ಯಾವ ಪಕ್ಷಕ್ಕೂ ರೈತ ಸಂಘ ಬೆಂಬಲ ಇಲ್ಲ: ಕೆ.ಎಂ.ದಿನೇಶ್‌ ಸ್ಪಷ್ಟನೆ

| Published : Apr 25 2024, 01:07 AM IST

ಯಾವ ಪಕ್ಷಕ್ಕೂ ರೈತ ಸಂಘ ಬೆಂಬಲ ಇಲ್ಲ: ಕೆ.ಎಂ.ದಿನೇಶ್‌ ಸ್ಪಷ್ಟನೆ
Share this Article
  • FB
  • TW
  • Linkdin
  • Email

ಸಾರಾಂಶ

ರೈತ ಸಂಘ ರಾಜಕೀಯ ರಹಿತವಾದುದು. ಸಂಘದಲ್ಲಿರುವ ಸದಸ್ಯರು ಬೇರೆ ಬೇರೆ ಪಕ್ಷಗಳಲ್ಲಿ ಗುರುತಿಸಿಕೊಂಡಿದ್ದಾರೆ. ರೈತಪರ ಹೋರಾಟದ ವಿಷಯ ಬಂದಾಗ ಪಕ್ಷಭೇದ ಮರೆತು ಹೋರಾಟ ಮಾಡುತ್ತೇವೆ ಎಂದು ಸಂಘದ ಸೋಮವಾರಪೇಟೆ ತಾಲೂಕು ಅಧ್ಯಕ್ಷ ಕೆ.ಎಂ. ದಿನೇಶ್ ಬುಧವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ರಾಜ್ಯ ರೈತ ಸಂಘದ ಸೋಮವಾರಪೇಟೆ ಘಟಕ ಲೋಕಸಭಾ ಚುನಾವಣೆಯಲ್ಲಿ ಯಾವುದೇ ರಾಜಕೀಯ ಪಕ್ಷವನ್ನು ಬೆಂಬಲಿಸುವುದಿಲ್ಲ ಎಂದು ತಾಲೂಕು ಅಧ್ಯಕ್ಷ ಕೆ.ಎಂ. ದಿನೇಶ್ ಸ್ಪಷ್ಟಪಡಿಸಿದ್ದಾರೆ.

ರೈತ ಸಂಘ ರಾಜಕೀಯ ರಹಿತವಾದುದು. ಸಂಘದಲ್ಲಿರುವ ಸದಸ್ಯರು ಬೇರೆ ಬೇರೆ ಪಕ್ಷಗಳಲ್ಲಿ ಗುರುತಿಸಿಕೊಂಡಿದ್ದಾರೆ. ರೈತಪರ ಹೋರಾಟದ ವಿಷಯ ಬಂದಾಗ ಪಕ್ಷಭೇದ ಮರೆತು ಹೋರಾಟ ಮಾಡುತ್ತೇವೆ. ಮುಂದೆಯೂ ಇದೇ ರೀತಿ ಸಂಘದ ಹೋರಾಟಗಳು ನಡೆಯಲಿವೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಸಂಘದ ಸದಸ್ಯರು ಅವರಿಷ್ಟದ ಪಕ್ಷದ ಅಭ್ಯರ್ಥಿಗೆ ಮತ ಚಲಾಯಿಸಬಹುದು ಎಂದರು. ಅಕಾಲಿಕ ಮಳೆ, ಹಿಂಗಾರು ವಿಳಂಬ, ಬರಗಾಲ, ಅತೀವೃಷ್ಟಿಯಿಂದ ಕಳೆದ ಹತ್ತು ವರ್ಷಗಳಿಂದ ಕಾಫಿ ಬೆಳೆಗಾರರು ಫಸಲು ನಷ್ಟ ಅನುಭವಿಸುತ್ತಿದ್ದಾರೆ. ಕಾಫಿ ಪುನಶ್ಚೇತನಕ್ಕೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಮೊದಲನೆಯದಾಗಿ ಕಾಫಿ ಬೆಳೆಗಾರರ ಪಂಪ್‍ಸೆಟ್‍ಗಳಿಗೆ ಷರತ್ತು ರಹಿತವಾಗಿ ಉಚಿತ ವಿದ್ಯುತ್ ಕಲ್ಪಿಸಬೇಕು. ಬೆಳೆಗಾರ ಪಂಪ್‍ಸೆಟ್‍ಗಳ ಬಾಕಿ ವಿದ್ಯುತ್ ಬಿಲ್‍ನ್ನು ಕೂಡಲೆ ಮನ್ನಾ ಮಾಡಬೇಕು. ಸೆಸ್ಕ್‌ನವರು ಕಾಫಿ ಬೆಳೆಯುವ ಕೃಷಿಕರ ಪಂಪ್‍ಸೆಟ್‍ಗಳ ಬಾಕಿ ಬಿಲ್‍ಗೆ ಬಡ್ಡಿ, ಚಕ್ರಬಡ್ಡಿ ಹಾಕಿ ಲಕ್ಷಕ್ಕೆ ಬಿಲ್ ತಲುಪಿಸಿದ್ದಾರೆ. ಚುನಾವಣೆಯ ನಂತರ ಪಂಪ್‍ಸೆಟ್‍ಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಮುಂದಾದರೆ ಉಗ್ರಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.

ಜಿಲ್ಲೆಯಲ್ಲಿ ಕಾಡಾನೆ ಮಾನವ ಸಂಘರ್ಷ ಮುಂದುವರಿದಿದೆ. ವನ್ಯಪ್ರಾಣಿಗಳ ದಾಳಿಗೆ ರೈತರು ಕೂಲಿ ಕಾರ್ಮಿಕರು ಪ್ರಾಣ ಬಿಡುತ್ತಿದ್ದಾರೆ. ಮೃತಪಟ್ಟವರಿಗೆ ಸರ್ಕಾರ 25 ಲಕ್ಷ ರು.ಗಳ ಪರಿಹಾರ ನೀಡಬೇಕು. ತಪ್ಪಿದಲ್ಲಿ ಘಟನೆ ನಡೆದ ಸ್ಥಳದಿಂದ ಮೃತದೇಹವನ್ನು ತೆಗೆದುಕೊಂಡು ಹೋಗುವುದಿಲ್ಲ ಎಂದು ಎಚ್ಚರಿಸಿದರು.

ಈಗಾಗಲೇ ಬರದಿಂದ ಕೃಷಿಕರು ಸಮಸ್ಯೆಯ ಸುಳಿಯಲ್ಲಿದ್ದಾರೆ. ವೈಜ್ಞಾನಿಕ ರೀತಿಯಲ್ಲಿ ಎಲ್ಲಾ ಕೃಷಿಕರಿಗೆ ಬರ ಪರಿಹಾರ ಹಣ ಒದಗಿಸಬೇಕು ಎಂದು ಒತ್ತಾಯಿಸಿದರು.

ರೈತಸಂಘದ ಉಪಾಧ್ಯಕ್ಷ ಗಣಗೂರು ಚಂದ್ರಶೇಖರ್ ಮೇಲೆ ಗುಂಡಿನ ದಾಳಿ ನಡೆದಿದ್ದು, ಪೊಲೀಸ್ ಇಲಾಖೆ ತನಿಖೆಯನ್ನು ತೀವ್ರಗೊಳಿಸಿ ಅರೋಪಿಗಳನ್ನು ಬಂಧಿಸಬೇಕು. ತಪ್ಪಿದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾ ಮಚ್ಚಂಡ ಅಶೋಕ್, ಲಕ್ಷ್ಮಣ ಇದ್ದರು.