ಇಂದಿನಿಂದ ರಾಜಗೋಪುರ ಲೋಕಾರ್ಪಣೆ ಕಾರ್ಯಕ್ರಮ

| Published : Mar 10 2025, 12:21 AM IST

ಸಾರಾಂಶ

ಶಿವಮೊಗ್ಗ: ನಗರದ ಸೋಮಿನ ಕೊಪ್ಪ ಮುಖ್ಯರಸ್ತೆಯಲ್ಲಿರುವ ಪಂಚಮುಖಿ ಆಂಜನೇಯ ಸ್ವಾಮಿ ಹಾಗೂ ಶ್ರೀ ಬನಶಂಕರಿ ದೇವಾಲಯದ ದಶಮಾನೋತ್ಸವ ಹಾಗೂ 108 ಅಡಿ ಎತ್ತರದ ರಾಜಗೋಪುರ ಶಿಖರ ಕಲಶ ಪ್ರತಿಷ್ಠಾಪನೆ ಕಾರ್ಯಕ್ರಮ ಮಾ.10 ರಿಂದ 12 ರವರೆಗೆ ಮೂರು ದಿನಗಳ ಕಾಲ ನಡೆಯಲಿದೆ ಎಂದು ದೇವಸ್ಥಾನ ಸಮಿತಿಯ ಸಲಹೆ ಮತ್ತು ಸಹಕಾರಿ ಸುರೇಶ್ ಕೆ. ಬಾಳೆಗುಂಡಿ ತಿಳಿಸಿದರು.

ಶಿವಮೊಗ್ಗ: ನಗರದ ಸೋಮಿನ ಕೊಪ್ಪ ಮುಖ್ಯರಸ್ತೆಯಲ್ಲಿರುವ ಪಂಚಮುಖಿ ಆಂಜನೇಯ ಸ್ವಾಮಿ ಹಾಗೂ ಶ್ರೀ ಬನಶಂಕರಿ ದೇವಾಲಯದ ದಶಮಾನೋತ್ಸವ ಹಾಗೂ 108 ಅಡಿ ಎತ್ತರದ ರಾಜಗೋಪುರ ಶಿಖರ ಕಲಶ ಪ್ರತಿಷ್ಠಾಪನೆ ಕಾರ್ಯಕ್ರಮ ಮಾ.10 ರಿಂದ 12 ರವರೆಗೆ ಮೂರು ದಿನಗಳ ಕಾಲ ನಡೆಯಲಿದೆ ಎಂದು ದೇವಸ್ಥಾನ ಸಮಿತಿಯ ಸಲಹೆ ಮತ್ತು ಸಹಕಾರಿ ಸುರೇಶ್ ಕೆ. ಬಾಳೆಗುಂಡಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಾರುತಿ ಪ್ರತಿಷ್ಠಾನಂ ವತಿಯಿಂದ ದೇವಾಲಯ ಪ್ರತಿಷ್ಠಾಪನೆಯಾಗಿ 10 ವರ್ಷಗಳು ಸಂದಿವೆ. ಇದೀಗ ದೇವಸ್ಥಾನಕ್ಕೆ 108 ಅಡಿ ಎತ್ತರದ ಅತ್ಯಂತ ಸುಂದರವಾದ ರಾಜಗೋಪುರ ನಿರ್ಮಾಣವಾಗಿದೆ ಇದರ ಲೋಕಾರ್ಪಣೆ ಕಾರ್ಯಕ್ಕೆ ಈಗಾಗಲೇ ಎಲ್ಲಾ ಸಿದ್ಧತೆ ನಡೆದಿದ್ದು, ಆ ಕಾರ್ಯ ಮಾ.10 ರಿಂದ ಆರಂಭಗೊಳ್ಳಲಿದೆ ಎಂದರು.

ಮಾ.10 ರಂದು ಬೆಳಗ್ಗೆ 7 ಗಂಟೆಗೆ ಗಣಪತಿ ಪೂಜೆಯೊಂದಿಗೆ ಆರಂಭವಾಗಲಿದೆ. ಸಂಜೆ 5:30 ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಶ್ರೀ ವಿದ್ಯಾಭಿನವ ಶ್ರೀ ಕೃಷ್ಣಾನಂದ ತೀರ್ಥ ಸ್ವಾಮೀಜಿ ಆಗಮನದೊಂದಿಗೆ ಕಾರ್ಯಕ್ರಮ ಆರಂಭಗೊಳ್ಳಲಿದೆ. ಸಂಸದ ಬಿ.ವೈ.ರಾಘವೇಂದ್ರ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಶಾಸಕ ಎಸ್.ಎನ್.ಚನ್ನಬಸಪ್ಪ, ವಿಪ ಸದಸ್ಯರಾದ ಡಿ.ಎಸ್.ಅರುಣ್, ಡಾ.ಧನಂಜಯ ಸರ್ಜಿ ಸೇರಿದಂತೆ ಇತರರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಮಾ.11ರಂದು ಬೆಳಿಗ್ಗೆ 8 ರಿಂದ ಬನಶಂಕರಿ ಅಮ್ಮನವರಿಗೆ ಹಾಗೂ ಪಂಚಮುಖಿ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಹಾಗೂ ಕುಂಭಾಭಿಷೇಕ ನಡೆಯಲಿದೆ. ಶ್ರೀಗಳಿಂದ ಆಶೀರ್ವಚನ ನಡೆಯಲಿದ್ದು, ಸಂಜೆ 6 ಗಂಟೆಗೆ ಭಕ್ತಿ ಸಂಗೀತ ಕಾರ್ಯಕ್ರಮ ಜರುಗಲಿದೆ ಎಂದು ತಿಳಿಸಿದರು.

ಮಾ.12ರಂದು ಬೆಳಗ್ಗೆ 8 ಗಂಟೆಯಿಂದ ನಡೆಯುವ ರಾಜಗೋಪುರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಶಿಖರ ಪ್ರತಿಷ್ಠಾಪನೆ ಹಾಗೂ ಬ್ರಹ್ಮ ಕುಂಭಾಭಿಷೇಕ ನಡೆಯಲಿದೆ. ತದನಂತರ ನಡೆಯುವ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹಾಗೂ ಸಂಸದ ರಾಘವೇಂದ್ರ ಸೇರಿದಂತೆ ಇತರರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಮೂರು ದಿನಗಳ ಪ್ರಸಾದದ ವ್ಯವಸ್ಥೆಯನ್ನು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರು ವಹಿಸಿಕೊಂಡಿದ್ದಾರೆ ಎಂದರು.

ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಧರ್ಮದರ್ಶಿ ವೇದಬ್ರಹ್ಮ ಶ್ರೀ ರವೀಂದ್ರ ಭಟ್, ಆಡಳಿತ ಅಧಿಕಾರಿ ದಿವ್ಯ, ಸುಬ್ರಮಣ್ಯ ಭಟ್ ಉಪಸ್ಥಿತರಿದ್ದರು.