ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಮಠ ಮಂದಿರಗಳ ಸಾವಿರಾರು ವರ್ಷಗಳ ಭೂಮಿಯನ್ನು ಮತ್ತು ರೈತರ ಜಮೀನನ್ನು ಕಾನೂನಿನ ಮೂಲಕ ಕಬಳಿಸಲು ವಕ್ಫ್ ಆಸ್ತಿ ಎಂದು ಘೋಷಿಸಿ ದುಷ್ಟತನವನ್ನು ಮೆರೆದಿರುವ ಸರ್ಕಾರದ ಮತ್ತು ವಕ್ಫ್ ಮಂಡಳಿಯ ನಿಲುವನ್ನು ವಿರೋಧಿಸಿ ಭಾರತೀಯ ಕಿಸಾನ್ ಸಂಘದಿಂದ ನವೆಂಬರ್ 26 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ರೈತ ಘರ್ಜನಾ ರ್ಯಾಲಿಯನ್ನು ಹಮ್ಮಿ ಕೊಳ್ಳಲಾಗಿದೆ ಎಂದು ಭಾರತೀಯ ಕಿಸಾನ್ ಸಂಘದ ದಕ್ಷಿಣ ಪ್ರಾಂತ್ಯದ ಉಪಾಧ್ಯಕ್ಷ ಎಚ್.ಪಿ.ನಾರಾಯಣರೆಡ್ಡಿ ತಿಳಿಸಿದರು.ನಗರದ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಶುಕ್ರವಾರ ಭಾರತೀಯ ಕಿಸಾನ್ ಸಂಘದ ವತಿಯಿಂದ ಏರ್ಪಡಿಸಿದ್ದ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿ, 2013ರಲ್ಲಿ ವಕ್ಫ್ ಕಾಯ್ದೆಗೆ ಅಂದಿನ ಕೇಂದ್ರದ ಕಾಂಗ್ರೆಸ್ ಸರ್ಕಾರ ತಿದ್ದುಪಡಿ ತಂದು ಮಿತಿಮೀರಿದ ಅಧಿಕಾರವನ್ನು ವಕ್ಫ್ ಮಂಡಳಿಗೆ ಕೊಟ್ಟ ಪರಿಣಾಮ 5 ಸಾವಿರ ಎಕರೆಗಳಷ್ಟಿದ್ದ ವಕ್ಫ್ ಭೂಮಿ ಇಂದು 9 ಲಕ್ಷ 40 ಸಾವಿರಕ್ಕೂ ಹೆಚ್ಚು ವಿಸ್ತಾರವಾಗಿದೆ.
ರೈತರ ಕೃಷಿ ಭೂಮಿ, ಸ್ಮಶಾನ, ಸರ್ಕಾರಿ ಆಸ್ತಿ, ಮಠ-ಮಂದಿರಗಳ ಮತ್ತು ಸಾರ್ವಜನಿಕರ ಆಸ್ತಿಗಳನ್ನು ವಕ್ಫ್ ಆಸ್ತಿಯೆಂದು ದೇಶವ್ಯಾಪಿ ಕಬಳಿಸಿ, ಕಬಳಿಸಿ ಘೋಷಿಸಿಕೊಂಡಿರುವುದು ಭಯಾನಕ ಸತ್ಯವಾಗಿದೆ. ದೇಶದ ಒಟ್ಟು ಹಿತದೃಷ್ಟಿಯಿಂದ ಅತ್ಯಂತ ಅಪಾಯಕಾರಿಯಾದ ಈ ಕಾಯ್ದೆಗೆ ಯೋಗ್ಯ ತಿದ್ದುಪಡಿ ತಂದು ರೈತರ, ಸಾರ್ವಜನಿಕರ, ಮಠ-ಮಂದಿರಗಳ, ಸರ್ಕಾರಿ ಜಮೀನುಗಳನ್ನು ಸಂರಕ್ಷಿಸುವಂತೆ ಈಗಿನ ಕೇಂದ್ರ ಸರ್ಕಾರದ ಮೇಲೆ ರಾಜ್ಯದ ರೈತರು ಹಾಗೂ ಸಾರ್ವಜನಿಕರ ಪರವಾಗಿ ಭಾರತೀಯ ಕಿಸಾನ್ ಸಂಘವು ಆಗ್ರಹಿಸುತ್ತದೆ ಎಂದರು.ವಿಜಯಪುರ, ಬಾಗಲಕೋಟೆ, ಹಾವೇರಿ, ಬೆಳಗಾವಿ, ಕಲಬುರ್ಗಿ, ಗದಗ, ಮಂಡ್ಯ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಹಾಗೂ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಕೃಷಿ ಭೂಮಿ, ಮಠ ಮಂದಿರಗಳ, ಸಾರ್ವಜನಿಕರ ಪಹಣಿ ಮತ್ತು ಮುಟೇಷನ್‌ಗಳಲ್ಲಿ ವಕ್ಫ್ ಆಸ್ತಿ ಎಂದು ತರಾತುರಿಯಲ್ಲಿ ಸೇರ್ಪಡೆಗೊಂಡಿರುವುದನ್ನು ಕಾಣುತ್ತಿದ್ದೇವೆ. ಈ ಸಂಗತಿ ತೀವ್ರಗೊಳ್ಳುವ ಮುನ್ನ ಮುಸ್ಲಿಂ ಓಲೈಕೆಗೆ ಮುಂದಾದ ರಾಜ್ಯದ ಕಾಂಗ್ರೆಸ್ ಸರ್ಕಾರ ಹಾಗೂ ವಕ್ಫ್ ಮಂಡಳಿಯ ವಿರುದ್ಧ ಒಗ್ಗೂಡಿ ಹೋರಾಡುವ ಮೂಲಕ ಬಿಸಿ ಮುಟ್ಟಿಸುವ ಅವಶ್ಯಕತೆಯಿದೆ ಎಂದು ಹೇಳಿದರು.
ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲೂ ಇಂತಹ ಅನೇಕ ಪ್ರಕರಣಗಳು ಈಗ ಬೆಳಕಿಗೆ ಬಂದಿದ್ದು ಸಮಾಜದ ಎಲ್ಲಾ ಮಠಾಧೀಶರು, ರೈತರು ಹಾಗೂ ಸಮಾಜದ ಬಂಧುಗಳು ಒಟ್ಟುಗೂಡಿ ಈ ಅಕ್ರಮದ ವಿರುದ್ಧ ಜಾಗೃತಿಯೊಂದಿಗೆ ಸಂಘಟಿತರಾಗಿ ಪ್ರತಿಭಟಿಸುವ ಅವಶ್ಯಕತೆಯಿದೆ. ಇವೆಲ್ಲವುಗಳ ಬಗ್ಗೆ ಜನಜಾಗೃತಿ ಉದ್ದೇಶ ಇಟ್ಟುಕೊಂಡು ನವೆಂಬರ್ 26 ಮಂಗಳವಾರ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಅನೇಕ ಮಠಾಧೀಶರು, ಸಂತರು, ಸಮಾಜದ ಪ್ರಮುಖರು, ಹಾಗೂ ಇನ್ನಿತರ ಸಂಘ ಸಂಸ್ಥೆಗಳು, ಸಾರ್ವಜನಿಕರು ಮತ್ತು ರೈತರು ಈ ವಕ್ಫ್ ಪಿಶಾಚಿ ತೊಲಗಲಿ ದೇಶ ಉಳಿಯಲಿ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರೈತ ಫರ್ಜನಾ ಯಾಲಿಯನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.ಸುದ್ದಿಗೋಷ್ಟಿಯಲ್ಲಿ ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಎಚ್.ಶ್ರೀನಿವಾಸಯ್ಯ,ಉಪಾಧ್ಯಕ್ಷ ಶಾಂತಮೂರ್ತಿ, ಜಿಲ್ಲಾ ಮಹಿಳಾ ಪ್ರಮುಖ್ ಚಾತುರ್ಯ, ತಾಲೂಕು ಅಧ್ಯಕ್ಷ ಬಿ.ವಿ.ಶ್ರೀನಿವಾಸಪ್ಪ,ಉಪಾಧ್ಯಕ್ಷ ಕೇಶವರೆಡ್ಡಿ, ನಾರಾಯಣಸ್ವಾಮಿ, ರಾಮಕೃಷ್ಣಾರೆಡ್ಡಿ, ಮತ್ತಿತರರು ಇದ್ದರು.
ಸಿಕೆಬಿ-2 ಸುದ್ದಿಗೋಷ್ಟಿಯಲ್ಲಿ ಭಾರತೀಯ ಕಿಸಾನ್ ಸಂಘದ ದಕ್ಷಿಣ ಪ್ರಾಂತ್ಯದ ಉಪಾಧ್ಯಕ್ಷ ಎಚ್.ಪಿ.ನಾರಾಯಣರೆಡ್ಡಿ ಮಾತನಾಡಿದರು.