ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ತನಿಖೆಗೆ ಅನುಮತಿ ನೀಡಿ ಬಿಜೆಪಿ-ಜೆಡಿಎಸ್ ಪಕ್ಷಗಳ ಕೈಗೊಂಬೆಯಾಗಿರುವ ರಾಜ್ಯಪಾಲರು ಥಾವರ್‌ಚಂದ್ ಗೆಹಲೋಟ್ ಅವರ ನಡೆ ಧಿಕ್ಕರಿಸಿ ಆ.27ರಂದು ಶೋಷಿತಸಮುದಾಯಗಳ ಒಕ್ಕೂಟದ ನೇತೃತ್ವದಲ್ಲಿ ರಾಜಭವನ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ನಾಗೇಂದ್ರಕುಮಾರ್ ತಿಳಿಸಿದರು.ಪಟ್ಟಣದ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ಶೋಷಿತ ಸಮುದಾಯಗಳ ನಾಯಕರ ನೇತೃತ್ವದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 40 ವರ್ಷಗಳ ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಒಂದೇ ಒಂದು ಕಪ್ಪು ಚುಕ್ಕೆಯಿಲ್ಲದಂತೆ ದಕ್ಷ, ಪ್ರಾಮಾಣಿಕ ಆಡಳಿತ ನೀಡಿರುವ ಸಿದ್ದರಾಮಯ್ಯ ಅವರ ಹೆಸರಿಗೆ ಕಳಂಕ ತರಲು ಸಂಚು ರೂಪಿಸಲಾಗಿದೆ ಎಂದು ದೂರಿದರು.
ಬಿಜೆಪಿ-ಜೆಡಿಎಸ್ ಪಕ್ಷಗಳ ಕೈಗೊಂಬೆಯಂತೆ ವರ್ತಿಸುತ್ತಿರುವ ರಾಜ್ಯಪಾಲರು ಮೂಡಾ ನಿವೇಶನಗಳ ಹಗರಣದಲ್ಲಿ ಯಾವುದೇ ತಪ್ಪು ಮಾಡದ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್ ತನಿಖೆಗೆ ಒಪ್ಪಿಗೆ ನೀಡುವ ಮೂಲಕ ಸಂವಿಧಾನದ ಆಶಯಗಳನ್ನು ಬುಡಮೇಲು ಮಾಡಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಾಳಿಗೆ ತೂರಿ ಸರ್ವಾಧಿಕಾರಿ ಧೋರಣೆಯನ್ನು ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.ಪ್ರಜಾಪ್ರಭುತ್ವದ ತತ್ವ, ಸಿದ್ಧಾಂತಗಳ ಬಗ್ಗೆ ರಾಜ್ಯಪಾಕರಿಗೆ ಕಿಂಚಿತ್ತು ಗೌರವವಿದ್ದರೆ ಕೂಡಲೇ ಪ್ರಾಸಿಕ್ಯೂಷನ್ ತನಿಖೆಯನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಶೋಷಿತ ಸಮುದಾಯಗಳ ಬೃಹತ್ ಪ್ರತಿಭಟನೆ ನಡೆಸಿ ಗೋಬ್ಯಾಕ್ ಗೌರ್‍ನರ್ ಎಂಬ ಘೋಷಣೆಯೊಂದಿಗೆ ಉಗ್ರವಾದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಶಾಸಕರು ಸೇರಿದಂತೆ ದೇಶದ ಇಂಡಿಯಾ ಒಕ್ಕೂಟದ ಎಲ್ಲಾ ರಾಜಕೀಯ ಪಕ್ಷಗಳು ಸಿದ್ಧರಾಮಯ್ಯ ಅವರ ಬೆನ್ನಿಗೆ ನಿಂತಿದೆ. ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಬಾರದು. ಪ್ರಾಸಿಕ್ಯೂಷನ್ ತನಿಖೆ ರಾಜ್ಯಪಾಲರು ವಾಪಸ್ ಪಡೆಯಬೇಕು ಅಲ್ಲಿಯವರೆಗೂ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ದಲಿತ ಮುಖಂಡರಾದ ರಾಜಯ್ಯ, ಹೊಸಹೊಳಲು ಶಿವಣ್ಣ, ಪುರಸಭೆ ಹಿರಿಯ ಸದಸ್ಯ ಡಿ. ಪ್ರೇಮಕುಮಾರ್, ಮಾಜಿ ಸದಸ್ಯ ನವೀದ್‌ಅಹಮದ್, ಮುಸ್ಲಿಂ ಸಮಾಜದ ಮುಖಂಡ ಫಯಾಜ್, ಅಯಾಜ್ ಅಹಮದ್, ಮಡುವಿನಕೋಡಿ ಕಾಂತರಾಜು, ಹೊಸಹೊಳಲು ಪುಟ್ಟರಾಜು ಸೇರಿದಂತೆ ಹಲವರು ಇದ್ದರು.