ಗದಗದಲ್ಲಿ ಶನಿವಾರ ಸಂಜೆ ಗಂಟೆಗೂ ಅಧಿಕ ಕಾಲ ಸುರಿದ ಧಾರಾಕಾರ ಮಳೆಗೆ ಇಡೀ ನಗರದ ಪ್ರಮುಖ ರಸ್ತೆಗಳು ಕೆರೆಯಂತಾಗಿ ಮಾರ್ಪಟ್ಟಿದ್ದು, ವಾಹನ ಸವಾರರು ಹಾಗೂ ವ್ಯಾಪಾರಸ್ಥರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ.
ಗದಗ: ನಗರದಲ್ಲಿ ಶನಿವಾರ ಸಂಜೆ ಗಂಟೆಗೂ ಅಧಿಕ ಕಾಲ ಸುರಿದ ಧಾರಾಕಾರ ಮಳೆಗೆ ಇಡೀ ನಗರದ ಪ್ರಮುಖ ರಸ್ತೆಗಳು ಕೆರೆಯಂತಾಗಿ ಮಾರ್ಪಟ್ಟಿದ್ದು, ವಾಹನ ಸವಾರರು ಹಾಗೂ ವ್ಯಾಪಾರಸ್ಥರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ.
ವಿಶೇಷವಾಗಿ ನಗರದ ಮಧ್ಯಭಾಗದಲ್ಲಿರುವ ಹಾಗೂ ಅತ್ಯಂತ ಜನದಟ್ಟಣೆಯ ರಸ್ತೆಯಾದ ಪಂಚರಹೊಂಡ ರಸ್ತೆಯು ಮಳೆ ನೀರಿನಿಂದ ಹೊಂಡವಾಗಿ ಮಾರ್ಪಟ್ಟಿತ್ತು. ಸಮರ್ಪಕವಾಗಿ ಹೂಳೆತ್ತದ ಕಾರಣ ಮಳೆ ಬರುತ್ತಿದ್ದಂತೆ ಇಡೀ ಗಟಾರ್‌ಗಳು ತುಂಬಿ ತುಳುಕಿದ್ದು, ಗಲೀಜು ಮಿಶ್ರಿತ ಕಪ್ಪು ನೀರು ರಸ್ತೆಯ ಮೇಲೆ ನದಿಯಂತೆ ಹರಿದಿದೆ. ನಗರದ ಪ್ರಮುಖ ವ್ಯಾಪಾರಿ ಕೇಂದ್ರ ಎಂದೇ ಗುರುತಿಸಲ್ಪಡುವ ಈ ಭಾಗದಲ್ಲಿ ಗಟಾರಿನ ದುರ್ವಾಸನೆಯುಕ್ತ ನೀರು ರಸ್ತೆಯಲ್ಲಿ ಹರಿಯಿತು. ಇದರಿಂದಾಗಿ ಪಾದಚಾರಿಗಳು ಮತ್ತು ಗ್ರಾಹಕರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.ಇದು ಕೇವಲ ಇವತ್ತಿನ ಸಮಸ್ಯೆಯಲ್ಲ, ನಗರದಲ್ಲಿ ಪ್ರತಿ ಬಾರಿ ಮಳೆ ಬಂದಾಗಲೂ ಗಟಾರ್‌ಗಳು ತುಂಬಿ ಈ ರೀತಿಯ ಭೀಕರ ಅವಾಂತರಗಳು ಸೃಷ್ಟಿಯಾಗುತ್ತಲೇ ಇವೆ. ಈ ರಸ್ತೆಯ ದುಸ್ಥಿತಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕಿದ್ದ ಅಧಿಕಾರಿಗಳು ಮಾತ್ರ ಗಮನ ಹರಿಸುತ್ತಿಲ್ಲ. ನಗರದ ಹೃದಯಭಾಗದ ಈ ದುಸ್ಥಿತಿಗೆ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ನಗರಸಭೆ ಕೇವಲ ತೇಪೆ ಕಾರ್ಯ ಮಾಡುವುದನ್ನು ಬಿಟ್ಟು, ಮಳೆ ನೀರು ಸರಾಗವಾಗಿ ಹರಿದು ಹೋಗಲು ಶಾಶ್ವತವಾಗಿ ರಾಜಕಾಲುವೆ ಹಾಗೂ ಗಟಾರುಗಳನ್ನು ವ್ಯವಸ್ಥಿತವಾಗಿ ನಿರ್ಮಿಸಬೇಕು. ದುರಸ್ತಿಯನ್ನೂ ಮಾಡಬೇಕು ಎಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ. ಮುಂಗಾರು ಬಿತ್ತನೆಗೆ ಚುರುಕು
ಗದಗ: ಗದಗ-ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಶನಿವಾರ ಮುಂಗಾರು ಮಳೆ ಉತ್ತಮವಾಗಿ ಸುರಿದಿದ್ದು, ಭೂಮಿ ಹಸನಾಗಿ ಬಿತ್ತನೆ ಕಾರ್ಯ ಚುರುಕಾಗಿದೆ. ಈ ಸಕಾಲಿಕ ಮಳೆಯು ಜಿಲ್ಲೆಯ ಅನ್ನದಾತರಲ್ಲಿ ಹೊಸ ಹರ್ಷ ಹಾಗೂ ಭರವಸೆ ಮೂಡಿಸಿದೆ. ಸದ್ಯ ಸುರಿದಿರುವ ಮಳೆಯು ಜಿಲ್ಲೆಯ ಪ್ರಮುಖ ಮುಂಗಾರು ಬೆಳೆಗಳಿಗೆ ವರದಾನವಾಗಿ ಪರಿಣಮಿಸಿದೆ. ಈಗಾಗಲೇ ಬಿತ್ತನೆಯಾಗಿರುವ ಹಾಗೂ ಬಿತ್ತನೆಗೆ ಸಿದ್ಧವಾಗಿರುವ ಹೆಸರು ಬೆಳೆಗೆ ಈ ಮಳೆ ಸಹಕಾರಿಯಾಗಿದೆ. ಮುಂಗಾರಿನ ಇನ್ನುಳಿದ ಪ್ರಮುಖ ವಾಣಿಜ್ಯ ಬೆಳೆಗಳಾದ ಈರುಳ್ಳಿ, ಮೆಣಸಿನಕಾಯಿ, ಗೋವಿನಜೋಳ, ತೊಗರಿ ಹಾಗೂ ಸೂರ್ಯಕಾಂತಿ ಬೆಳೆಗಳ ಬಿತ್ತನೆ ಪ್ರಕ್ರಿಯೆಗೆ ಈ ಮಳೆ ಹೆಚ್ಚಿನ ಅನುಕೂಲ ಮಾಡಿಕೊಡಲಿದೆ.ಇನ್ನು ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಉತ್ತಮ ಮಳೆಯಾಗಿ ಬಿತ್ತನೆ ಚಟುವಟಿಕೆಗಳು ಕಳೆಗಟ್ಟಿದ್ದರೆ, ಇನ್ನೂ ಕೆಲ ಭಾಗಗಳಲ್ಲಿ ರೈತರು ಇಂದಿಗೂ ಸಕಾಲಿಕ ಮತ್ತು ಭರಪೂರ ಮಳೆಯ ನಿರೀಕ್ಷೆಯಲ್ಲಿದ್ದಾರೆ. ಜಿಲ್ಲಾದ್ಯಂತ ಸಮಾನವಾಗಿ ಮಳೆಯಾಗದಿದ್ದರೂ, ಪ್ರಸ್ತುತ ಆಗಿರುವ ಮಳೆ ಕೃಷಿ ಚಟುವಟಿಕೆಗಳಿಗೆ ವೇಗ ನೀಡಿದೆ.ಹವಾಮಾನ ಇಲಾಖೆ ಮುನ್ಸೂಚನೆ
ಹವಾಮಾನ ಇಲಾಖೆಯು ಮುಂಬರುವ ನಾಲ್ಕೈದು ದಿನಗಳಲ್ಲಿ ಮುಂಗಾರು ರಾಜ್ಯವನ್ನು ಪ್ರವೇಶಲಿದೆ ಎಂದ ಬೆನ್ನಲ್ಲಿಯೇ ಜಿಲ್ಲೆಯ ಕೆಲ ಭಾಗಗಳಲ್ಲಿ ಶನಿವಾರ ಮಳೆಯಾಗಿದೆ. ಮತ್ತಷ್ಟು ಉತ್ತಮ ಮಳೆಯಾಗುವ ಮುನ್ಸೂಚನೆ ನೀಡಿದೆ. ಇದು ಸದ್ಯ ಮಳೆಯ ನಿರೀಕ್ಷೆಯಲ್ಲಿರುವ ತಾಲೂಕುಗಳ ರೈತರಲ್ಲೂ ಸಕಾರಾತ್ಮಕ ಭಾವನೆ ಮೂಡಿಸಿದ್ದು, ಮುಂಗಾರು ಹಂಗಾಮು ಕೈಹಿಡಿಯುವ ವಿಶ್ವಾಸ ವ್ಯಕ್ತವಾಗುತ್ತಿದೆ.