ಸಾರಾಂಶ
ಜಿಲ್ಲೆಯ ರೈತರ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಜಿಲ್ಲಾ ಸಾಮೂಹಿಕ ನಾಯಕತ್ವದ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಕನ್ನಡಪ್ರಭ ವಾರ್ತೆ ಚಾಮರಾಜನಗರಜಿಲ್ಲೆಯ ರೈತರ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಜಿಲ್ಲಾ ಸಾಮೂಹಿಕ ನಾಯಕತ್ವದ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.ಜಿಲ್ಲೆಯ ಐದು ತಾಲೂಕುಗಳಿಂದ ಬೈಕ್ ಮತ್ತು ಆಟೋ ಮುಖಾಂತರ ಗುರುವಾರ ಮೆರವಣಿಗೆಯಲ್ಲಿ ಬಂದ ಪ್ರತಿಭಟನಾಕಾರರು ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಜಮಾಯಿಸಿ ಕೆಲಕಾಲ ಪ್ರತಿಭಟನೆ ನಡೆಸಿದರು. ರಾಜ್ಯ ಸರ್ಕಾರ, ಜಿಲ್ಲಾಡಳಿತದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸದಸ್ಯ ಹೊನ್ನೂರು ಪ್ರಕಾಶ್ ಮಾತನಾಡಿ, ಜಿಲ್ಲೆಯಲ್ಲಿ ಒಣ ಮತ್ತು ಹಸಿ ಬರಗಳಿಂದ ತತ್ತರಿಸುವ ರೈತರಿಗೆ ಸೂಕ್ತ ಪರಿಹಾರ ಕೊಡದೇ ಇರುವುದು ಹಾಗೂ ಬೆಳೆವಿಮೆ ಸರಿಯಾದ ವೇಳೆಗೆ ಸಿಗುತ್ತಿಲ್ಲವಾದ್ದರಿಂದ ರೈತರು ಕಂಗಲಾಗಿದ್ದಾರೆ. ಜೊತೆಗೆ ಅತಿ ಹೆಚ್ಚು ಮಳೆ ಬೀಳುತ್ತಿದ್ದರೂ ಕೆಲವೊಂದು ಕೆರೆಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಕೈ ಬಿಟ್ಟಿರುವುದರಿಂದ ರೈತರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದರು.
ಜಿಎಂ ಮುಕ್ತ ಭಾರತ ಹಾಗೂ ಜಿಎಂ ಮುಕ್ತ ಕರ್ನಾಟಕ ಎಂದು ಘೋಷಿಸಬೇಕು, ಐಸಿಆರ್ ಮತ್ತು ಬಾಯರ್ ಕಂಪನಿಗಳಿಗೆ ಒಪ್ಪಂದ ಮಾಡಿರುವ ಕೃಷಿ ಒಪ್ಪಂದವನ್ನು ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡಿ ರದ್ದುಗೊಳಿಸಬೇಕು ಎಂದರು.ಜಿಲ್ಲೆಯಲ್ಲಿ ಕರಾ ನಿರಾಕರಣ ಚಳವಳಿ ಸಂದರ್ಭದಲ್ಲಿ ಕಟ್ಟಲಾಗದ ವಿದ್ಯುತ್ ಬಾಕಿಯನ್ನು ಮನ್ನಾ ಮಾಡಬೇಕು ಹಾಗೂ ಅಕ್ರಮ ಸಕ್ರಮ ಮುಂದುವರೆಯಬೇಕು. ಚೆಸ್ಕಾಂ ನೌಕರರ ಬೇಜವಾಬ್ದಾರಿತನದಿಂದ ಜನಜಾನುವಾರುಗಳಿಗೆ ಪ್ರಾಣಾಯಪಾಯವಾಗುತ್ತಿದ್ದು ಇದು ನಿಲ್ಲಬೇಕು ಇಂಥ ಘಟನೆಗಳು ನಡೆದರೆ ತಕ್ಷಣ ಉನ್ನತ ಮಟ್ಟದ ಅಧಿಕಾರಿಗಳನ್ನು ಮನೆಗೆ ಕಳಿಸಬೇಕು. ಅವರ ಮೇಲೆ ದೂರು ದಾಖಲಿಸಬೇಕು ಎಂದು ಒತ್ತಾಯಿಸಿದರು. ಭತ್ತಕ್ಕೆ ಕೇಂದ್ರ ಸರ್ಕಾರದ ಎಂಎಸ್ಪಿ ಮೇಲೆ ಹೆಚ್ಚುವರಿ 500 ರು.ಗಳನ್ನು ರಾಜ್ಯ ಸರ್ಕಾರ ಕೊಡಬೇಕು ಹಾಗೂ ಖರೀದಿ ಕೇಂದ್ರವನ್ನು ತೆಗೆಯಬೇಕು. ಪ್ರತಿ ಟನ್ ಕಬ್ಬಿಗೆ 4.500 ರು.ಗಳ ನಿಗದಿ ಮಾಡಬೇಕು. ರೈತ ಮತ್ತು ಕಾರ್ಖಾನೆ ನಡುವೆ ವಿಪಕ್ಷೀಯ ಒಪ್ಪಂದವಾಗಬೇಕು. ಬೇಗೂರು ಸಂತೆಯಲ್ಲಿ ರೈತರಿಂದ ಸುಂಕ ವಸೂಲು ಮಾಡುತ್ತಿರುವ ಹಗಲು ದರೋಡೆ ನಿಲ್ಲಬೇಕು ಎಂದರು.ಹನೂರು ಭಾಗದ ಕೆಲವು ಹಳ್ಳಿಗಳಿಗೆ ಕಿರು ಸೇತುವೆ ಸಂಪರ್ಕ ಕಲ್ಪಿಸಬೇಕು. ಹನೂರು ಭಾಗದಲ್ಲಿ ಕುಡಿಯುವ ನೀರಿನ ತೊಂದರೆ ಇದ್ದು ತಕ್ಷಣ ಸರಿಪಡಿಸಬೇಕು, ಮಲೆಮಾದೇಶ್ವರ ಬೆಟ್ಟದ ಕಾಡಂಚಿನ ಗ್ರಾಮಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಬೇಕು. ಹಾಗೂ ಇಂಡಿಗನತ್ತ ಗ್ರಾಮದ ರೈತರ ಮೇಲೆ ಹಾಕಿರುವ ಕೇಸ್ ಅನ್ನು ಸರ್ಕಾರ ವಾಪಸ್ ಪಡೆಯಬೇಕು, ಚಂಗಡಿ ಗ್ರಾಮವನ್ನು ಶೀಘ್ರವಾಗಿ ಸ್ಥಳಾಂತರಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.ಜಿಲ್ಲೆಯಲ್ಲಿ ಅವಶ್ಯಕತೆ ಇರುವ ಕಡೆ ಹಾಗೂ ಹೆಚ್ಚು ಕಾರ್ಡ್ ಇರುವ ಕಡೆಹೊಸ ನ್ಯಾಯಬೆಲೆ ಅಂಗಡಿಗಳನ್ನು ಸ್ಥಾಪಿಸಬೇಕು, ಗುಂಡ್ಲುಪೇಟೆ ಮತ್ತು ಹನೂರು ಭಾಗದ ಕೆಲವು ಗ್ರಾಮಗಳಲ್ಲಿ ಸರ್ಕಾರಿ ಮತ್ತು ಗೋಮಾಳದಲ್ಲಿ ಪಟ್ಟಭದ್ರ ಹಿತಾಸಕ್ತಿಗಳು ಒತ್ತುವರಿ ಮಾಡಿಕೊಂಡಿರುವ ಜಮೀನುಗಳನ್ನು ಬಿಡಿಸಿ ರಸ್ತೆ ಸಂಪರ್ಕ ಕಲ್ಪಿಸಬೇಕು. ಮಕ್ಕಳಿಗೆ ಅನುಕೂಲವಾಗುವಂತೆ ಕೆಎಸ್‌ಆರ್‌ಟಿಸಿ ಬಸ್ ಸೌಲಭ್ಯ ಒದಗಿಸಬೇಕು ಎಂದರು. ಪ್ರತಿಭಟನೆಯಲ್ಲಿ ಹೂನ್ನೂರು ಪ್ರಕಾಶ್, ಚಂಗಡಿ ಕರಿಯಪ್ಪ, ಈಶ್ವರಪ್ರಭು, ಪಾಪಣ್ಣ, ನಟರಾಜು, ನಾಗಪ್ಪ ಮಹೇಶ, ಸಿದ್ದರಾಜು, ಸಿದ್ದಲಿಂಗಸ್ವಾಮಿ, ಶಂಕರ್, ವೀರಭದ್ರಸ್ವಾಮಿ, ಶಾಂತಕುಮಾರ್, ಮಾದಪ್ಪ, ರಾಜು, ಸ್ವಾಮಿ ಸೇರಿದಂತೆ ಇತರರು ಭಾಗವಹಿಸಿದ್ದರು.