ರೈತ ದಸರಾ: ಮುದ ನೀಡುತ್ತಿರುವ ಮೀನಿನ ಮಾಯಾಲೋಕ

| Published : Oct 09 2024, 01:32 AM IST

ರೈತ ದಸರಾ: ಮುದ ನೀಡುತ್ತಿರುವ ಮೀನಿನ ಮಾಯಾಲೋಕ
Share this Article
  • FB
  • TW
  • Linkdin
  • Email

ಸಾರಾಂಶ

ಮಣ್ಣಿನ ಏಡಿ ಸಾಕಾಣಿಕೆ ಹಾಗೂ ಅವುಗಳ ಸೇವನೆಯಿಂದ ಆಗುವ ಆರೋಗ್ಯದ ಲಾಭಗಳ ಮಾಹಿತಿ ಒದಗಿಸಲಾಗುತ್ತಿದೆ. ಅಲ್ಲದೆ, ಮೀನುಗಾರಿಕೆ ಇಲಾಖೆಯ ವಿವಿಧ ಯೋಜನೆಗಳು ಹಾಗೂ ಮೀನುಗಾರಿಕೆ ಕುರಿತು ಮಾಹಿತಿ, ಜಲಾಶಯಗಳಲ್ಲಿ ಪಂಜರ ಮೀನು ಕೃಷಿ, ಅಕ್ವಾಫೋನಿಕ್ಸ್‌ ಕೃಷಿ ಸೇರಿದಂತೆ ಮೀನುಗಾರಿಕೆ ಕ್ಷೇತ್ರದ ಇತ್ತೀಚಿನ ತಾಂತ್ರಿಕತೆಗಳನ್ನು ಅನಾವರಣಗೊಳಿಸಲಾಗಿದೆ.

ಬಿ. ಶೇಖರ್‌ ಗೋಪಿನಾಥಂ

ಕನ್ನಡಪ್ರಭ ವಾರ್ತೆ ಮೈಸೂರು

ಬಣ್ಣ ಬಣ್ಣದ ಮೀನುಗಳು ಅತ್ತಲಿಂದ ಇತ್ತ..., ಇತ್ತಲಿಂದ ಅತ್ತ ವೈಯಾರದಿಂದ ಬಳಕುತ್ತಾ ಓಡಾಡುವುದನ್ನು ಪ್ರತಿನಿತ್ಯ ಸಾವಿರಾರು ಮಂದಿ ನೋಡಿ ಆನಂದಿಸುತ್ತಿದ್ದಾರೆ.

ಈ ಬಾರಿಯ ರೈತ ದಸರಾ ಪ್ರಯುಕ್ತ ಮೀನುಗಾರಿಕೆ ಇಲಾಖೆಯು ಪ್ರತ್ಯೇಕವಾಗಿ ನಗರದ ಜೆ.ಕೆ. ಮೈದಾನದಲ್ಲಿ ಮತ್ಸ್ಯಮೇಳವನ್ನು ಆಯೋಜಿಸಿದ್ದು, ಮತ್ಸ್ಯಪ್ರಿಯರು ಆಸಕ್ತಿಯಿಂದ ಧಾವಿಸಿ, ಬಣ್ಣ ಬಣ್ಣದ ಮೀನುಗಳನ್ನು ನೋಡುತ್ತಿರುವ ಹಿನ್ನೆಲೆಯಲ್ಲಿ ಮತ್ಸ್ಯಮೇಳವನ್ನು ಗುರುವಾರದವರೆಗೆ (ಅ.10) ವಿಸ್ತರಿಸಲಾಗಿದೆ.

ಮೀನುಗಾರಿಕೆ ಇಲಾಖೆಯು ಮೀನಿನ ಮುಖವುಳ್ಳ ಗುಹೆ ಮಾದರಿಯಲ್ಲಿ ಮತ್ಯ್ಸಮೇಳ ಆಯೋಜಿಸಿದ್ದು, ದೇಶ- ವಿದೇಶದ 65ಕ್ಕೂ ಹೆಚ್ಚು ತಳಿಯ ಮೀನುಗಳನ್ನು ಪ್ರದರ್ಶಿಸಲಾಗಿದೆ. ಒಳ ಪ್ರವೇಶಿಸುತ್ತಿದ್ದಂತೆ ವಿವಿಧ ಗಾತ್ರದ ಅಕ್ವೇರಿಯಂಗಳಲ್ಲಿ ಸಣ್ಣ ಸಣ್ಣ ಮೀನುಗಳಿಂದ 2- 3 ಕೆ.ಜಿ. ತೂಗುವ ಮೀನುಗಳನ್ನು ಪ್ರದರ್ಶಿಸಲಾಗಿದ್ದು, ನೋಡುಗರನ್ನು ಆಕರ್ಷಿಸುತ್ತಿವೆ.

ಅಲಂಕಾರಿಕ ಮೀನುಗಳು:

ವಿವಿಧ ಗಾತ್ರದ ಅಕ್ವೇರಿಯಂಗಳಲ್ಲಿ ಏಂಜಲ್ ಫಿಶ್, ಮೋಲಿಸ್, ಬಾರ್ಬ್ಸ್, ಸಿಕ್ಲೀಡ್ಸ್, ಶಾರ್ಕ್ಸ್, ಸ್ವಾರ್ಡ್ ಟೈಲ್, ಗುಪ್ಪಿ, ಗೌರಮಿ, ಶಾರ್ಕ್, ಟಿಲಾಪಿಯಾ, ವಿಡೋ ಟೆಟ್ರಾಸ್, ಗೋಲ್ಡ್ ಫಿಶ್, ಫ್ಲವರ್ ಹಾರ್ನ್, ಕೋಯಿ ಕಾರ್ಪ್, ರೆಮೋರಾ ಸಕ್ಕರ್ ಫಿಶ್, ಎಸ್.ಕೆ ಗೋಲ್ಡ್, ಪರ್ಲ್ ಸ್ಪಾಟ್, ಜೈಂಟ್ ಗೌರಮಿ, ಪ್ಲಾಟಿ, ಆಸ್ಕರ್ ಫಿಶ್, ಬಿಚ್ಚರ್, ಸ್ಪಾಟೆಡ್ ಸ್ಕ್ಯಾಚ್, ಮರೀನಾ ಏಂಜಲ್, ಪ್ಯಾರೆಟ್ ಫಿಶ್, ರೆಡ್ ಝೀಬ್ರಾ ಫಿಶ್, ಜಿಯೋ ಪ್ಯಾರಿಸ್‌, ಸ್ಟಿಂಗ್ರೆ, ಪೆನರೋಡಿಯಂ, ಗ್ರ್ಯಾವಿಟಿ ಫಿಶ್‌, ಸಿಹಿ ನೀರಿನ ಮೀನುಗಳು, ಉಪ್ಪು ನೀರಿನ ಮೀನುಗಳು, ಜಲಸಸ್ಯಗಳಿಂದ ಅಲಂಕೃತವಾಗಿರುವ ಮೀನುಗಳು ಸೇರಿದಂತೆ ವಿವಿಧ ತಳಿಯ ಮೀನುಗಳನ್ನು ಪ್ರದರ್ಶಿಸಲಾಗಿದೆ.

ಜೊತೆಗೆ ಮಣ್ಣಿನ ಏಡಿ ಸಾಕಾಣಿಕೆ ಹಾಗೂ ಅವುಗಳ ಸೇವನೆಯಿಂದ ಆಗುವ ಆರೋಗ್ಯದ ಲಾಭಗಳ ಮಾಹಿತಿ ಒದಗಿಸಲಾಗುತ್ತಿದೆ. ಅಲ್ಲದೆ, ಮೀನುಗಾರಿಕೆ ಇಲಾಖೆಯ ವಿವಿಧ ಯೋಜನೆಗಳು ಹಾಗೂ ಮೀನುಗಾರಿಕೆ ಕುರಿತು ಮಾಹಿತಿ, ಜಲಾಶಯಗಳಲ್ಲಿ ಪಂಜರ ಮೀನು ಕೃಷಿ, ಅಕ್ವಾಫೋನಿಕ್ಸ್‌ ಕೃಷಿ ಸೇರಿದಂತೆ ಮೀನುಗಾರಿಕೆ ಕ್ಷೇತ್ರದ ಇತ್ತೀಚಿನ ತಾಂತ್ರಿಕತೆಗಳನ್ನು ಅನಾವರಣಗೊಳಿಸಲಾಗಿದೆ.

‘ಮೀನುಗಾರಿಕೆ ಇಲಾಖೆಯಿಂದ ಈ ಬಾರಿಯ ಮತ್ಸ್ಯಮೇಳವನ್ನು ಪ್ರತ್ಯೇಕವಾಗಿ ಆಯೋಜಿಸಿರುವುರಿಂದ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೀಗಾಗಿ, 3 ದಿನಗಳ ಮತ್ಸ್ಯ ಮೇಳವನ್ನು ಜಿಲ್ಲಾಡಳಿತ ಸೂಚನೆ ಮೇರೆಗೆ ಇನ್ನೂ 3 ದಿನ ವಿಸ್ತರಿಸಲಾಗಿದೆ. ಬಣ್ಣ ಬಣ್ಣದ ಮೀನುಗಳನ್ನು ವೀಕ್ಷಿಸಲು ಮಕ್ಕಳೊಂದಿಗೆ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.’

- ಸಿ.ಎನ್. ಭವಾನಿ, ಸಹಾಯಕ ನಿರ್ದೇಶಕಿ, ಮೀನುಗಾರಿಕೆ ಇಲಾಖೆ, ಮೈಸೂರು ತಾಲೂಕು