ರಾಜ್ಯಕ್ಕೆ ಅನ್ಯಾಯ ವಿರುದ್ಧ ಒಟ್ಟಾಗಿ ಧ್ವನಿಯೆತ್ತಿ: ಮನು ಬಳಿಗಾರ್‌ ಕರೆ

| Published : Feb 06 2024, 01:33 AM IST

ರಾಜ್ಯಕ್ಕೆ ಅನ್ಯಾಯ ವಿರುದ್ಧ ಒಟ್ಟಾಗಿ ಧ್ವನಿಯೆತ್ತಿ: ಮನು ಬಳಿಗಾರ್‌ ಕರೆ
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಕನ್ನಡ ಕ್ರಿಯಾ ಸಮಿತಿ ಆಯೋಜಿಸಿದ್ದ ಕನ್ನಡ ಪರಿಚಾರಕರಿಗೆ ಅಭಿನಂದನಾ ಸಮಾರಂಭದಲ್ಲಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿಯೆತ್ತಿ ನ್ಯಾಯ ಪಡೆಯಲು ಪಕ್ಷಬೇಧ ಮರೆತು ಶ್ರಮಿಸಬೇಕು ಎಂದು ಕೆಎಸ್‌ಆರ್‌ಟಿಸಿ ಕೇಂದ್ರ ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ಡಾ। ಮನು ಬಳಿಗಾರ್‌ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿಯೆತ್ತಿ ನ್ಯಾಯ ಪಡೆಯಲು ಪಕ್ಷಬೇಧ ಮರೆತು ಶ್ರಮಿಸಬೇಕು ಎಂದು ಕೆಎಸ್‌ಆರ್‌ಟಿಸಿ ಕೇಂದ್ರ ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ಡಾ। ಮನು ಬಳಿಗಾರ್‌ ಮನವಿ ಮಾಡಿದರು.

ಸೋಮವಾರ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಕನ್ನಡ ಕ್ರಿಯಾ ಸಮಿತಿ ಆಯೋಜಿಸಿದ್ದ ಕನ್ನಡ ಪರಿಚಾರಕರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಕೇಂದ್ರದಿಂದ ಕನ್ನಡ, ನೆಲ, ಭಾಷೆಗೆ ಸತತವಾಗಿ ಅನ್ಯಾಯವಾಗುತ್ತಿದೆ. ಕನ್ನಡಿಗರಿಗೆ ಸಿಗಬೇಕಾದ ಮಾನ್ಯತೆ, ಹಕ್ಕು ಸಿಗುತ್ತಿಲ್ಲ. ಅಂಚೆ ಕಚೇರಿ, ರಾಷ್ಟ್ರೀಕೃತ ಬ್ಯಾಂಕ್‌ಗಳು, ರೈಲ್ವೆ ಇಲಾಖೆಯಲ್ಲಿ ಕನ್ನಡಿಗರಿಗೆ ಉದ್ಯೋಗಗಳು ಲಭ್ಯವಾಗುತ್ತಿಲ್ಲ. ಕನ್ನಡಿಗರಿಗೆ ಕೇಂದ್ರ ಅನ್ಯಾಯ ಮಾಡುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರದ ಯಾವುದೇ ಅನುದಾನವಿಲ್ಲದೆ ಕನ್ನಡ ಕ್ರಿಯಾ ಸಮಿತಿ ಕ್ರಿಯಾಶೀಲವಾಗಿ ಕನ್ನಡ ಸೇವೆ ಮಾಡುತ್ತಿದೆ. ಕಾಯಕಯೋಗಿಗಳು ಸ್ವಂತ ಹಣದಲ್ಲಿ ಕನ್ನಡ ಸೇವೆ ಮಾಡುತ್ತಿದ್ದಾರೆ. ಕನ್ನಡ ಜಲ, ನೆಲ, ಭಾಷೆಗೆ ಧಕ್ಕೆಯಾದರೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ದ ಹೋರಾಟ ಮಾಡಿದ್ದಾರೆ. ಇಂತಹ ಕನ್ನಡದ ಕಟ್ಟಾಳುಗಳನ್ನು ಸನ್ಮಾನಿಸುವುದು ಹೃದಯಸ್ಪರ್ಶಿ ಸಂಗತಿ ಎಂದರು.

ಸಮಿತಿ ಗೌರವ ಸಲಹೆಗಾರ ವ.ಚ.ಚನ್ನೇಗೌಡ ಮಾತನಾಡಿ, ಉದ್ಯೋಗದೊಂದಿಗೆ ಕನ್ನಡ ತಾಯಿಯ ಸೇವೆ ಮಾಡುತ್ತಿರುವ ಕೆಎಸ್‌ಆರ್‌ಟಿಸಿ ಸಂಸ್ಥೆಯ ಕನ್ನಡಿಗರ ಕಾರ್ಯ ಶ್ಲಾಘನೀಯ. ಕನ್ನಡ ಭಾಷೆ, ನೆಲ, ಜಲ, ಹಕ್ಕಿಗಾಗಿ ಹೋರಾಡಿದ ಕನ್ನಡ ಪರಿಚಾರಕನ್ನು ಸನ್ಮಾನಿಸುವುದು ನಮ್ಮ ಕರ್ತವ್ಯ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ 16 ಕನ್ನಡ ಪರಿಚಾರಕರಿಗೆ ಸಾರಿಗೆ ಕನ್ನಡ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಕೆಎಸ್‌ಆರ್‌ಟಿಸಿ ಕೇಂದ್ರ ಕನ್ನಡ ಕ್ರಿಯಾ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಎಸ್‌.ಪ್ರಭುಸ್ವಾಮಿ, ರಾಜ್ಯ ಸಂಚಾಲಕ ಕೆ.ಎಸ್.ಹುಸೇನ್, ರಾಜ್ಯ ಜಂಟಿ ಕಾರ್ಯದರ್ಶಿ ಎಚ್‌.ಕೆ.ಸುರೇಶ್ ಉಪಸ್ಥಿತರಿದ್ದರು.