ರಾಜಾ ವೆಂಕಟಪ್ಪ ನಾಯಕ ವ್ಯಕ್ತಿಯಲ್ಲ, ಶಕ್ತಿ: ಸಚಿವ ಶರಣಬಸಪ್ಪಗೌಡ ದರ್ಶನಾಪೂರ

| Published : Mar 22 2024, 01:03 AM IST

ರಾಜಾ ವೆಂಕಟಪ್ಪ ನಾಯಕ ವ್ಯಕ್ತಿಯಲ್ಲ, ಶಕ್ತಿ: ಸಚಿವ ಶರಣಬಸಪ್ಪಗೌಡ ದರ್ಶನಾಪೂರ
Share this Article
  • FB
  • TW
  • Linkdin
  • Email

ಸಾರಾಂಶ

ಸುರಪುರ ನಗರದ ವಸಂತ ಮಹಲ್‌ನ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶಾಸಕ ರಾಜಾ ವೆಂಕಟಪ್ಪ ನಾಯಕರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಶ್ರೀಗಳು ಪೂಜೆ ನರೆವೇರಿಸಿದರು.

ಕನ್ನಡಪ್ರಭ ವಾರ್ತೆ ಸುರಪುರ

ಶಾಸಕ ರಾಜಾ ವೆಂಕಟಪ್ಪ ನಾಯಕ ವ್ಯಕ್ತಿಯಲ್ಲ, ಅವರೊಂದು ಶಕ್ತಿಯಾಗಿದ್ದು, ಅವರ ಇಡೀ ಕುಟುಂಬ ಜನರ ಸೇವೆ ಮಾಡಿದೆ. ಈ ಭಾಗದ ಜನರ ನೋವು ನಲಿವಿನಲ್ಲಿ ಭಾಗಿಯಾಗಿದ್ದಾರೆ ಎಂದು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪೂರ ಹೇಳಿದರು.

ನಗರದ ವಸಂತ ಮಹಲ್‌ನ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶಾಸಕ ರಾಜಾ ವೆಂಕಟಪ್ಪ ನಾಯಕರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜಾ ವೆಂಕಟಪ್ಪ ನಾಯಕರ ಪಾರ್ಥಿವ ಶರೀರಕ್ಕೆ ಲಕ್ಷಾಂತರ ಜನ ಆಗಮಿಸಿರುವುದ ಸಾಧರಣದ ಮಾತಲ್ಲ ಎಂದರು.

ರಾಜಕೀಯದಲ್ಲಿ ನೇರ ದಿಟ್ಟ ವ್ಯಕ್ತಿಯಾಗಿ ಗುರುತಿಸಿಕೊಂಡವರಲ್ಲಿ ವಿರಳ ರಾಜಕಾರಣಿಯಾಗಿದ್ದರು. ಅವರ ನಡೆ-ನುಡಿಯಿಂದಲೇ ಪ್ರಖ್ಯಾತಿ ಹೊಂದಿದ್ದರು. ಅವರ ವೇಣುಗೋಪಾಲ ನಾಯಕನನ್ನು ಕೈಹಿಡಿದು ಮೇಲಕ್ಕೆತ್ತುವ ಜವಾಬ್ದಾರಿ ನಿಮ್ಮೆಲ್ಲರ ಮೇಲಿದೆ. ವೆಂಕಟಪ್ಪ ನಾಯಕ ಅಭಿಮಾನಿಗಳು, ಕುಟುಂಬಾಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು ಬಹುದೊಡ್ಡ ಪ್ರಮಾಣದಲ್ಲಿ ಸೇರಿರುವುದು ನಾಯಕರ ಕುಟುಂಬದ ಮೇಲಿರುವ ವಿಶ್ವಾಸ ಎತ್ತಿ ತೋರಿಸುತ್ತದೆ ಎಂದು ತಿಳಿಸಿದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ ಅವರು ನಾಯಕರಿಗೆ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಸ್ಥಾನ ನೀಡಿದರು. ಅದನ್ನು ಸ್ವೀಕರಿಸಿದರು. ಯಾರಿಗೂ ಎಂದಿಗೂ ಏನನ್ನು ಕೇಳದ ವ್ಯಕ್ತಿ. ಕಾರ್ಯಕರ್ತರನ್ನು ಮರೆಯದ ಮಾಣಿಕ್ಯ ಅವರಾಗಿದ್ದರು ಎಂದರು.

ಕಾಂಗ್ರೆಸ್ ಮುಖಂಡ, ಶಾಸಕರ ಪುತ್ರ ರಾಜಾ ವೇಣುಗೋಪಾಲ ನಾಯಕ ಮಾತನಾಡಿ, ರಾಜಕೀಯ ಕ್ಷೇತ್ರದಲ್ಲಿ ಕೈ ಹಿಡಿದು ನಡೆಸುವ ಸಮಯದಲ್ಲಿ ನಮ್ಮನ್ನು ತಂದೆಯವರಾದ ರಾಜಾ ವೆಂಕಟಪ್ಪ ನಾಯಕರು ಅಗಲಿದ್ದಾರೆ. ಐವರು ಸಹೋದರರು ಹಿರಿಯರಿಲ್ಲದಂತಿದ್ದೇವೆ. ನಮ್ಮ ಪಾಲಿಗೆ ಕಾರ್ಯಕರ್ತರೇ ಹಿರಿಯರು, ಗುರುಗಳು, ಮಾರ್ಗದರ್ಶಕರಾಗಿದ್ದಾರೆ. ನಮ್ಮನ್ನು ಬೆಳೆಸುವ ಶಕ್ತಿ ನಿಮ್ಮಲ್ಲಿದೆ. ತಂದೆಯವರ ಮೇಲೆ ತೋರಿಸಿದ ಪ್ರೀತಿ ನಮ್ಮ ಸಹೋದರರ ಮೇಲೂ ತೋರಿಸಿ ಆಶೀರ್ವದಿಸಬೇಕು ಎಂದು ಮನವಿ ಮಾಡಿದರು.

ತಂದೆ ನಡೆದ ದಾರಿಯಲ್ಲೇ ನಡೆಯುತ್ತೇನೆ. ಅವರು ಇಲ್ಲವೆಂಬ ಕೊರಗನ್ನು ನಿವಾರಿಸಲು ಸದಾ ನಿಮ್ಮ ಹೆಗಲಿಗೆ ಹೆಗಲು ಕೊಟ್ಟು ದುಡಿಯುತ್ತೇನೆ. ಅವರ ನಿಲ್ಲಿಸಿರುವ ಜನರ ಸೇವೆ ಮುಂದುವರಿಸುತ್ತೇನೆ. ಕಾರ್ಯಕರ್ತರ, ಮುಖಂಡ ಸಲಹೆ, ಸಹಕಾರ, ಬೆಂಬಲ ಅಗತ್ಯ ಎನ್ನುತ್ತಾ ಗದ್ಗಿತರರಾದರು.

ತಿಂಥಣಿ ಕನಕಪೀಠದ ಸಿದ್ದರಮಾನಂದಪುರಿ ಸ್ವಾಮೀಜಿ ಮಾತನಾಡಿ, ವೆಂಕಟಪ್ಪ ನಾಯಕರು ಜಾತಿ ರಾಜಕಾರಣ ಮಾಡಿದವರಲ್ಲ. ನ್ಯಾಯ ನಿಷ್ಠುರತೆ, ಸರಳ ಸಜ್ಜನಿಕೆಗೆ ಹೆಸರಾದವರು. ಅವರ ತಂತ್ರಗಾರಿಕೆ ಹೆಚ್ಚಿನ ಮಹತ್ವ ಪಡೆದುಕೊಂಡಿತ್ತು. ಜನರೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದರು. ನ್ಯಾಯ ಪಂಚಾಯಿತಿಯಲ್ಲಿ ನಿಷ್ಪಕ್ಷಪಾತಿಯಾಗಿದ್ದರು. ಶಾಸಕರ ಪುತ್ರ ವೇಣುಗೋಪಾಲ ನಾಯಕ ಜನಪ್ರತಿನಿಧಿಯಾಗಿ ಬೆಳೆಯಲು, ಮತಕ್ಷೇತ್ರದ ಜನತೆ ಮತ್ತು ಸಚಿವರು ಸಹಕರ ನೀಡಬೇಕು ಎಂದರು.

ನಿಷ್ಠಿ ಕಡ್ಲಪ್ಪನವರಮಠದ ಪ್ರಭುಲಿಂಗ ಸ್ವಾಮೀಜಿ, ಗೋಲಪಲ್ಲಿ ವಾಲ್ಮೀಕಿ ಗುರುಪೀಠದ ವರದಾನಂದೇಶ್ವರ ಸ್ವಾಮೀಜಿ, ಕೊಡೇಕಲ್ ದುರದುಂಡೇಶ್ವರ ಮಠದ ಶಿವಕುಮಾರ ಮಹಾಸ್ವಾಮೀಜಿ, ವಜ್ಜಲ ತಾಂಡಾದ ಸಂತಸೇವಾಲಾಲದ ವಿಠ್ಠಲ ಮಹಾರಾಜ್, ಮುದ್ನೂರಿನ ಶ್ರೀ ಸಿದ್ಧಮಲ್ಲಿಕಾರ್ಜುನ ಶಿವಾಚಾರ್ಯರು, ಜಿಪಂ ಮಾಜಿ ಅಧ್ಯಕ್ಷ ರಾಜಶೇಖರ ಗೌಡ ವಜ್ಜಲ್, ಭೀಮರಾಯ ಮೂಲಿಮನಿ, ಚಂದ್ರಶೇಖರ ದಂಡಿನ್ ಮಾತನಾಡಿದರು.

ಮೆಥೋಡಿಸ್ಟ್ ಫಾದರ್ ಸತ್ಯಮಿತ್ರ, ಮುಸ್ಲಿಂ ಗುರು ಅಫೀಜ್ ಮಕ್ಸೂದ್ ಆಹ್ಮದ್ ಖತೀಬ್, ನಾಗರಾಳ ರಾಮಾಚಾರಿ ಜೋಶಿ, ಅಮ್ಮಾಪುರದ ಶ್ರೀರಾಮ ಶರಣರು, ದರಬಾರ ಸಂಸ್ಥಾನದ ರಾಜಾ ಕೃಷ್ಣಪ್ಪ ನಾಯಕ, ರಾಜಾ ವೇಣುಗೋಪಾಲ ನಾಯಕ, ಶಾಸಕ ಚನ್ನರೆಡ್ಡ ತನ್ನೂರು, ಮರಿಗೌಡ ಪಾಟೀಲ, ನಿಂಗರಾಜ ಬಾಚಿಮಟ್ಟಿ, ಅಬ್ದುಲ್ ಗಫೂರ ನಗನೂರಿ ಸೇರಿದಂತೆ ಇತರರಿದ್ದರು.

ನುಡಿನಮನ:

ಹರಚರ ಗುರುಮೂರ್ತಿಗಳ ಸಮ್ಮುಖದಲ್ಲಿ ಶಾಸಕ ರಾಜಾ ವೆಂಕಟಪ್ಪ ನಾಯಕರಿಗೆ ಪೂಜೆ ನೆರವೇರಿಸಲಾಯಿತು. 2 ನಿಮಿಷ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಶ್ರೀಗಳ, ಶಾಸಕರ ಹೆಸರಿನಲ್ಲಿ ಕಾರ್ಯಕರ್ತರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಹುಣಸಗಿ ಮತ್ತು ಸುರಪುರ ತಾಲೂಕುಗಳ ಗ್ರಾಮಗಳಿಂದ ಅಪಾರ ಅಭಿಮಾನಿಗಳು, ಕಾರ್ಯಕರ್ತರು ಆಗಮಿಸಿದ್ದರು. ಬಿಸಿಲನ್ನು ಲೆಕ್ಕಿಸದೆ ಕಾರ್ಯಕರ್ತರು ಅಗಲಿದ ನಾಯಕ ಗೌರವ ಸಲ್ಲಿಸಿದರು.