ಮಳೆ ಅರ್ಭಟ: ಕೋಡಿಬಿದ್ದ ಕೆರೆಗಳು

| Published : Oct 12 2025, 01:00 AM IST

ಸಾರಾಂಶ

ಶ್ರೀನಿವಾಸಪುರ ತಾಲೂಕಿನ ಉತ್ತರ ಭಾಗದ ಕೆರೆಗಳಲ್ಲಿ ಪಾಪಶೆಟ್ಟಿಪಲ್ಲಿ ಕೆರೆ, ಬಾಲರೆಡ್ಡಿ ಕೆರೆ, ಕೊಂಡಾಮರಿ, ಕಶೇಟ್ಟಿಪಲ್ಲಿ, ಇಲ್ದೋಣಿ ಗುಂದೇಡು, ರಾಯಲ್ಪಾಡು ಪೈ ಕೆರೆ, ಅಡವಿಬೈರಗಾನಪಲ್ಲಿ ಕೆರೆ, ಕೂರಿಗೆಪಲ್ಲಿ ಸೇರಿದಂತೆ ಹಲವು ಕೆರೆಗಳು ಕೊಡಿ ಬಿದ್ದಿವೆ, ಕೆರೆಗಳು ತುಂಬಿ ಹರಿಯುವ ನೀರು ಬೀರಂಗಿ ಹಳ್ಳ ಸೇರಿ ಅನಾಯಾಸವಾಗಿ ಆಂಧ್ರಕ್ಕೆ ಹರಿದು ಹೋಗುತ್ತಿದೆ.

ಕನ್ನಡಪ್ರಭ ವಾರ್ತೆ ಶ್ರೀನಿವಾಸಪುರ

ಗುರುವಾರ ಹಾಗು ಶುಕ್ರವಾರ ರಾತ್ರಿ ಸಮಯದಲ್ಲಿ ಸುರಿದ ಧಾರಾಕಾರ ಮಳೆಗೆ ಶ್ರೀನಿವಾಸಪುರ ಪಟ್ಟಣದ ಜನಜೀವನ ಅಸ್ತವ್ಯಸ್ತಗೊಂಡಿತ್ತು. ತಗ್ಗುಪ್ರದೇಶದ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಮನೆಯವರು ರಾತ್ರಿಯಿಡೀ ಜಾಗರಣೆ ಮಾಡಬೇಕಾಯಿತು.

ಗುಡುಗು ಸಹಿತ ಅಬ್ಬರದ ಮಳೆಗೆ ಈಚಲಕುಂಟೆ ಸ್ಲಂ ಮನೆಗಳು, ಕೋರ್ಟ್ ಅವರಣ, ಎಪಿಎಂಸಿ ಆವರಣ ಜಲಾವೃತವಾದರೆ, ಕೋಲಾರ ನ್ಯೂ ಸರ್ಕಲ್, ಡಿಗ್ರಿ ಕಾಲೇಜ್ ಹಿಂಬದಿಯ ಭಾಗದಲ್ಲಿ ಅನಧಿಕೃತವಾಗಿ ನಿರ್ಮಾಣವಾಗಿರುವ ಮನೆಗಳಿಗೆ ಮಳೆ ನೀರು ನುಗ್ಗಿದೆ, ತಾಲೂಕಿನ ಕೆಲವೊಂದು ಕೆರೆಗಳು ಕೊಡಿ ಬಿದ್ದಿವೆ.

ಕೆರೆಯಂಗಳದಲ್ಲಿ ಕಟ್ಟಡ

ತಾಲೂಕಿನಾದ್ಯಂತ ಬಹುತೇಕ ಕಡೆ ಧಾರಾಕಾರ ಮಳೆಯಾಗಿದೆ. ಈಚಲಕುಂಟೆ ಕೆರೆಯಂಗಳದಲ್ಲಿ ಹೊಸ ಬಸ್ ನಿಲ್ದಾಣ ನಿರ್ಮಿಸಿದ್ದರೆ, ಕೆರೆ ಅಟ್ಟುಕಟ್ಟು ಪ್ರದೇಶದಲ್ಲಿ ಕೋರ್ಟ್ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಇದರ ಪರಿಣಾಮ ಮಳೆ ಬಂದಾಗಲೆಲ್ಲ ಇಲ್ಲಿ ದೊಡ್ಡಮಟ್ಟದಲ್ಲಿ ನೀರು ಹರಿಯುತ್ತದೆ. ರಾಜಕಾಲುವೆಗಳು ಚಿಕ್ಕದಾಗಿರವುದರಿಂದ ನೀರು ಹರಿವಿಗೆ ಮತ್ತೊಂದು ಅಡಚಣೆಯಾಗಿದೆ. ಕೊಳ್ಳೂರಿಗೆ ಹೊಂದಿಕೊಂಡಿರುವ ದೊಡಮಲದೊಡ್ಡಿ ಗ್ರಾಮ ಅಕ್ಷರಶಃ ದ್ವೀಪದಂತಾಗಿದೆ.ತಾಲೂಕಿನ ಉತ್ತರ ಭಾಗದ ಕೆರೆಗಳಲ್ಲಿ ಪಾಪಶೆಟ್ಟಿಪಲ್ಲಿ ಕೆರೆ, ಬಾಲರೆಡ್ಡಿ ಕೆರೆ, ಕೊಂಡಾಮರಿ, ಕಶೇಟ್ಟಿಪಲ್ಲಿ, ಇಲ್ದೋಣಿ ಗುಂದೇಡು, ರಾಯಲ್ಪಾಡು ಪೈ ಕೆರೆ, ಅಡವಿಬೈರಗಾನಪಲ್ಲಿ ಕೆರೆ, ಕೂರಿಗೆಪಲ್ಲಿ ಸೇರಿದಂತೆ ಹಲವು ಕೆರೆಗಳು ಕೊಡಿ ಬಿದ್ದಿವೆ, ಕೆರೆಗಳು ತುಂಬಿ ಹರಿಯುವ ನೀರು ಬೀರಂಗಿ ಹಳ್ಳ ಸೇರಿ ಅನಾಯಾಸವಾಗಿ ಆಂಧ್ರಕ್ಕೆ ಹರಿದು ಹೋಗುತ್ತಿದೆ. ಇಲ್ಲಿ ಯಾವುದೆ ತಡೆ ಇಲ್ಲದ ಕಾರಣ ನಮ್ಮಲ್ಲಿ ಬಿದ್ದ ಮಳೆ ನೀರು ಆಂಧ್ರದ ಪಾಲಾಗುತ್ತಿದೆ ಎನ್ನುತ್ತಾರೆ ಗಡಿ ಭಾಗದ ಗ್ರಾಮಸ್ಥರು.ಕೋಡಿಪಲ್ಲಿ ಕೆರೆ ಅರ್ಧ ಭರ್ತಿ

ತಾಲೂಕಿನ ದೊಡ್ಡ ಕೆರೆ ಎಂದೇ ಖ್ಯಾತಿ ಪಡೆದಿರುವ ಕೋಡಿಪಲ್ಲಿ ಕೆರೆಗೆ ಅರ್ಧ ಮಟ್ಟಕ್ಕೆ ನೀರು ಬಂದಿದ್ದು, ಮನಳೆ ಮುಂದುವರಿದರೆ ಕೆರೆ ತುಂಬಲಿದೆ. ಧಾರಕಾರ ಮಳೆಯಿಂದಾಗಿ ತಾಲೂಕಿನಲ್ಲಿ ಮಾವಿನ ತೋಟಗಳು ಕೆಸರು ಗದ್ದೆಗಳಾಗಿದ್ದು ನೀರು ಹರಿಯಲು ಜಾಗ ಇಲ್ಲದೆ ಮೊಣಕಾಲುದ್ದ ಮಳೆ ನೀರು ತೋಟಗಳಲ್ಲೆ ನಿಂತಿದೆ.