರತೆ ಕಾರಣ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡುವಂತೆ ಈಗಾಗಲೇ ರೈತಸಂಘದ ವತಿಯಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಮಳೆ ಪ್ರಮಾಣ ಕಡಿಮೆಯಾಗಿದೆ. ಕೆಲವು ಕಡೆಗಳಲ್ಲಿ ಮುಂಚಿತವಾಗಿ ಬಿತ್ತನೆ ಮಾಡಿರುವ ರೈತರು ಇದೀಗ ಮಳೆ ಕೈಕೊಟ್ಟಿರುವುದರಿಂದ ಕಂಗಾಲಾಗಿದ್ದಾರೆ. ಆದ್ದರಿಂದ ಸರ್ಕಾರ ಕೂಡಲೇ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರೈತ ಮುಖಂಡ ಹನುಮಂತಪ್ಪ ಕಬ್ಬಾರ ಹೇಳಿದರು.