ಗಾಜನೂರು ಮಣ್ಣಲ್ಲಿ ಲೀನವಾದ ರಾಜ್ ಕುಮಾರ್‌ ಸಹೋದರಿ ನಾಗಮ್ಮ

| Published : Aug 03 2025, 01:30 AM IST

ಗಾಜನೂರು ಮಣ್ಣಲ್ಲಿ ಲೀನವಾದ ರಾಜ್ ಕುಮಾರ್‌ ಸಹೋದರಿ ನಾಗಮ್ಮ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡ ಚಿತ್ರರಂಗದ ವರನಟ ಡಾ.ರಾಜ್ ಕುಮಾರ್‌ ಸಹೋದರಿ, ದೊಡ್ಮನೆಯ ಹಿರಿಜೀವವಾಗಿದ್ದ ನಾಗಮ್ಮ ಅವರ ಅಂತಿಮ ವಿಧಿ-ವಿಧಾನ ಶನಿವಾರ ನಡೆಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರಕನ್ನಡ ಚಿತ್ರರಂಗದ ವರನಟ ಡಾ.ರಾಜ್ ಕುಮಾರ್‌ ಸಹೋದರಿ, ದೊಡ್ಮನೆಯ ಹಿರಿಜೀವವಾಗಿದ್ದ ನಾಗಮ್ಮ ಅವರ ಅಂತಿಮ ವಿಧಿ-ವಿಧಾನ ಶನಿವಾರ ನಡೆಯಿತು.ದೊಡ್ಮನೆ ಹಿರಿಕೊಂಡಿ, ರಾಜ್ ಪರಿವಾರದ ಮಕ್ಕಳನ್ನು ಎತ್ತು ಆಡಿಸಿ ಬೆಳೆಸಿದ್ದ ಎಲ್ಲರ ಅಕ್ಕರೆಯ ನಾಗಮ್ಮ ವಯೋಸಹಜವಾಗಿ ಶುಕ್ರವಾರ ನಿಧನರಾದರು‌‌‌. ಅಣ್ಣಾವ್ರು ಬಹಳ ಪ್ರೀತಿಯಿಂದ ಕಟ್ಟಿಸಿದ ಮನೆಯಲ್ಲಿ ನಾಗಮ್ಮರ ಪಾರ್ಥೀವ ಶರೀರವನ್ನು ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.ತಮಿಳುನಾಡಿನ ತಾಳವಾಡಿ ತಾಲೂಕಿನ ಗಾಜನೂರಿನ ತೋಟದಲ್ಲಿ ನಾಗಮ್ಮರ ಪುತ್ರರು ಹಾಗೂ ಡಾ.ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್, ಪುತ್ರಿ ಹಾಗೂ ಅಶ್ವಿನಿ ಪುನೀತ್ ರಾಜ್ ಕುಮಾರ್, ರಾಘಣ್ಣ ಕುಟುಂಬದ ಸದಸ್ಯರು ಹಾಗೂ ಬಂಧು-ಬಳಗ ನಾಗಮ್ಮಗೆ ಅಂತಿಮ ನಮನ ಸಲ್ಲಿಸಿ, ಕಂಬನಿ ಮಿಡಿದರು.

ವರನಟ ಡಾ.ರಾಜ್ ಕುಮಾರ್ ಹಾಗೂ ಸಹೋದರಿ ನಾಗಮ್ಮ ಗುಂಬಳ್ಳಿ ಸಮೀಪದ ಮಠದಲ್ಲಿ ಗುರುವಿನ ಮಕ್ಕಳ ದೀಕ್ಷೆ ಪಡೆದಿದ್ದರಿಂದ ಗುರುಮಠದ ಸಂಪ್ರದಾಯದಂತೆ ವಿಧಿ ವಿಧಾನವನ್ನು ಮಠದ ರಾಘವೇಂದ್ರ ಸ್ವಾಮಿ ನೇತೃತ್ವದ ತಂಡ ನೆರವೇರಿಸಿದರು.ಪತಿ ವೆಂಕಟೇಗೌಡ ಸಮಾಧಿ ಪಕ್ಕದಲ್ಲೇ ವಿಧಿವಿಧಾನದಂತೆ ಪಾರ್ಥೀವ ಶರೀರಕ್ಕೆ ಪೂಜೆ ಸಲ್ಲಿಸಿ ಮಣ್ಣು ಮಾಡಲಾಯಿತು. ಒಟ್ಟಿನಲ್ಲಿ ದೊಡ್ಮನೆಯ ಹಿರಿಯರಾಗಿ, ಎಲ್ಲರನ್ನೂ ಆಡಿಸಿ ಬೆಳೆಸಿ ಮಕ್ಕಳಲ್ಲಿ ಅಣ್ಣಾವ್ರನ್ನು ಕಾಣುತ್ತಿದ್ದ ಹಿರಿಜೀವ ಮಣ್ಣಲ್ಲಿ ಲೀನವಾದರು.

ನಾಗತ್ತೆಗೆ ಕೊನೆತನಕ ಗೊತ್ತಾಗಲಿಲ್ಲ ಅಪ್ಪು ಸಾವಿನ ಸುದ್ದಿ: ತಮ್ಮನ್ನು ಆಡಿಸಿ ಬೆಳೆಸಿದ ನಾಗಮ್ಮ ಪಾರ್ಥೀವ ಶರೀರ ಕಂಡು ನಟ ಶಿವರಾಜ್ ಕುಮಾರ್ ಭಾವುಕರಾದರು. ಮದ್ರಾಸ್ ಹಾಗೂ ಗಾಜನೂರಿನಲ್ಲಿ ಯಾವಾಗಲೂ ನಮ್ಮ ಜೊತೆಗೆ ನಾಗತ್ತೆ ಇರುತ್ತಿದ್ದರು, ಅಪ್ಪಾಜಿ ಕುಟುಂಬದಿಂದ ಇದ್ದ ಹಿರಿಯರು ಇವರೊಬ್ಬರೇ ಎಂದು ಕಂಬನಿ ಮಿಡಿದರು. ನಮ್ಮ ಜೊತೆ ನಾಗತ್ತೆ ಇರಬೇಕಿತ್ತು‌. ಕಳೆದ ಎರಡು ವಾರದಿಂದ ನಾಗತ್ತೆ ನೋಡಲು ಬರಬೇಕು ಎಂದುಕೊಂಡಿದ್ದೆ‌, ನಿನ್ನೆ ನಾನು ಬೆಂಗಳೂರಲ್ಲಿ ಇರಲಿಲ್ಲ, ಗೋವಾಗೆ ತೆರಳಿದ್ದೆ, ಲ್ಯಾಂಡ್ ಆದ ಕೂಡಲೇ ಸುದ್ದಿ ಬಂತು. ಕೊನೆಯವರಿಗೂ ಅಪ್ಪು ಸಾವಿನ ಸುದ್ದಿ ಅವರಿಗೆ ಗೊತ್ತಿರಲಿಲ್ಲ, ಮಗನ ನಿಧನ ಸುದ್ದಿ ಗೊತ್ತಿರಲಿಲ್ಲ, ನೆನೆಸಿಕೊಂಡರೇ ಈಗಲೂ ಕಷ್ಟ ಆಗುತ್ತದೆ ಎಂದು ಶಿವಣ್ಣ ಕಂಬನಿ ಮಿಡಿದರು.