ತುಂಗಭದ್ರಾ ಜಲಾಶಯದ ಗೇಟ್‌ ಸುಗಮ ಅಳವಡಿಕೆಗೆ ರೈತ ಸಂಘ ಪೂಜೆ

| Published : Aug 17 2024, 12:54 AM IST

ತುಂಗಭದ್ರಾ ಜಲಾಶಯದ ಗೇಟ್‌ ಸುಗಮ ಅಳವಡಿಕೆಗೆ ರೈತ ಸಂಘ ಪೂಜೆ
Share this Article
  • FB
  • TW
  • Linkdin
  • Email

ಸಾರಾಂಶ

ಜಲಾಶಯದಲ್ಲಿ ಬಾಗಿನ ಅರ್ಪಿಸಲು ತುಂಗಭದ್ರಾ ಮಂಡಳಿ ಕಾರ್ಯದರ್ಶಿಗೆ ಕೋರಿದರೂ ಬಾಗಿನ ಅರ್ಪಿಸಲು ಅವಕಾಶ ನೀಡಲಿಲ್ಲ.

ಹೊಸಪೇಟೆ: ಜಲಾಶಯದ ಕ್ಲಸ್ಟರ್‌ ಗೇಟ್‌ 19ಕ್ಕೆ ಸ್ಟಾಪ್‌ ಲಾಗ್‌ ಗೇಟ್‌ ಅಳವಡಿಕೆ ಕಾರ್ಯ ಸುಗಮಗೊಂಡು ರೈತರ ಬೆಳೆಗಳಿಗೆ ನೀರು ದೊರೆಯಲಿ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ನಗರದ ವಿಜಯ ಮಹಾಗಣಪತಿ ದೇವಸ್ಥಾನದಲ್ಲಿ ರೈತರು ವಿಶೇಷ ಪೂಜೆ ನೆರವೇರಿಸಿದರು.

ಜಲಾಶಯದಲ್ಲಿ ಬಾಗಿನ ಅರ್ಪಿಸಲು ತುಂಗಭದ್ರಾ ಮಂಡಳಿ ಕಾರ್ಯದರ್ಶಿಗೆ ಕೋರಿದರೂ ಬಾಗಿನ ಅರ್ಪಿಸಲು ಅವಕಾಶ ನೀಡಲಿಲ್ಲ. ಜಲಾಶಯಕ್ಕೆ ಬಾಗಿನ ಅರ್ಪಿಸುವುದು ಹಿಂದಿನಿಂದಲೂ ಬಂದ ಸಂಪ್ರದಾಯ. ಕಾರಣ ವಿಳಂಬಕ್ಕೆ ಅವಕಾಶ ಮಾಡಿಕೊಡಬೇಡಿ ಎಂದು ಹೇಳಿದರೂ ಡ್ಯಾಂ ಅಧಿಕಾರಿಗಳು ಬಾಗಿನ ಅರ್ಪಿಸಲು ಅವಕಾಶ ನೀಡಿಲ್ಲ. ಅವರು ಸಹ ಬಾಗಿನ ಅರ್ಪಿಸಿಲ್ಲ ಎಂದು ರೈತರು ಬೇಸರ ವ್ಯಕ್ತಪಡಿಸಿದರು.

ಕರ್ನಾಟಕ ಮತ್ತು ಟಿ.ಬಿ. ಬೋರ್ಡ್ ಅಧಿಕಾರಿಗಳು ಡ್ಯಾಂನ ಸರಿಯಾದ ನಿರ್ವಹಣೆ ಮಾಡಿಲ್ಲ. 19ನೇ ಗೇಟ್ ಅನಾಹುತಕ್ಕೆ ಕಾರಣವಾಗಿದೆ. ಕೂಡಲೇ ನೀರಾವರಿ ಇಲಾಖೆಯ ಮತ್ತು ಟಿ.ಬಿ. ಬೋರ್ಡ್‌ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಆಗ್ರಹಿಸಲಾಯಿತು.

ಕಳೆದ ಆರು ದಿನಗಳು ಆದರೂ ಗೇಟ್ ಕೂರಿಸುವ ಯಾವುದೇ ಪ್ರಗತಿ ಕಾಣುತ್ತಿಲ್ಲ. ಇಲ್ಲಿಯವರೆಗೂ 35 ಟಿಎಂಸಿ ನೀರು ಹರಿದು ಹೋಗಿದ್ದು, ರಾಜ್ಯದ ನಾಲ್ಕು ಜಿಲ್ಲೆಗಳು ಮತ್ತು ಮೂರು ರಾಜ್ಯಗಳ ರೈತರಿಗೆ ಜೀವನಾಡಿಯಾಗಿರುವ ತುಂಗಭದ್ರಾ ನೀರು ಉಳಿಸುವ ಪ್ರಯತ್ನ ಮಾಡುವುದರಲ್ಲಿ ಅಧಿಕಾರಿಗಳೂ ನಿರ್ಲಕ್ಷ್ಯ ತೋರಿಸಿದ್ದಾರೆ. ರಾಜಕಾರಣಿಗಳನ್ನು ಮಾತ್ರ ಡ್ಯಾಂ ವೀಕ್ಷಣೆ ಮಾಡಲು ಬಿಡುತ್ತಿದ್ದಾರೆ. ಇದು ಸಹ ವಿಪರ್ಯಾಸ ಸಂಗತಿಯಾಗಿದ್ದು, ಬಹಳಷ್ಟು ಅನುಮಾನಕ್ಕೆ ಕಾರಣವಾಗಿದೆ.

ತುಂಗಭದ್ರಾ ಮಂಡಳಿಗೆ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣದ ರಾಜ್ಯದ ಹೊರತಾಗಿ ಇರುವ ಕಾರ್ಯದರ್ಶಿಗಳನ್ನು ನೇಮಕ ಮಾಡಬೇಕು. ಆದರೆ ಪ್ರತಿಬಾರಿಯೂ ಆಂಧ್ರಪ್ರದೇಶದವರನ್ನು ಕಾರ್ಯದರ್ಶಿಯನ್ನಾಗಿ ಮಾಡುವುದು ಬೇಡ ಎಂದು ರೈತರು ಆಗ್ರಹಿಸಿದರು.

ರಾಜ್ಯ ರೈತ ಸಂಘದ ವಿಜಯನಗರ ಜಿಲ್ಲಾಧ್ಯಕ್ಷ ಟಿ. ನಾಗರಾಜ್, ಬಳ್ಳಾರಿ ಜಿಲ್ಲಾಧ್ಯಕ್ಷ ಬಿ.ವಿ. ಗೌಡ, ಹೊಸಪೇಟೆ ತಾಲೂಕು ಅಧ್ಯಕ್ಷ ಸಣ್ಣಕ್ಕಿ ರುದ್ರಪ್ಪ, ಜಿಲ್ಲಾ ಗೌರವಾಧ್ಯಕ್ಷ ರೇವಣಸಿದ್ದಪ್ಪ, ಪದಾಧಿಕಾರಿಗಳಾದ ವಿರೂಪಣ್ಣ, ಗಾಳೆಪ್ಪ, ಎಚ್. ಸತೀಶ್ ಮತ್ತಿತರರಿದ್ದರು.