ಸಾರಾಂಶ
ಅತಿವೃಷ್ಟಿ-ಅನಾವೃಷ್ಟಿಯಿಂದ ಯಲಬುರ್ಗಾ, ಕುಕನೂರು ತಾಲೂಕಿನಲ್ಲಿ ಅಪಾರ ಪ್ರಮಾಣ ಬೆಳೆ ಹಾನಿಯಾಗಿದ್ದು ಸೂಕ್ತ ಪರಿಹಾರ ನೀಡುವಂತೆ ರೈತ ಪರವಾಗಿ ಸದನದಲ್ಲಿ ಧ್ವನಿ ಎತ್ತಬೇಕೆಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ರೈತ ಸಂಘ ಮನವಿ ಸಲ್ಲಿಸಿದೆ.
ಕುಕನೂರು:
ಅತಿವೃಷ್ಟಿ-ಅನಾವೃಷ್ಟಿಯಿಂದ ಯಲಬುರ್ಗಾ, ಕುಕನೂರು ತಾಲೂಕಿನಲ್ಲಿ ಅಪಾರ ಪ್ರಮಾಣ ಬೆಳೆ ಹಾನಿಯಾಗಿದ್ದು ಸೂಕ್ತ ಪರಿಹಾರ ನೀಡುವಂತೆ ರೈತ ಪರವಾಗಿ ಸದನದಲ್ಲಿ ಧ್ವನಿ ಎತ್ತಬೇಕೆಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ರೈತ ಸಂಘ ಮನವಿ ಸಲ್ಲಿಸಿದೆ.ತಾಲೂಕಿನ ಬಿನ್ನಾಳದ ಬಸವೇಶ್ವರ ಜಾತ್ರೆಗೆ ಆಗಮಿಸಿದ್ದ ಶಾಸಕ ಯತ್ನಾಳಗೆ ಮನವಿ ಸಲ್ಲಿಸಿದ ಸಂಘ, ರೈತರು ಕಷ್ಟಪಟ್ಟು ಬೆಳೆದ ಹೆಸರು ಬೆಳೆ ಸಂಪೂರ್ಣ ಹಾಳಾಗಿದೆ. ಮಳೆ ಹೊಡೆತಕ್ಕೆ ಉಳಿದ ಬೆಳೆಗಳು ಸಹ ಕೊಳೆಯುತ್ತಿವೆ. ಗೊಬ್ಬರ ಕೊರತೆ ಸಹ ಆಗಿದೆ. ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಸರ್ಕಾರ ಹೆಸರು ಬೆಳೆಗೆ ಬರ ಪರಿಹಾರ ನೀಡಬೇಕು. ಯಲಬುರ್ಗಾ, ಕುಕನೂರು ತಾಲೂಕನ್ನು ಬರ ತಾಲೂಕುಗಳೆಂದು ಘೋಷಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಜಿಲ್ಲೆಯ ಯರೇ ಭೂಮಿಯಲ್ಲಿ ಒಟ್ಟು ೩೫ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬೆಳೆ ಬಿತ್ತನೆಯಾಗಿದೆ. ಅದೆಲ್ಲವೂ ಸಹ ಆರಂಭದಲ್ಲಿ ಮಳೆ ಇಲ್ಲದೆ, ಸದ್ಯ ಮಳೆ ಹೆಚ್ಚಾಗಿ ಹಾಳಾಗಿದೆ. ಅಲ್ಲದೆ ಮಳೆಗೆ ಜಮೀನಿನ ಬದುವುಗಳು ಸಹ ಒಡೆದಿವೆ. ಮುಂಗಾರು ಹಂಗಾಮಿಗೆ ಬರ ಘೋಷಿಸಬೇಕು ಎಂದು ಒತ್ತಾಯಿಸಿರುವ ಅವರು, ಲೋಕಸಭಾ ಚುನಾವಣೆ ಮುನ್ನವೇ ಕೇಂದ್ರ ಸರ್ಕಾರ ರೈತರಿಗೆ ಬರ ಪರಿಹಾರ ಹಾಕಲು ₹ 3500 ಕೋಟಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಆದರೂ ಸಹ ಕಳೆದ ವರ್ಷದ ಬರ ಹಣವನ್ನು ಕೂಡ ರಾಜ್ಯ ಸರ್ಕಾರ ರೈತರಿಗೆ ನೀಡಿಲ್ಲ. ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಹಣವನ್ನು ರೈತರ ಖಾತೆಗೆ ಜಮೆ ಮಾಡಿಸಬೇಕೆಂದು ಒತ್ತಾಯಿಸಿದ್ದಾರೆ.ಈ ವೇಳೆ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಅಂದಪ್ಪ ಕೋಳೂರು, ರೈತರಾದ ಅಂದಪ್ಪ ಚಳ್ಳಾರಿ, ಶಿವಪುತ್ರಪ್ಪ ಕುಟುಗನಹಳ್ಳಿ, ಜಗದೀಶ ಚಟ್ಟಿ, ಕಲ್ಲಪ್ಪ ಕರಿಯಣ್ಣವರ, ಬಸವಂತಪ್ಪ ಕುಟುಗನಹಳ್ಳಿ, ಶರಣಪ್ಪ ತಹಸೀಲ್ದಾರ್, ಸಂಗಪ್ಪ ಕುರಿ, ಸಂಗಪ್ಪ ಪಂತರ, ಕೃಷ್ಣಪ್ಪ ಪಂತರ್, ಸಂತೋಷ ಮೆಣಿಸಿನಕಾಯಿ ಇದ್ದರು.