ಸಾರಾಂಶ
- ಬಾಪೂಜಿ ಪ್ರೌಢಶಾಲೆಯಲ್ಲಿ ಕಾನೂನು ಅರಿವು-ನೆರವು ಕಾರ್ಯಕ್ರಮ - - - ಕನ್ನಡಪ್ರಭ ವಾರ್ತೆ ಹರಿಹರ ಮಕ್ಕಳ ಹಕ್ಕುಗಳು ಹಾಗೂ ಅವರಿಗೆ ಇರುವ ರಕ್ಷಣೆ ವ್ಯವಸ್ಥೆಗಳ ಕುರಿತು ಸಮಾಜದಲ್ಲಿ ವ್ಯಾಪಕ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಸ್ಥಳೀಯ 1ನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‍ಸಿ ನ್ಯಾಯಾಲಯ ನ್ಯಾಯಾಧೀಶೆ ಜ್ಯೋತಿ ಅಶೋಕ ಪತ್ತಾರ್ ಹೇಳಿದರು.
ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಅಂಗವಾಗಿ ನಗರದ ಬಾಪೂಜಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ, ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿ ಮಗುವಿಗೆ ಆರೈಕೆ, ಆಹಾರ, ಪ್ರೀತಿ, ಆರೋಗ್ಯ, ಶಿಕ್ಷಣ ನೀಡುವುದು ಹೆತ್ತ ಪೋಷಕರ ಕರ್ತವ್ಯವಾಗಿದೆ. ಅದೇ ರೀತಿ ಅವುಗಳನ್ನು ಪಡೆಯುವುದು ಮಗುವಿನ ಹಕ್ಕಾಗಿದೆ. ಮಕ್ಕಳಿಗೆ ಹಕ್ಕುಗಳನ್ನು ನೀಡದಿರುವ ಪೋಷಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಅವಕಾಶವಿದೆ ಎಂದರು.ಮಕ್ಕಳ ಮನಸ್ಸು ಬಿಳಿಹಾಳೆ ಇದ್ದ ಹಾಗೆ. ನಿಷ್ಕಲ, ನಿರ್ಮಲ ಮನಸಿನಲ್ಲಿ ನಾವು ಏನುಬೇಕಾದರೂ ಬರೆಯಬಹುದಾಗಿದೆ. ಆದ್ದರಿಂದ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಕಾನೂನು ಜಾಗೃತಿ ಮೂಡಿಸಬೇಕು. ಪೋಷಕರು ಮನೆಯಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು ಎಂದರು.
ವಿದ್ಯಾರ್ಥಿಗಳ ಕಲಿಕೆ ತರಗತಿ ಪಾಠಕ್ಕೆ ಸೀಮಿತವಾಗದೇ, ಮುಂದೆ ಸಾಮಾಜಿಕ ಬದುಕಿಗೆ ಅಗತ್ಯವಾದ ವ್ಯಾವಹಾರಿಕ ತಿಳಿವಳಿಕೆ ಮೂಡಿಸುವಂತಿರಬೇಕು. ವಿದ್ಯಾರ್ಥಿಗಳು ಪೋಷಕರೊಂದಿಗೆ ಮಾರುಕಟ್ಟೆಗಳಿಗೆ ತೆರಳಿ ಅಲ್ಲಿ ನಡೆಯುವ ವಹಿವಾಟುಗಳ ಬಗ್ಗೆ ಪ್ರಾಯೋಗಿಕ ಜ್ಞಾನ ಪಡೆಯಬಹುದು. ಗ್ರಾಹಕರ ಹಕ್ಕುಗಳು ಪರಿಹಾರೋಪಾಯಗಳ ಬಗ್ಗೆ ಪೋಷಕರಿಗೆ ತಿಳಿಸಿ ವ್ಯಾಪಾರಿಗಳಿಂದ ಶೋಷಣೆಗೆ ಈಡಾಗುವುದನ್ನು ತಪ್ಪಿಸಬೇಕು ಎಂದರು.ವಕೀಲರ ಸಂಘದ ಅಧ್ಯಕ್ಷ ಬಿ.ಆನಂದ ಕುಮಾರ್ ಮಾತನಾಡಿ, ಬಾಲಕಾರ್ಮಿಕತೆ ಸಾಮಾಜಿಕ ಪಿಡುಗಾಗಿದೆ. ಬಡತನ, ಅನಕ್ಷರತೆ, ದುಶ್ಚಟ ಮುಂತಾದವುಗಳು ಇದಕ್ಕೆ ಕಾರಣ. ಬಾಲ ಕಾರ್ಮಿಕತೆಯಿಂದ ಆ ಮಗು, ಕುಟುಂಬಕ್ಕೆ ಮಾತ್ರವಲ್ಲದೇ, ಇಡೀ ದೇಶಕ್ಕೆ ಮಾರಕವಾಗಿ ಪರಿಣಾಮವಾಗುತ್ತದೆ ಎಂದರು.
ಮುಖ್ಯಶಿಕ್ಷಕ ಮರುಳಸಿದ್ದಪ್ಪ ಮಾತನಾಡಿ, ಸರ್ಕಾರ ಶಾಲಾ ಮಕ್ಕಳಿಗೆ ಉಚಿತವಾಗಿ ಪಠ್ಯಪುಸ್ತಕ, ಬಿಸಿಊಟ, ಸೈಕಲ್, ಶೂ ಹಾಗೂ ಇತರೆ ಸೌಲಭ್ಯಗಳನ್ನು ನೀಡಿದೆ. ಮಕ್ಕಳ ಪೋಷಣೆ, ಶಿಕ್ಷಣ, ಆರೋಗ್ಯದ ದೃಷ್ಟಿಯಿಂದ ಸಮಾಜಕ್ಕಿರಬೇಕಾದ ಕಾಳಜಿಯನ್ನು ಇದು ವ್ಯಕ್ತಪಡಿಸುತ್ತದೆ ಎಂದರು.ವಕೀಲರ ಸಂಘದ ಕಾರ್ಯದರ್ಶಿ ನಾಗರಾಜ ಕೆ.ವಿ., ಎಪಿಪಿಗಳಾದ ಚಂದ್ರಪ್ಪ ನೆಗಳೂರು, ಹೇಮಾವತಿ, ನೇತ್ರ, ವಕೀಲರಾದ ಕೆ.ಚಂದ್ರಾಚಾರಿ, ಲೋಹಿತಾ, ಶಿಕ್ಷಕರಾದ ನಿರ್ಮಲ ನೀಡಗುಂದಿ ವಿದ್ಯಾರ್ಥಿಗಳು ಮತ್ತಿತರರಿದ್ದರು.
- - - -10ಎಚ್‍ಆರ್‌ರ್02:ಹರಿಹರದ ಬಾಪೂಜಿ ಪ್ರೌಢಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ 1ನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‍ಸಿ ನ್ಯಾಯಾಲಯ ನ್ಯಾಯಾಧೀಶೆ ಜ್ಯೋತಿ ಅಶೋಕ ಪತ್ತಾರ್ ಮಾತನಾಡಿದರು.