ಸಾರಾಂಶ
ಕನ್ನಡಪ್ರಭ ವಾರ್ತೆ ಯಾದಗಿರಿ
ಅಂಗನವಾಡಿ ಆಶಾ ಕಾರ್ಯಕರ್ತೆಯರು ತಾಲೂಕಿನ ಪ್ರತಿ ಗ್ರಾಮಕ್ಕೆ ಸಂಜೆ ಸಮಯದಲ್ಲಿ ತೆರಳಿ ನೀತಿ ಆಯೋಗವು ಗುರುತಿಸಲಾದ 6 ಸೂಚಕಗಳ ಕುರಿತು ಜನರಲ್ಲಿ ಅರಿವು ಮೂಡಿಸಬೇಕು ಎಂದು ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಹೇಳಿದರು.ಜಿಲ್ಲೆಯ ವಡಗೇರಾ ಪಟ್ಟಣದ ಬಾಲಾಜಿ ಕಲ್ಯಾಣ ಮಂಟಪದಲ್ಲಿ ನೀತಿ ಆಯೋಗವು ಜು.4ರಿಂದ ಸೆಪ್ಟೆಂಬರ್ 30ರವರೆಗೆ ಮೂರು ತಿಂಗಳ ಕಾಲ ಸಂಪೂರ್ಣತಾ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದಾರೆ. ಆದರೆ, ರೈತರು ಮಾತ್ರ ಪಾಲ್ಗೊಂಡಿಲ್ಲ. ಇದು ಬೇಸರದ ಸಂಗತಿ. ಈ ಕಾರ್ಯಕ್ರಮದ ಪ್ರಚಾರ ಹೆಚ್ಚಿನ ರೀತಿಯಲ್ಲಿ ಆಗಬೇಕು ಎಂದು ತಿಳಿಸಿದರು.ನೀತಿ ಆಯೋಗದ ಯೋಜನಾ ನಿರ್ದೇಶಕ ಡಾ. ಅಂಶು ಭಾರದ್ವಾಜ್ ಮಾತನಾಡಿ, ನೀತಿ ಆಯೋಗವು ಆಶೋತ್ತರ ವಲಯಗಳಲ್ಲಿ ಅಭಿವೃದ್ಧಿಯ 6 ಮಾನದಂಡಗಳನ್ನು ಸಾಧಿಸುವ ಗುರಿಯನ್ನು ಸಂಪೂರ್ಣತಾ ಅಭಿಯಾನ ಹೊಂದಿದೆ. ಇದರಲ್ಲಿ ಗರ್ಭಿಣಿಯರ ಆರೈಕೆಗೆ ನೋಂದಣಿ, ಮಧುಮೇಹ ಹೊಂದಿರುವ ವ್ಯಕ್ತಿಗಳ ತಪಾಸಣೆ, ಶಿಕ್ಷಣ, ಅಧಿಕ ರಕ್ತದೊತ್ತಡ ಹೊಂದಿರುವ ವ್ಯಕ್ತಿಗಳ ಪರೀಕ್ಷೆ, ಗರ್ಭಿಣಿಯರಿಗೆ ಪೂರಕ ಪೌಷ್ಟಿಕ ಆಹಾರ ಒದಗಿಸುವುದು ಮತ್ತು ಮಣ್ಣಿನ ಆರೋಗ್ಯ ಕಾರ್ಡ್‌ಗಳ ವಿತರಣೆ ಹಾಗೂ ಸ್ವ-ಸಹಾಯ ಗುಂಪುಗಳಿಗೆ ಆರ್ಥಿಕ ನೆರವು ನೀಡುವ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಈ ಗುರಿಗಳ ಸಾಧನೆಗೆ ಮೂರು ತಿಂಗಳ ಕ್ರಿಯಾ ಯೋಜನೆ ರೂಪಿಸಿ ಅದನ್ನು ಅನುಷ್ಠಾನಗೊಳಿಸಲಾಗುವುದು ಎಂದು ಹೇಳಿದರು.
ಕಾರ್ಯಕ್ರಮಕ್ಕೂ ಮುನ್ನ ವಡಗೇರಾ ಪಟ್ಟಣದ ಬಾಲಾಜಿ ಕಲ್ಯಾಣ ಮಂಟಪದಲ್ಲಿ ವಿವಿಧ ಇಲಾಖೆಗಳಿಂದ ಹಾಕಲಾಗಿದ್ದ ಮಳಿಗೆಗಳನ್ನು ಉದ್ಘಾಟಿಸಲಾಯಿತು. ಕಾರ್ಯಕ್ರಮದಲ್ಲಿ ನೀತಿ ಆಯೋಗದ ಸಂಪೂರ್ಣತಾ ಅಭಿಯಾನ ಕುರಿತು ಪ್ರತಿಜ್ಞಾವಿಧಿ ಬೋಧಿಸಲಾಯಿತು.ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಗುರುನಾಥ್ ಗೌಡಪ್ಪನೂರ್, ವಡಗೇರಾ ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ್ ಸಂಗ್ವಾರ, ತಾಲೂಕು ವೈದ್ಯಾಧಿಕಾರಿ ಡಾ. ರಮೇಶ್, ಸಿಡಿಪಿಒ ಮಲ್ಲಣ್ಣ, ಶಹಾಪುರ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಸುನೀಲ್ ಕುಮಾರ್, ವಿಶಾಲ್ ಸೇರಿದಂತೆ ಇತರರಿದ್ದರು.