ನರ್ಸರಿ ಉದ್ಯಮವನ್ನು ನಷ್ಟಕ್ಕೆ ತಳ್ಳಿದ ಮಳೆ

| Published : Aug 20 2025, 01:30 AM IST

ಸಾರಾಂಶ

ಸಾಮಾನ್ಯವಾಗಿ ನರ್ಸರಿ ಉದ್ಯಮ ಆರಂಭವಾಗುವುದು ಏಪ್ರಿಲ್ ಮಧ್ಯಭಾಗದಿಂದ ಮೇ ಮಧ್ಯಭಾಗದ ನಡುವೆ. ನರ್ಸರಿ ಮಾಡಿದ ಗಿಡಗಳು ಮಣ್ಣಿಗೆ ಬೇರು ನೆಲಕಚ್ಚಲು ಒಂದೇರಡು ತಿಂಗಳ ಕಾಲವಕಾಶ ಬೇಕಾಗಿದೆ. ಆದರೆ, ಈ ಬಾರಿ ಅವಧಿಗೂ ಮೊದಲೇ ಮಳೆ ಆರಂಭವಾಗಿರುವುದರಿಂದ ನರ್ಸರಿಯಲ್ಲಿ ಗಿಡಗಳು ಬೇರುಗಟ್ಟುವ ಮುನ್ನ ಶೀತದಿಂದ ಕೊಳೆಯಲಾರಂಭಿಸಿದ್ದು, ಎಷ್ಟೇ ಮುಂಜಾಗ್ರತ ಕ್ರಮ ಕೈಗೊಂಡರೂ ನರ್ಸರಿ ಉಳಿಸಿಕೊಳ್ಳಲು ಸಾಕಷ್ಟು ನರ್ಸರಿ ಮಾಲೀಕರಿಗೆ ಸಾಧ್ಯವಾಗಿಲ್ಲ.

ಕನ್ನಡಪ್ರಭ ವಾರ್ತೆ ಸಕಲೇಶಪುರ

ಪ್ರಸಕ್ತ ವರ್ಷದ ಅತಿಯಾದ ಮಳೆ ತಾಲೂಕಿನ ನರ್ಸರಿ ಉದ್ಯಮವನ್ನು ನೆಲಕಚ್ಚುವಂತೆ ಮಾಡಿದೆ. ಮೇ ಎರಡನೇ ವಾರದಿಂದ ಆರಂಭವಾಗಿರುವ ಮಳೆ ಕಳೆದ ಮೂರು ತಿಂಗಳಿನಿಂದ ಸುರಿಯುತ್ತಿರುವ ಪರಿಣಾಮ ವಾತವರಣದಲ್ಲಿ ಹೆಚ್ಚಿರುವ ಶೀತಾಂಶ ನರ್ಸರಿ ಉದ್ಯಮವನ್ನು ನಷ್ಟದತ್ತ ದೂಡಿದೆ.

ನಷ್ಟ ಹೇಗೆ:

ಸಾಮಾನ್ಯವಾಗಿ ನರ್ಸರಿ ಉದ್ಯಮ ಆರಂಭವಾಗುವುದು ಏಪ್ರಿಲ್ ಮಧ್ಯಭಾಗದಿಂದ ಮೇ ಮಧ್ಯಭಾಗದ ನಡುವೆ. ನರ್ಸರಿ ಮಾಡಿದ ಗಿಡಗಳು ಮಣ್ಣಿಗೆ ಬೇರು ನೆಲಕಚ್ಚಲು ಒಂದೇರಡು ತಿಂಗಳ ಕಾಲವಕಾಶ ಬೇಕಾಗಿದೆ. ಆದರೆ, ಈ ಬಾರಿ ಅವಧಿಗೂ ಮೊದಲೇ ಮಳೆ ಆರಂಭವಾಗಿರುವುದರಿಂದ ನರ್ಸರಿಯಲ್ಲಿ ಗಿಡಗಳು ಬೇರುಗಟ್ಟುವ ಮುನ್ನ ಶೀತದಿಂದ ಕೊಳೆಯಲಾರಂಭಿಸಿದ್ದು, ಎಷ್ಟೇ ಮುಂಜಾಗ್ರತ ಕ್ರಮ ಕೈಗೊಂಡರೂ ನರ್ಸರಿ ಉಳಿಸಿಕೊಳ್ಳಲು ಸಾಕಷ್ಟು ನರ್ಸರಿ ಮಾಲೀಕರಿಗೆ ಸಾಧ್ಯವಾಗಿಲ್ಲ. ತಾಲೂಕಿನಲ್ಲಿ ಸುಮಾರು ಇನ್ನೂರಕ್ಕೂ ಅಧಿಕ ಜನರು ನರ್ಸರಿಯನ್ನು ಮುಖ್ಯ ಕಸುಬಾಗಿಸಿಕೊಂಡಿದ್ದು ವಾರ್ಷಿಕ ೬೦ ಲಕ್ಷಕ್ಕೂ ಅಧಿಕ ಗಿಡಗಳನ್ನು ಉತ್ಪಾದಿಸುತ್ತಾರೆ ಎಂಬ ಅಂಕಿ ಅಂಶವಿದೆ. ಪ್ರಮುಖವಾಗಿ ಇಲ್ಲಿನ ನರ್ಸರಿ ಗಿಡಗಳಾದ ಕಾಫಿ, ಕಾಳುಮೆಣಸು ಹಾಗೂ ಅಡಿಕೆಗಿಡಗಳು ರಾಜ್ಯದ ಹಲವೆಡೆ ಬೇಡಿಕೆ ಇದೆ.ಮಹಾರಾಷ್ಟ್ರಕ್ಕೆ ಹೆಚ್ಚಿನ ಸಾಗಣೆ:

ಪ್ರಸಕ್ತ ದೇಶದಲ್ಲಿ ನಾಲ್ಕುಲಕ್ಷದ ತೊಂಬತ್ತು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಾಫಿ ಬೆಳೆಯಲಾಗುತ್ತಿದ್ದು ಇದನ್ನು ದ್ವಿಗುಣಗೊಳಿಸುವ ಗುರಿ ಹೊಂದಿರುವ ಕಾಫಿ ಮಂಡಳಿ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಪಶ್ಚಿಮಘಟ್ಟದಂಚಿನಲ್ಲಿ ಕಾಫಿ ಕೃಷಿಗೆ ಹೆಚ್ಚಿನ ಉತ್ತೇಜನ ನೀಡುತ್ತಿದೆ. ಪರಿಣಾಮ ಕಳೆದ ಅರ್ಧ ದಶಕದಿಂದ ತಾಲೂಕಿನಿಂದ ಭಾರಿ ಪ್ರಮಾಣದಲ್ಲಿ ಕಾಫಿ ಗಿಡಗಳು ಈ ಭಾಗಕ್ಕೆ ರವಾನೆಯಾಗುತ್ತಿರುವುದರಿಂದ ಸ್ಥಳೀಯ ಕಾಫಿ ಬೆಳೆಗಾರರಿಗೆ ಕಾಫಿಗಿಡಗಳ ಕೊರತೆ ಎದುರಾಗುತ್ತಿದೆ. ಈ ಬಾರಿ ಮಳೆಯಿಂದಾಗಿ ಸಾಕಷ್ಟು ನರ್ಸರಿಗಳು ನಾಮವಶೇಷವಾಗಿರುವುದರಿಂದ ಕಾಫಿ ಸೇರಿದಂತೆ ಇತರೆ ಗಿಡಗಳಿಗೆ ಮತ್ತಷ್ಟು ಕೊರತೆ ಎದುರಾಗಿದ್ದು ಸದ್ಯ ಹೊಸದಾಗಿ ಕಾಫಿ ಗಿಡಗಳನ್ನು ನಾಟಿ ಮಾಡುವ ಸಮಯ ಇದಾಗಿರುವುದರಿಂದ ಬೆಳೆಗಾರರು ಗಿಡಗಳಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮೋಸ:

ಬೇಡಿಕೆಗೆ ತಕ್ಕಂತೆ ನರ್ಸರಿ ಗಿಡಗಳು ಲಭ್ಯವಿಲ್ಲದ ಕಾರಣ ಕೆಲವು ನರ್ಸರಿ ಮಾಲೀಕರು ಕಾಫಿ ತೋಟಗಳಲ್ಲಿ ಹುಟ್ಟಿರುವ (ಹಕ್ಲೆ ಗಿಡ) ಗಿಡಗಳನ್ನು ತಂದು ಬುಟ್ಟಿಗಳಿಗೆ ನಾಟಿ ಮಾಡಿ ಮಾರಾಟ ಮಾಡುವ ಮೂಲಕ ಬೆಳೆಗಾರರಿಗೆ ಮೋಸ ಮಾಡುತ್ತಿದ್ದಾರೆಂಬ ಆರೋಪ ಸಹ ಕೇಳಿಬರುತ್ತಿದೆ.ಹೆಚ್ಚಿದ ದರ:

ಒಂದೆಡೆ ಹೊರರಾಜ್ಯದಲ್ಲಿ ತಾಲೂಕಿನ ನರ್ಸರಿ ಗಿಡಗಳಿಗೆ ಅಧಿಕ ಪ್ರಮಾಣದಲ್ಲಿ ಬೇಡಿಕೆ, ಇದ್ದು ಅಂತರಾಜ್ಯದ ಹಲವು ಬೆಳೆಗಾರರು ಮುಂಗಡ ನೀಡಿ ಗಿಡಗಳನ್ನು ಕಾದಿರಿಸಿರುವುದರಿಂದ ಅವರ ಬೇಡಿಕೆ ಪೊರೈಸುವ ಜವಾಬ್ದಾರಿ ನರ್ಸರಿ ಮಾಲಿಕರ ಮೇಲಿದೆ. ಆದರೆ, ಅತಿಯಾದ ಮಳೆಯಿಂದ ಬೇಡಿಕೆ ಪೂರೈಸುವುದು ಕಷ್ಟಕರವಾಗಿದೆ. ಇದರಿಂದಾಗಿ ಸ್ಥಳೀಯ ಬೆಳೆಗಾರರಿಗೆ ನರ್ಸರಿ ಗಿಡಗಳ ಭಾರಿ ಕೊರತೆ ಎದುರಾಗಿದ್ದು ಹೆಚ್ಚಿನ ದರ ನೀಡಿದರೂ ನರ್ಸರಿ ಗಿಡಗಳು ದೊರೆಯದಾಗಿದೆ ಎಂಬುದು ಬೆಳೆಗಾರರ ವಲಯದಿಂದ ಕೇಳಿಬರುತ್ತಿರುವ ಮಾತು. ಕಳೆದ ವರ್ಷ ಕಾಫಿ ಗಿಡವೊಂದಕ್ಕೆ ೬ ರು. ಗಳಿಂದ ೮ ರು. ದರವಿದ್ದರೆ, ಈ ಬಾರಿ ೧೦ರಿಂದ ೧೫ ರು.ಗಳವರಗೆ ಮಾರಾಟವಾಗುತ್ತಿವೆ. ಮೆಣಸು ಬಳ್ಳಿಗಳು ಪ್ರತಿ ಬುಟ್ಟಿಗೆ ಕಳೆದ ವರ್ಷ ೨೦ ರು.ಗಳಿಂದ ೩೦ ರು.ಗಳ ನಡುವೆ ವ್ಯಾಪಾರವಾಗಿದ್ದರೆ ಪ್ರಸಕ್ತ ವರ್ಷ ನಾಟಿಗೂ ಪೂರ್ವ ದಿನಗಳಲ್ಲೆ ೨೫ ರಿಂದ ೩೫ ರು.ಗಳ ದರದಲ್ಲಿ ಕಾಯ್ದಿರಿಸುವ ಕಾರ್ಯ ನಡೆಯುತ್ತಿದೆ. ಅಡಿಕೆ ಗಿಡಗಳ ದರ ಕಳೆದ ವರ್ಷ ೨೦ ರು.ಗಳಿಂದ ೨೫ ರು.ಗಳಲ್ಲಿದ್ದರೆ ಈ ಬಾರಿ ೩೦ರಿಂದ ೩೫ ರು.ಗಳಿಗೆ ಜಿಗಿತಗೊಂಡಿದೆ.ಹೆಚ್ಚು ನಷ್ಟ:

ತಾಲೂಕಿನಲ್ಲಿ ಸುಮಾರು ೬೦ ಲಕ್ಷಕ್ಕೂ ಅಧಿಕ ಗಿಡಗಳನ್ನು ನರ್ಸರಿಯಲ್ಲಿ ಬೆಳೆಯಲಾಗಿದ್ದು, ಮಳೆಯಿಂದಾಗಿ ಸುಮಾರು ೨೫ ಲಕ್ಷಕ್ಕೂ ಅಧಿಕ ಗಿಡಗಳು ನರ್ಸರಿಯಲ್ಲೇ ನಾಶವಾಗಿದೆ ಎನ್ನಲಾಗುತ್ತಿದೆ. ಸದ್ಯ ಮಳೆ ಅಲ್ಪ ಬಿಡುವು ನೀಡಿರುವುದರಿಂದ ನರ್ಸರಿಯಲ್ಲಿ ಅಳಿದುಳಿದ ಗಿಡಗಳನ್ನು ಸಂರಕ್ಷಿಸುವ ಕಾರ್ಯ ನಡೆಯುತ್ತಿದೆ. ಸದ್ಯ ಪ್ರತಿ ಸಾವಿರ ಗಿಡಗಳನ್ನು ಬೆಳೆಯಲು ನರ್ಸರಿ ಮಾಲೀಕರಿಗೆ ೬ರಿಂದ ೮ ಸಾವಿರ ಖರ್ಚು ತಗುಲುತ್ತಿದ್ದು ಮಳೆಯಿಂದ ಗಿಡಗಳು ಕೊಳೆಯುತ್ತಿರುವುದರಿಂದ ನರ್ಸರಿ ಮಾಲೀಕರು ಲಕ್ಷಾಂತರ ರುಪಾಯಿ ನಷ್ಟ ಹೊಂದುವಂತಾಗಿದೆ. ಅಧಿಕ ಗಳಿಕೆ:

ಸಕಲೇಶಪುರ ಹಾಗೂ ಆಲೂರು ತಾಲೂಕು ನಡುವೆ ಮಳೆಯ ಅಂತರ ೨ ಸಾವಿರ ಮೀ.ಮೀಟರ್ ವ್ಯತ್ಯಾಸವಿರುವುದಲ್ಲದೆ ಆಲೂರು ತಾಲೂಕಿನಲ್ಲಿ ಮಲೆನಾಡಿಗಿಂತ ಹೆಚ್ಚಿನ ಉಷ್ಣಾಂಶದ ವಾತಾವರಣ ಇರುವುದು ನರ್ಸರಿ ಬೆಳೆಗೆ ಉತ್ತಮ ವಾತಾವರಣ ಕಲ್ಪಿಸಿದೆ. ಪರಿಣಾಮ ತಾಲೂಕಿನ ಗಡಿ ಹೊಂದಿಕೊಂಡಿರುವ ಆಲೂರು ತಾಲೂಕಿನ ಹಲವು ಗ್ರಾಮಗಳಲ್ಲಿ ಬೆಳೆದಿರುವ ನರ್ಸರಿಗಳು ಉತ್ತಮವಾಗಿದ್ದು, ಈ ಭಾಗದ ನರ್ಸರಿ ಮಾಲೀಕರು ತಾವು ಬೆಳೆದ ಎಲ್ಲ ಗಿಡಗಳನ್ನು ಅವಧಿಗೂ ಮುನ್ನವೇ ಮಾರಾಟ ಮಾಡುವ ಮೂಲಕ ಅಧಿಕ ಲಾಭ ಗಳಿಸಿದ್ದಾರೆ ಎನ್ನಲಾಗುತ್ತಿದೆ.