ಶಿಸ್ತು ಬೆಳೆಸಲು ಸಮವಸ್ತ್ರ ಸಹಕಾರಿ: ಡಾ.ಪಂಡಿತ ಬಿರಾದಾರ್

| Published : Jul 06 2024, 12:53 AM IST

ಸಾರಾಂಶ

ಭಾಲ್ಕಿ ಖಡಕೇಶ್ವರ ಪ್ರೌಢ ಶಾಲೆಯಲ್ಲಿ ನಡೆದ ಸಮವಸ್ತ್ರ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ.ಪಂಡಿತ ಬಿರಾದಾರ್, ಎಂಜನಿಯರ್ ನೇಹಾ ಖಂಡ್ರೆ, ಮುಖ್ಯಗುರು ಆನಂದ ಕಲ್ಯಾಣೆ ಸೇರಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಭಾಲ್ಕಿ: ವಿದ್ಯಾರ್ಥಿಗಳಲ್ಲಿ ಶಿಸ್ತು ಬೆಳೆಸಲು ಸಮವಸ್ತ್ರ ಅತ್ಯಂತ ಸಹಕಾರಿ ಎಂದು ದಂತ ವೈದ್ಯ ಡಾ.ಪಂಡಿತ ಬಿರಾದಾರ್ ಹೇಳಿದರು.

ಪಟ್ಟಣದ ಲೆಕ್ಚರ್ ಕಾಲೋನಿ ಖಡಕೇಶ್ವರ ಪ್ರೌಢ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಸಮವಸ್ತ್ರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಸಮವಸ್ತ್ರಧಾರಿ ಎಂದರೆ ಶಿಸ್ತಿನ ಸಿಪಾಯಿ. ಮಕ್ಕಳು ಶಿಸ್ತನ್ನು ಮೊದಲು ತಮ್ಮ ತಮ್ಮ ತಾಯಿಯಿಂದಲೇ ಕಲಿಯುತ್ತಾರೆ. ನಂತರ ಶಿಕ್ಷಕರಿಂದ ಕಲಿಯುತ್ತಾರೆ. ಸಮವಸ್ತ್ರ ಧರಿಸುವುದರಿಂದ ಮಕ್ಕಳಲ್ಲಿ ಸಮಾನತೆ, ಶಿಸ್ತು, ದಕ್ಷತೆ, ಕರ್ತವ್ಯ ಪ್ರಜ್ಞೆ ಮುಂತಾದವುಗಳನ್ನು ಮೂಡಿಸಬಹುದು ಎಂದು ಸಮವಸ್ತ್ರದ ಬಗ್ಗೆ ಬಹಳ ಮಾರ್ಮಿಕವಾಗಿ ತಿಳಿಸಿದರು.

ತರಗತಿ ಆರಂಭದಿಂದಲೇ ವಿದ್ಯಾರ್ಥಿಗಳು ಓದಿನತ್ತ ಗಮನ ಹರಿಸಿ ಉತ್ತಮ ಸಾಧನೆ ತೋರಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಎಂಜಿನಿಯರ್ ನೇಹಾ ಖಂಡ್ರೆ, ಶಿಕ್ಷಕರಾದ ದಿಲೀಪ ಘಂಟೆ, ಪ್ರಕಾಶ ರುದನೂರೆ, ಅಂಜಲಿ ಜೋಶಿ, ಶುಭಂ ರಾಯವಾಡೆ, ಜಯಪ್ರಕಾಶ ಸಹಾನೆ, ಜೀವನ ಬಿರಾದಾರ್ ಸೇರಿದಂತೆ ಹಲವರು ಇದ್ದರು. ಮುಖ್ಯಗುರು ಆನಂದ ಕಲ್ಯಾಣೆ ಸ್ವಾಗತಿಸಿ, ನಿರೂಪಿಸಿದರು.