ಮಳೆಗಾಗಿ ಗ್ರಾಮಸ್ಥರಿಂದ ಮಳೆರಾಯನ ಪೂಜೆ

| Published : Sep 20 2024, 01:49 AM IST

ಸಾರಾಂಶ

ತಿಪಟೂರು ತಾಲೂಕಿನಲ್ಲಿ ಮಳೆ ಇಲ್ಲದೆ ರಾಗಿ ಸೇರಿದಂತೆ ವಿವಿಧ ಬೆಳೆಗಳು ಒಣಗುತ್ತಿದ್ದು ಮಳೆರಾಯ ಕೃಪೆ ತೋರಲೆಂದು ತಾಲೂಕಿನ ನೊಣವಿನಕೆರೆ ಹೋಬಳಿ ಆಲ್ಬೂರು ಗ್ರಾಮಸ್ಥರು ಮಳೆರಾಯನ ಪೂಜೆ ಮಾಡುವ ಮೂಲಕ ವರುಣದೇವನಿಗಾಗಿ ಪ್ರಾರ್ಥನೆ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ತಾಲೂಕಿನಲ್ಲಿ ಮಳೆ ಇಲ್ಲದೆ ರಾಗಿ ಸೇರಿದಂತೆ ವಿವಿಧ ಬೆಳೆಗಳು ಒಣಗುತ್ತಿದ್ದು ಮಳೆರಾಯ ಕೃಪೆ ತೋರಲೆಂದು ತಾಲೂಕಿನ ನೊಣವಿನಕೆರೆ ಹೋಬಳಿ ಆಲ್ಬೂರು ಗ್ರಾಮಸ್ಥರು ಮಳೆರಾಯನ ಪೂಜೆ ಮಾಡುವ ಮೂಲಕ ವರುಣದೇವನಿಗಾಗಿ ಪ್ರಾರ್ಥನೆ ಸಲ್ಲಿಸಿದರು. ಪೂರ್ವಜರು ಮಳೆ ಬಾರದಿದ್ದರೆ ಕತ್ತೆಗಳ ಮದುವೆ, ಕಪ್ಪೆಗಳ ಮದುವೆ ಮತ್ತು ಚಿಕ್ಕ ಮಕ್ಕಳಿಗೆ ಮದುವೆ ಮಾಡಿಸುವ ಮೂಲಕ ವರುಣನಿಗೆ ಪೂಜೆ ಸಲ್ಲಿಸಿ ಪ್ರಾರ್ಥಿಸುತ್ತಿದ್ದರು. ಈ ವಾಡಿಕೆಯಂತೆ ಆಲ್ಬೂರು ಗ್ರಾಮಸ್ಥರು ಕಳೆದ ಬಾರಿ ಕತ್ತೆಗಳಿಗೆ ಮದುವೆ ಮಾಡಿಸಿ ಭಕ್ತಿಯಿಂದ ಪ್ರಾರ್ಥಿಸಿದ್ದರ ಫಲವಾಗಿ ಮಳೆಯೂ ಸಹ ಬಂದಿತ್ತು. ಈಗ ರಾಗಿ ಬಿತ್ತನೆ ನಂತರ ಮತ್ತೆ ಮಳೆರಾಯ ಮುನಿಸಿಕೊಂಡಿರುವ ಕಾರಣ ಗ್ರಾಮಸ್ಥರು ಚಿಕ್ಕ ಹೆಣ್ಣು ಮಕ್ಕಳಿಗೆ ಮದುವೆ ಮಾಡಿಸಿ ಚಂದ ಮಾಮನನ್ನು ಒಂಭತ್ತು ದಿನಗಳ ಕಾಲ ಪೂಜೆ ಮಾಡಿದ್ದಾರೆ. ಕೊನೆಯ ದಿನ ವರನಾಗಿ ರಿತನ್ಯ, ವಧುವಾಗಿ ಸಬ್ಬೇನಹಳ್ಳಿಯ ಯಶಸ್ವಿನಿ ಇವರನ್ನು ನವ ವಧು-ವರರಂತೆ ಅಲಂಕರ ಮಾಡಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದರು. ಗ್ರಾಮದಲ್ಲಿ ಒಂದು ರೀತಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ಈ ರೀತಿ ಪೂಜೆ ಮಾಡುವುದರಿಂದ ಮಳೆ ಬರುವ ನಿರೀಕ್ಷೆಯಿದೆ ಎನ್ನುತ್ತಾರೆ ಗ್ರಾಮದ ಹಿರಿಯರು.