ಸಾರಾಂಶ
ಕಡಿರುದ್ಯಾವರ ಗ್ರಾಮದ ಸಮೀಪ ಗಾಳಿಯ ಪರಿಣಾಮ 150ಕ್ಕಿಂತ ಅಧಿಕ ಪಪ್ಪಾಯಿ ಗಿಡಗಳು ಧರೆಗುರುಳಿದವು. ಹಲವಾರು ತೋಟಗಳಲ್ಲಿ ನೂರಾರು ಅಡಕೆ, ರಬ್ಬರ್ ಮರಗಳು ಮುರಿದುಬಿದ್ದಿವೆ. ಮನೆ, ಕೊಟ್ಟಿಗೆಗಳ ಶೀಟುಗಳು ಹಾರಿಹೋಗಿವೆ.
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ತಾಲೂಕು ಕೇಂದ್ರ ಸೇರಿದಂತೆ, ಕಡಿರುದ್ಯಾವರ, ಮಿತ್ತಬಾಗಿಲು, ಮಲವಂತಿಗೆ, ದಿಡುಪೆ, ಉಜಿರೆ, ನಡ, ಕನ್ಯಾಡಿ, ಬಂದಾರು ಮೊದಲಾದ ಪರಿಸರಗಳಲ್ಲಿ ಭಾನುವಾರ ಗಾಳಿ, ಗುಡುಗು ಸಹಿತ ಉತ್ತಮ ಮಳೆಯಾಗಿದ್ದರೆ ಉಳಿದೆಡೆ ಸಾಮಾನ್ಯ ಮಳೆ ಸುರಿದಿದೆ. ಮಧ್ಯಾಹ್ನ 3 ಗಂಟೆ ಸುಮಾರಿಗೆ ಆರಂಭವಾದ ಮಳೆ ಸುಮಾರು ಅರ್ಧ ತಾಸು ಸಾಲ ಸುರಿಯಿತು. ಕೆಲವೆಡೆ ಸಂಜೆ 5ಗಂಟೆ ಬಳಿಕ ಮಳೆ ಸುರಿಯಿತು.ಕಡಿರುದ್ಯಾವರ ಗ್ರಾಮದ ಸಮೀಪ ಗಾಳಿಯ ಪರಿಣಾಮ 150ಕ್ಕಿಂತ ಅಧಿಕ ಪಪ್ಪಾಯಿ ಗಿಡಗಳು ಧರೆಗುರುಳಿದವು. ಹಲವಾರು ತೋಟಗಳಲ್ಲಿ ನೂರಾರು ಅಡಕೆ, ರಬ್ಬರ್ ಮರಗಳು ಮುರಿದುಬಿದ್ದಿವೆ. ಮನೆ, ಕೊಟ್ಟಿಗೆಗಳ ಶೀಟುಗಳು ಹಾರಿಹೋಗಿವೆ.
ಭಾನುವಾರ ಕಾಜೂರು ಉರೂಸ್ ಸಂಭ್ರಮಕ್ಕೆ ಮಳೆ ತಂಪೆರೆಯಿತು. ಈ ಪ್ರದೇಶದಲ್ಲಿ ಮಧ್ಯಾಹ್ನ ಸುಮಾರು ಅರ್ಧ ತಾಸು ಕಾಲ ಸುರಿದ ಉತ್ತಮ ಮಳೆ ಧೂಳು ಮತ್ತು ಬಿಸಿಲಿನ ತಾಪಕ್ಕೆ ವಿರಾಮ ನೀಡಿ ತಂಪಿನ ವಾತಾವರಣ ಸೃಷ್ಟಿಸಿತು.ಮೆಸ್ಕಾಂಗೆ ನಷ್ಟ: ಭಾರಿ ಗಾಳಿಯ ಪರಿಣಾಮ ಬೆಳ್ತಂಗಡಿ ಹಾಗೂ ಉಜಿರೆ ಮೆಸ್ಕಾಂ ಉಪ ವಿಭಾಗದ ನಡ, ಕಾಜೂರು, ಕಡಿರುದ್ಯಾವರ, ಧರ್ಮಸ್ಥಳ ಮೊದಲಾದ ಭಾಗಗಳಲ್ಲಿ 12ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮುರಿದುಬಿದ್ದು ಮೆಸ್ಕಾಂಗೆ 2 ಲಕ್ಷ ರು.ಗಿಂತ ಅಧಿಕ ನಷ್ಟ ಸಂಭವಿಸಿದೆ. ವಿದ್ಯುತ್ ತಂತಿಗಳ ಮೇಲೆ ಮರದ ರೆಂಬೆಗಳು ಉರುಳಿ ಹಲವೆಡೆ ವಿದ್ಯುತ್ ಪೂರೈಕೆ ಅಸ್ತವ್ಯಸ್ತಗೊಂಡಿತು. ಕಾನರ್ಪ ತೂಗು ಸೇತುವೆ ಸಮೀಪ 33/11ಕೆವಿ ವಿದ್ಯುತ್ ಲೈನ್ ಮೇಲೆ ಅಡಕೆ ಮರ ಬಿದ್ದು ಬೆಂಕಿ ಹೊತ್ತಿಕೊಂಡ ಘಟನೆಯು ನಡೆಯಿತು. ನಡ, ಕಡಿರುದ್ಯಾವರ ಮೊದಲಾದ ಗ್ರಾಮಗಳ ಗ್ರಾಮೀಣ ರಸ್ತೆಗಳಲ್ಲಿ ಮರ ಬಿದ್ದು ಸಂಚಾರಕ್ಕೆ ಅಡ್ಡಿ ಉಂಟಾಯಿತು.