ಸಾರಾಂಶ
ಹಾವೇರಿ: ಜಿಲ್ಲೆಯಲ್ಲಿ ಅತ್ಯಾಚಾರ, ಬಾಲ್ಯವಿವಾಹ ಹಾಗೂ ಬಾಲ ಗರ್ಭಿಣಿಯರ ಪ್ರಕರಣಗಳ ತಡೆಗೆ ಎಲ್ಲ ಕಾಲೇಜುಗಳಲ್ಲಿ ಅರಿವು ಕಾರ್ಯಕ್ರಮ ಆಯೋಜಿಸಬೇಕು ಎಂದು ಅಧಿಕಾರಿಗಳಿಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಅವರು ಸೂಚನೆ ನೀಡಿದರು.ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಜಿಲ್ಲೆಯಲ್ಲಿ ಬಾಲ ಗರ್ಭಿಣಿಯರು ಹಾಗೂ ಬಾಲ್ಯ ವಿವಾಹ ಪ್ರಕರಣಗಳು ನಡೆದಿರುವುದು ವಿಷಾದಕರ ಸಂಗತಿಯಾಗಿದೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಇಂತಹ ಪ್ರಕರಣಗಳ ತಡೆಗೆ ಸೂಕ್ತ ಕ್ರಮ ವಹಿಸಬೇಕು ಹಾಗೂ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದರು.ಪೊಲೀಸ್ ಇಲಾಖೆ ಮೇಲೆ ಸಾರ್ವಜನಿಕರಿಗೆ ನಂಬಿಕೆ ಬರಬೇಕು. ಹಾಗಾಗಿ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮ ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಬೇಕು. ಪೊಲೀಸ್ ಠಾಣೆಗೆ ಬರುವವರೊಂದಿಗೆ ಸೌರ್ಜನ್ಯದಿಂದ ನಡೆದುಕೊಳ್ಳಬೇಕು ಹಾಗೂ ಆತ್ಮಸ್ಥೈರ್ಯ ತುಂಬಬೇಕು. ನ್ಯಾಯ ದೊರೆಯುತ್ತದೆ ಎಂಬ ವಿಶ್ವಾಸ ಮೂಡಿಸಬೇಕು ಎಂದು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಆಸ್ಪತ್ರೆಗಳಲ್ಲಿ ಊಟ ನೀಡಿ: ಹಿರೇಕೆರೂರು ತಾಲೂಕು ಆಸ್ಪತ್ರೆಯಲ್ಲಿ ಬಾಣಂತಿ ಹಾಗೂ ಗರ್ಭಿಣಿಯರಿಗೆ ಊಟ ನೀಡುತ್ತಿಲ್ಲ, ಐಸಿಯು ವಾರ್ಡ್‌ಗೆ ಬೀಗ ಹಾಕಲಾಗಿದೆ. ಕೂಡಲೇ ತಾಲೂಕು ಆಸ್ಪತ್ರೆಗಳಲ್ಲಿ ಬಾಣಂತಿ ಹಾಗೂ ಗರ್ಭಿಣಿಯರಿಗೆ ಊಟ, ಮೊಟ್ಟೆ ಹಾಗೂ ಬಾಳೆಹಣ್ಣು ವಿತರಣೆಗೆ ಕ್ರಮ ವಹಿಸಬೇಕು. ನಾಲ್ಕು ವೈದ್ಯರು ಮಾತ್ರವಿದ್ದು, ಖಾಲಿ ವೈದ್ಯರ ಹುದ್ದೆ ನೇಮಕಕ್ಕೆ ಹಾಗೂ ಐಸಿಯು ವಾರ್ಡ್ ಆರಂಭಿಸಲು ಕ್ರಮ ವಹಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚನೆ ನೀಡಿದರು. ಹಂಸಭಾವಿ ಗ್ರಾಮದಲ್ಲಿ ಅಲೆಮಾರಿ ಜನಾಂಗ ವಾಸಿಸುವ ಪ್ರದೇಶದಲ್ಲಿ ಸ್ವಚ್ಛತೆ ಇಲ್ಲ, ನೀರು, ರಸ್ತೆ, ವಿದ್ಯುತ್ ಯಾವುದೇ ಮೂಲ ಸೌಕರ್ಯಗಳಿಲ್ಲ. ಅವರ ಬಳಿ ಜಾತಿ, ಆದಾಯ ಪ್ರಮಾಣಪತ್ರ, ಆಧಾರ್ ಕಾರ್ಡ್ ಸೇರಿದಂತೆ ಯಾವುದೇ ದಾಖಲೆಗಳಿಲ್ಲ. ಅವರು ಕೆರೆಯ ದಡದಲ್ಲಿ ಕಳೆದ 30 ವರ್ಷಗಳಿಂದ ವಾಸಿಸುತ್ತಿದ್ದಾರೆ. ಅವರಿಗೆ ಕೂಡಲೇ ಕುಡಿಯುವ ನೀರು, ವಿದ್ಯುತ್ ವ್ಯವಸ್ಥೆ ಕಲ್ಪಿಸಬೇಕು. ಆಧಾರ್ ಕಾರ್ಡ್ ಸೇರಿದಂತೆ ಅಗತ್ಯ ದಾಖಲೆಗಳನ್ನು ಮಾಡಿಸುವ ಕುರಿತು ಅರಿವು ಮೂಡಿಸಬೇಕು. ಅವರು ವಾಸಿಸುವ ಸ್ಥಳ ಕೆರೆಯ ದಂಡೆಯಾಗಿರುವುದರಿಂದ ಬೇರೆಡೆ ವಾಸಕ್ಕೆ ಸೂಕ್ತ ಕ್ರಮವಹಿಸಬೇಕು ಎಂದರು.ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಮಾತನಾಡಿ, 10ಕ್ಕಿಂತ ಅಧಿಕ ಮನೆಗಳಿದ್ದ ಕಂದಾಯ ಗ್ರಾಮ ಮಾಡಲಾಗುವುದು. ಎಲ್ಲ ಮೂಲ ಸೌಲಭ್ಯಗಳನ್ನು ಒದಗಿಸಲಾಗುವುದು ತಿಳಿಸಿದರು. ನಾಗೇಂದ್ರನಮಟ್ಟಿ ಹಾಗೂ ಹಂಸಭಾವಿಯಲ್ಲಿ ಅಲೆಮಾರಿ ಸಮುದಾಯ ವಾಸಿಸುವ ಪ್ರದೇಶದಲ್ಲಿ ಅವರ ಮಕ್ಕಳು ಅಂಗನವಾಡಿಗಳಿಗೆ ದೂರದ ಸ್ಥಳಗಳಿಗೆ ಹೋಗಲು ತೊಂದರೆಯಾಗುತ್ತಿದೆ. ಹಾಗಾಗಿ ಆ ಪ್ರದೇಶಗಳಲ್ಲಿ ಕೂಡಲೇ ಅಂಗನವಾಡಿ ಕೇಂದ್ರಗಳನ್ನು ಆರಂಭಿಸಲು ಸೂಚಿಸಿದರು.ಸಭೆಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್. ಗಾಜಿಗೌಡ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರುಚಿ ಬಿಂದಲ್, ಮಹಿಳಾ ಮತ್ತು ಬಹಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ರೇವತಿ ಹೊಸಮಠ ಉಪಸ್ಥಿತರಿದ್ದರು.ಸಭೆಯಲ್ಲಿ ದೂರುಗಳ ಮಹಾಪೂರವಸತಿ ಸಮಸ್ಯೆ, ಹೊರಗುತ್ತಿಗೆ ಸಿಬ್ಬಂದಿ ಸಂಬಳ ವ್ಯತ್ಯಾಸ, ಫೈನಾನ್ಸ್ ಕಿರುಕುಳ, ಕಾರ್ಮಿಕರಿಗೆ ಸೌಲಭ್ಯ ಕೊರತೆ, ಪಡಿತರ ಚೀಟಿ, ಮಾಸಾಶನ, ಬಸ್ ನಿಲುಗಡೆ, ಹೆಚ್ಚುವರಿ ಬಸ್ ಸೌಲಭ್ಯ, ಗರ್ಭಕೋಶ ಶಸ್ತ್ರಚಿಕಿತ್ಸೆಗೆ ಪರಿಹಾರ, ಆಸ್ತಿಗಾಗಿ ನಕಲು ಸಹಿ, ಹಕ್ಕುಪತ್ರ ಸೇರಿದಂತೆ ಅನೇಕ ಸಮಸ್ಯೆಗಳನ್ನು ವಿದ್ಯಾರ್ಥಿನಿಯರು, ಮಹಿಳೆಯರು, ವೃದ್ಧರು ಹಾಗೂ ವಿವಿಧ ಸಂಘಟನೆಗಳು ಮಹಿಳಾ ಆಯೋಗದ ಅಧ್ಯಕ್ಷರ ಗಮನಕ್ಕೆ ತಂದರು. ಸತತ ಎರಡು ಗಂಟೆಗಳ ಕಾಲ ಎಲ್ಲರ ಸಮಸ್ಯೆಗಳನ್ನು ತಾಳ್ಮೆಯಿಂದ ಆಲಿಸಿದ ಅಧ್ಯಕ್ಷರು, ಎಲ್ಲರ ಸಮಸ್ಯೆಗೂ ಮಾನವೀಯ ನೆಲೆಯಲ್ಲಿ ಹಾಗೂ ಕಾನೂನಿನ ಚೌಕಟ್ಟಿನಲ್ಲಿ ಪರಿಹಾರ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.