ಕನ್ನಡಪ್ರಭ ವಾರ್ತೆ ವಿಜಯಪುರ

ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಜಾರಿಯಾಗಲೇ ಬೇಕೆಂದು ಆಗ್ರಹಿಸಿ ಜನವಾದಿ, ವಿಮೋಚನಾ, ಸಬಲಾ ಸೇರಿದಂತೆ ಸಾಕಷ್ಟು ಸಂಘ-ಸಂಸ್ಥೆಗಳು, ಗಣ್ಯರು ಮಹಿಳಾ ಮೀಸಲಾತಿಗೆ ಬೆಂಬಲಿಸಿದ್ದಾರೆ. ಸಿಗ್ನೇಚರ್ ಕ್ಯಾಂಪ್, ಫ್ರೀಡಂ ಪಾರ್ಕ್‌ನಲ್ಲಿ ಹೋರಾಟ, ಜು.21 ರಂದು ರಾಜಭವನ ಚಲೋ ಕಾರ್ಯಕ್ರಮಗಳು ಸೇರದಿಂತೆ ಅನೇಕ ಹೋರಾಟಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಒಕ್ಕೂಟದ ಸದಸ್ಯೆ ಮಲ್ಲಮ್ಮ ಯಾಳವಾರ ಹೇಳಿದರು.ನಗರದ ಚೈತನ್ಯ ಮಹಿಳಾ ಸಹಕಾರಿ ಬ್ಯಾಂಕ್‌ನ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಜಾಗೃತಿ ಪೋಸ್ಟರ್‌ ಬಿಡುಗಡೆ ಮಾಡಿ ಮಾತನಾಡಿದ ಅವರು, ಕಳೆದೊಂದು ತಿಂಗಳಿನಿಂದ ಒಕ್ಕೂಟವು ರಾಜ್ಯಾದ್ಯಂತ ಜನಾಭಿಪ್ರಾಯ ರೂಪಿಸುವ ಅಭಿಯಾನ ನಡೆಸುತ್ತಿದ್ದು, ಸಮುದಾಯ ಸಭೆಗಳು, ಸಾರ್ವಜನಿಕ ಸಭೆಗಳು, ರಾಜಕೀಯ ಮುಖಂಡರು, ಗಣ್ಯರು, ಸಾಹಿತಿಗಳು, ಸಮಾಜಮುಖಿ ಚಿಂತಕರು ಹಾಗೂ ವಿವಿಧ ಸಂಘಟನೆಗಳ ಪ್ರಮುಖರನ್ನು ಭೇಟಿ ಮಾಡಿ ಹೋರಾಟಕ್ಕೆ ಬೆಂಬಲ ಕೋರಲಾಗಿದೆ ಎಂದರು.ದೇಶದಲ್ಲಿ ಈ ಬಾರಿ ಮಹಿಳಾ ಮೀಸಲಾತಿ ಜಾರಿಯಾಗಲೇಬೇಕೆಂಬ ನಿಟ್ಟಿನಲ್ಲಿ ದೇಶದ ವಿವಿಧ ಮಹಿಳಾ ಸಂಘಟನೆಗಳ ಒಕ್ಕೂಟವಾಗಿರುವ ರಾಷ್ಟ್ರೀಯ ಮಹಿಳಾ ಮೀಸಲಾತಿ ಒಕ್ಕೂಟದಿಂದ ವಿವಿಧ ರೀತಿಯ ಹೋರಾಟಗಳನ್ನು ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗದಿಂದ ಕ್ಷೇತ ಪುನರ್‌ ವಿಂಗಡಣೆ ಹಾಗೂ ಮತಗಳ ತೀವ್ರ ಪರಿಷ್ಕರಣೆ ಕಾರ್ಯಗಳನ್ನು ಮಾಡಲಾಗುತ್ತಿದೆ. ಈ ಬಾರಿಯ ತಿದ್ದುಪಡೆ 106ನೇ ಸಂವಿಧಾನ ತಿದ್ದುಪಡೆ ಆಗುತ್ತಿದ್ದು, ಮಹಿಳಾ ಮೀಸಲಾತಿ ಜಾರಿ ಮಾಡಲೇ ಬೇಕು ಎಂದು ಆಗ್ರಹಿಸಿದರು.ಮಹಿಳೆಯರಿಗೆ ಸಾಮಾಜಿಕ, ರಾಜಕೀಯ ನ್ಯಾಯ ಕೊಡಬೇಕು. ಪ್ರಸ್ತುತ ಲೋಕಸಭೆಯಲ್ಲಿರುವ 543 ಸ್ಥಾನಗಳಲ್ಲಿ ಕೇವಲ 74 ಸ್ಥಾನಗಳು ಮಾತ್ರ ಮಹಿಳೆಯರು ಇರುವುದರಿಂದ ಶೇ.14ಕ್ಕಿಂತ ಕಡೆಯಾಗಿದೆ. ರಾಜ್ಯಸಭೆಯ 245 ಸ್ಥಾನಗಳಲ್ಲಿ ಕೇವಲ 42 ಮಹಿಳೆಯರಿದ್ದು, ಶೇ.17ರಷ್ಟು ಮಾತ್ರ ಮಹಿಳೆಯರಿದ್ದಾರೆ. ಇನ್ನು ರಾಜ್ಯ ವಿಧಾನಸಭೆಯಲ್ಲಿರುವ 224 ಸ್ಥಾನಗಳಲ್ಲಿ 10 ಮಹಿಳೆಯರು ಮಾತ್ರ ಇರುವುದರಿಂದ ಶೇ.4.46ರಷ್ಟು ಮಾತ್ರ ಮಹಿಳಾ ಮೀಸಲಾತಿಯಿದೆ ಎಂದು ಕಳವಳ ವ್ಯಕ್ತಪಡಿಸಿದರು.ಸಂಘಟನೆ ಸದಸ್ಯೆ ಸುರೇಖಾ ರಜಪೂತ ಮಾತನಾಡಿ, ಸ್ವಾತಂತ್ರ್ಯ ಬಂದು 70 ವರ್ಷಗಳೇ ಕಳೆದರೂ ಮಹಿಳೆಯರಿಗೆ ಇದುವರೆಗೂ ನ್ಯಾಯ ಸಿಕ್ಕಿಲ್ಲ. ಕೇವಲ‌ ಶೇ.4 ರಷ್ಟು ಮಾತ್ರ ಮೀಸಲಾತಿಯಿದ್ದು, ಈ ಬಾರಿಯ ಚಳಿಗಾಲದ ಅಧಿವೇಶನದಲ್ಲಿ ಶೇ.33 ಪರ್ಸೆಂಟ್ ಮೀಸಲಾತಿ ಜಾರಿಯಾಗಲೇಬೇಕು ಎಂದು ಒತ್ತಾಯಿಸಿದರು.ಗೊಷ್ಠಿಯಲ್ಲಿ ಸುಮನ ಕೊಲ್ಹಾರ, ಸುಜಾತಾ ಕಳ್ಳಿಮನಿ, ದ್ರಾಕ್ಷಾಯಿಣಿ ಬಿರಾದಾರ, ಭಾಗ್ಯಶ್ರೀ ದೊಡಮನಿ, ಕಾವ್ಯ ಪರಸನಹಳ್ಳಿ, ಸುಶೀಲಾಬಾಯಿ ರಾಠೋಡ, ಲಕ್ಷ್ಮಿ ಬಳಗೊಂಡ, ಮೈತ್ರಾ ಬಾಗೇವಾಡಿ ಇದ್ದರು.ಕೋಟ್...ರಾಷ್ಟ್ರೀಯ ಮಹಿಳಾ ಮೀಸಲಾತಿ ಒಕ್ಕೂಟದೊಂದಿಗೆ ಅಖಿಲ ಭಾರತ ಜನವಾಡಿ ಮಹಿಳಾ ಸಂಘಟನೆ, ನ್ಯಾಷನಲ್‌ ಫೆಡರೇಷನ್‌ ಆಫ್‌ ಇಂಡಿಯನ್ ವುಮೆನ್, ಇಂಡಿಯನ್‌ ಕ್ರಿಶ್ಚಿಯನ್ ವುಮೆನ್ ಮೂವಮೆಂಟ್, ಸಬಲಾ ಸಂಸ್ಥೆ, ವಿಮೋಚನ ಸಂಸ್ಥೆ, ಸ್ಟೂಡೆಂಟ್ ಕ್ರಿಶ್ಚಿಯನ್‌ ಮೂವಮೆಂಟ್, ಲೈಲಾಪಾಸ ಸೇರಿದಂತೆ ಅನೇಕ ಸದಸ್ಯ ಸಂಘಟನೆಗಳು ಕೈ ಜೋಡಿಸಿವೆ. ಇವುಗಳಿಟ್ಟಿಗೆ ಮಹಿಳಾ ಸಮಘಟನೆಗಳು, ನಾಗರಿಕ ಸಂಘಟನೆಗಳು, ಸಮಾಜ ಸಂಘಟನೆಗಳು, ಜನಪ್ರತಿನಿಧಿಗಳು ಬೆಂಬಲಿಸಿ ಹೋರಾಟಕ್ಕೆ ಜಯ ದೊರಕಿಸಿ ಕೊಡಬೇಕು.-ಮಲ್ಲಮ್ಮ ಯಾಳವಾರ, ಒಕ್ಕೂಟದ ಸದಸ್ಯೆ.