ಸಾರಾಂಶ
ಜಿಲ್ಲಾ ಆರೋಗ್ಯ ಅಭಿಯಾನದ ಅಂತರ್ ಇಲಾಖೆ ಸಭೆಯಲ್ಲಿ ಪ್ರಶಾಂತ್ ಕುಮಾರ್ ಮಿಶ್ರಾ
ಕನ್ನಡಪ್ರಭ ವಾರ್ತೆ ಬಳ್ಳಾರಿಮದುವೆಯಾಗಲು ಹೆಣ್ಣು ಮಕ್ಕಳಿಗೆ ಕನಿಷ್ಠ 18 ವರ್ಷಗಳಾಗಿರಬೇಕು. ಈ ವಯಸ್ಸಿನ ಕಡ್ಡಾಯ ಮಿತಿಯ ಬಗ್ಗೆ ಪಾಲಕರಿಗೆ ಮನವರಿಕೆ ಮಾಡಿಕೊಡುವ ಕೆಲಸ ವೈದ್ಯಕೀಯ ಸಿಬ್ಬಂದಿಯಿಂದ ಆಗಬೇಕು. ಇದರಿಂದ ಗರ್ಭಿಣಿ ಅವಧಿಯಲ್ಲಾಗುವ ಗಂಡಾಂತರ ತಪ್ಪಿಸಲು ಸಾಧ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಆರೋಗ್ಯ ಅಭಿಯಾನದ ಅಂತರ್ ಇಲಾಖೆ ಸಭೆಯಲ್ಲಿ ಮಾತನಾಡಿದರು.ಶಿಶು ಜನನದ ನಂತರ ಉಂಟಾಗಬಹುದಾದ ತಾಯಿ ಮರಣಗಳನ್ನು ತಡೆಗಟ್ಟಲು ಪಾಲಕರಿಗೆ ಹೆಣ್ಣು ಮಗುವಿಗೆ 18 ವರ್ಷಗಳ ನಂತರ ಮದುವೆ ಮಾಡುವುದರ ಬಗ್ಗೆ ಪೋಷಕರಿಗೆ ಮನದಟ್ಟು ಮಾಡಬೇಕು. ತಾಯ್ತನದ ಜವಾಬ್ದಾರಿ ಹಾಗೂ ವೈಜ್ಞಾನಿಕವಾಗಿ ಗರ್ಭಕೋಶದ ಸಂಪೂರ್ಣ ಬೆಳವಣಿಗೆ ಮಹತ್ವ ಸಹ ತಿಳಿಸುವ ಮೂಲಕ ಹೆಣ್ಣುಮಕ್ಕಳ ಕನಿಷ್ಠ 20 ವರ್ಷ ವಯಸ್ಸಿನ ನಂತರದ ಅವಧಿ ಗರ್ಭವತಿಯಾಗಲು ಸೂಕ್ತ ಸಮಯ ಎಂದು ಸಮುದಾಯದಲ್ಲಿ ಜಾಗೃತಿ ಮೂಡಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಜಿಲ್ಲೆಯಲ್ಲಿ ಗರ್ಭಿಣಿ ಮತ್ತು ಬಾಣಂತಿಯರ ಮರಣವನ್ನು ಶೂನ್ಯಕ್ಕೆ ತರಲು ಗರ್ಭಿಣಿ ಎಂದು ನೋಂದಣಿ ಮಾಡಿದ ದಿನದಿಂದಲೇ ಯಾವುದೇ ಸಣ್ಣ ಆರೋಗ್ಯ ಸಮಸ್ಯೆ ಕಂಡುಬಂದರೂ ನಿರ್ಲಕ್ಷಿಸದೇ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಸೂಕ್ತ ಪರೀಕ್ಷೆ ಮಾಡಿಸುವ ವ್ಯವಸ್ಥೆ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಬೇಕು ಎಂದರು.ಇದರ ಜೊತೆಗೆ ಗರ್ಭಿಣಿಯ ಆರೋಗ್ಯದ ಸಮಸ್ಯೆಗಳನ್ನು ಸ್ಥಳೀಯ ಮಟ್ಟದ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಸಾಧ್ಯವಾಗದಿದ್ದರೆ ಪಾಲಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮನವರಿಕೆ ಮಾಡಿ ಮೇಲ್ಮಟ್ಟದ ಆಸ್ಪತ್ರೆಗೆ ಮುಂಚಿತವಾಗಿ ಮಾಹಿತಿ ನೀಡಿ ಗರ್ಭಿಣಿಯನ್ನು ಕಳುಹಿಸಿಕೊಡುವ ವ್ಯವಸ್ಥೆ ಮಾಡಬೇಕು ಎಂದರು.
ಚೊಚ್ಚಲ ಹೆರಿಗೆ, ಅಧಿಕ ರಕ್ತದೊತ್ತಡ, ಮೊದಲ ಹೆರಿಗೆ ಸಿಸೆರಿಯನ್ ಆಗಿದ್ದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಮಟ್ಟದಿಂದ ಸಕಾಲದಲ್ಲಿ ಇಲಾಖೆಯ ಆಂಬ್ಯುಲೆನ್ಸ್ ಅಥವಾ 108 ತುರ್ತು ವಾಹನ ವ್ಯವಸ್ಥೆ ಮೂಲಕ ಕಳುಹಿಸಬೇಕು. ತಾಲೂಕು ಮಟ್ಟದಲ್ಲಿ, ಜಿಲ್ಲಾ ಮಟ್ಟದಲ್ಲಿ ಹಾಗೂ ಬಿಎಂಸಿ ಆರ್.ಸಿ ಆಸ್ಪತ್ರೆಗಳಲ್ಲಿ ಸುಸಜ್ಜಿತ ಹೆರಿಗೆ ಸೌಲಭ್ಯ ಹಾಗೂ ನುರಿತ ವೈದ್ಯರು ಇರುವ ಕುರಿತು ಕ್ಷೇತ್ರ ಮಟ್ಟದಲ್ಲಿ ಜಾಗೃತಿ ನೀಡುವಂತೆ ತಿಳಿಸಿದರು.ಗರ್ಭಿಣಿ ಎಂದು ತಿಳಿದ ದಿನದಿಂದಲೇ ಗರ್ಭಿಣಿಗೆ ಕಂಡು ಬರಬಹುದಾದ ಸಾಮಾನ್ಯ, ಗಂಭೀರ ಸಮಸ್ಯೆಗಳ ಕುರಿತು ಮುತುವರ್ಜಿ ವಹಿಸಲು ಕ್ಷೇತ್ರ ಮಟ್ಟದ ಸಿಬ್ಬಂದಿಯವರು ಸದಾ ತಾಯಿಯೊಂದಿಗೆ ಹಾಗೂ ಪಾಲಕರೊಂದಿಗೆ ಸಂಪರ್ಕದಲ್ಲಿರಬೇಕು. ಕಬ್ಬಿಣಾಂಶ ಮಾತ್ರೆ ಸೇವನೆಯಿಂದಾಗುವ ಪ್ರಯೋಜನ ತಿಳಿಸಬೇಕು ಎಂದರು.
ಜಿಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಮಾತನಾಡಿ, ಆಸ್ಪತ್ರೆಯಲ್ಲಿ ಹೆರಿಗೆಯಾದಲ್ಲಿ ಸಹಜ ಹೆರಿಗೆ 48 ಗಂಟೆಗಳ ಕಾಲ, ಸಿಜರಿಯನ್ ಹೆರಿಗೆ ಐದು ದಿನಗಳ ಕಾಲ ಕಡ್ಡಾಯವಾಗಿ ದಾಖಲು ಮಾಡಿಕೊಂಡು ನಿರಂತರವಾಗಿ ತಾಯಿಯ ಆರೋಗ್ಯದ ಕುರಿತು ಪರಿಶೀಲಿಸಿ ವೈದ್ಯರು ಮತ್ತು ಸಿಬ್ಬಂದಿಯವರು ಯಾವುದೇ ಲೋಪವಿಲ್ಲದಂತೆ ಕರ್ತವ್ಯ ನಿರ್ವಹಿಸಲು ಸೂಚಿಸಿದರು.ಜನನಿ ಶಿಶು ಸುರಕ್ಷಾ ಕಾರ್ಯಕ್ರಮ ಯೋಜನೆಯಡಿಯಲ್ಲಿ ದೊರಕುವ ಉಚಿತ ಊಟ, ಔಷಧಿ, ಉಚಿತ ರಕ್ತ, ಉಚಿತ ಪರೀಕ್ಷೆ, ಉಚಿತ ನಗುಮಗು ವಾಹನ ಮೂಲಕ ಮನೆಗೆ ಬಿಡುವ ಕುರಿತು ಹಾಗೂ ಜನನಿ ಸುರಕ್ಷಾ ಯೋಜನೆಯಡಿ ಸಹಾಯಧನವನ್ನು ಅವರ ಖಾತೆಗೆ ಜಮೆ ಆಗುವ ಬಗ್ಗೆ ತಿಳಿಸಬೇಕು ಎಂದರು.
ಸಭೆಯಲ್ಲಿ ಡಿಎಚ್‌ಒ ಡಾ.ಯಲ್ಲಾ ರಮೇಶ್ ಬಾಬು, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಎನ್. ಬಸಾರೆಡ್ಡಿ, ವೈದ್ಯಕಿಯ ಅಧೀಕ್ಷಕಿ ಡಾ. ಇಂದುಮತಿ, ಪ್ರಸೂತಿ ವಿಭಾಗದ ಡಾ. ವಿರೇಂದ್ರಕುಮಾರ, ವಿಮ್ಸ್ ಮಕ್ಕಳ ವಿಭಾಗದ ಡಾ. ವಿಶ್ವನಾಥ, ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ. ಹನುಮಂತಪ್ಪ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಮರಿಯಂಬಿ ವಿ.ಕೆ., ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮ ಅಧಿಕಾರಿ ಡಾ. ಪೂರ್ಣಿಮಾ ಕಟ್ಟಿಮನಿ, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ. ಇಂದ್ರಾಣಿ ವಿ., ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ವಿರೇಂದ್ರಕುಮಾರ, ತಜ್ಞ ವೈದ್ಯರಾದ ಡಾ. ಬಾಲು ವೆಂಕಟೇಶ್, ಡಾ. ಕೊಟ್ರೇಶ್, ಡಾ. ಶ್ರೀಧರ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಎಚ್. ದಾಸಪ್ಪನವರ ಸೇರಿದಂತೆ ತಾಲೂಕಾ ಆರೋಗ್ಯಾಧಿಕಾರಿಗಳು, ಆಡಳಿತ ವೈದ್ಯಾಧಿಕಾರಿಗಳು ಇತರರು ಉಪಸ್ಥಿತರಿದ್ದರು.