ಶಿಷ್ಯರ ಬಾಳಿಗೆ ಬೆಳಕಾದ ರಾಜಗುರು

| Published : Jun 10 2024, 12:52 AM IST

ಸಾರಾಂಶ

ಗುರುವಿನ ಶಕ್ತಿ ನಿರಂತರ ಬೆಳಕಿನೆಡೆಗೆ ಕರೆದೊಯ್ಯುತ್ತದೆ. ಅದೇ ರೀತಿ ಪಂ. ಬಸವರಾಜ ರಾಜಗುರು ಅವರು ತೋರಿದ ಹಾದಿಯಲ್ಲಿ ಸಾಗುತ್ತಿರುವ ಅವರ ಶಿಷ್ಯರು ವಿಶೇಷ ಸಾಧನೆ ಮಾಡಿ ಗುರುಗಳ ಕೀರ್ತಿ ವೃದ್ಧಿಯಲ್ಲಿ ತೊಡಗಿದ್ದಾರೆ.

ಧಾರವಾಡ:

ಪಂ. ಬಸವರಾಜ ರಾಜಗುರು ಎಂದರೆ ಸಂಗೀತ ಶ್ರೀಮಂತಿಕೆ. ಅವರು ತಮ್ಮ ಅನೇಕ ಶಿಷ್ಯರ ಬಾಳಿಗೆ ಬೆಳಕಾಗಿದ್ದರು ಎಂದು ಉದಾತ್ತ ಕಲಾ ಅಕಾಡೆಮಿ ಗೌರವ ನಿರ್ದೇಶಕ ಶಾಂತಾರಾಮ ಹೆಗಡೆ ಹೇಳಿದರು.ನಗರದ ಆಲೂರು ವೆಂಕಟರಾವ್ ಭವನದಲ್ಲಿ ಉದಾತ್ತ ಕಲಾ ಅಕಾಡೆಮಿ, ಕುಮಾರೇಶ್ವರ ಕಲ್ಚರಲ್ ಸೊಸೈಟಿ ಹಾಗೂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಬಸವರಾಜ ರಾಜಗುರು ಸ್ಮತಿ ಸಂಗೀತೋತ್ಸವದ ಉದ್ಘಾಟನೆಯಲ್ಲಿ ಮಾತನಾಡಿದ ಅವರು, ಗುರುವಿನ ಶಕ್ತಿ ನಿರಂತರ ಬೆಳಕಿನೆಡೆಗೆ ಕರೆದೊಯ್ಯುತ್ತದೆ. ಅದೇ ರೀತಿ ಪಂ. ಬಸವರಾಜ ರಾಜಗುರು ಅವರು ತೋರಿದ ಹಾದಿಯಲ್ಲಿ ಸಾಗುತ್ತಿರುವ ಅವರ ಶಿಷ್ಯರು ವಿಶೇಷ ಸಾಧನೆ ಮಾಡಿ ಗುರುಗಳ ಕೀರ್ತಿ ವೃದ್ಧಿಯಲ್ಲಿ ತೊಡಗಿದ್ದಾರೆ ಎಂದರು.

ನಟ, ನಿರ್ದೇಶಕ ಡಾ. ಶಶಿಧರ ನರೇಂದ್ರ ಮಾತನಾಡಿ, ಬಸವರಾಜ ರಾಜಗುರು, ಭೀಮಸೇನ ಜೋಶಿ, ಗಂಗೂಬಾಯಿ ಹಾನಗಲ್, ಮಲ್ಲಿಕಾರ್ಜುನ ಮನಸೂರ ಅವರು ತಮ್ಮ ಸಂಗೀತ ಸಾಧನೆ ಮೂಲಕ ಧಾರವಾಡಕ್ಕೆ ಹೆಮ್ಮೆ ತಂದಿದ್ದಾರೆ. ಈ ಕಾರಣವಾಗಿಯೇ ಮೊದಲ ಕೇಂದ್ರ ಪ್ರಸಾರ ಖಾತೆ ಸಚಿವರಾಗಿದ್ದ ರಂಗರಾವ್ ಅವರು ಧಾರವಾಡಕ್ಕೆ ಆಕಾಶವಾಣಿ ಕೇಂದ್ರವನ್ನು ಪ್ರಾರಂಭಿಸಲು ಪ್ರೇರಣೆಯಾಯಿತು ಎಂದು ಹೇಳಿದರು.

ಆಕಾಶವಾಣಿಯ ಮೂಲಕ ಇಡೀ ದೇಶದಲ್ಲಿ ರಾಷ್ಟ್ರೀಯ ಸಂಗೀತ ಸಮ್ಮೇಳನಗಳು ಜರುಗುತ್ತಿವೆ. ಇದಕ್ಕೆ ಮೂಲ ಪ್ರೇರಣೆಯೇ ಧಾರವಾಡ ಆಕಾಶವಾಣಿ ಕೇಂದ್ರ. ಇಂತಹ ಕೇಂದ್ರದಲ್ಲಿ ಮೂರುವರೆ ದಶಕಗಳ ಕಾಲ ಕಲಾಪೋಷಕನಾಗಿ ಸೇವೆ ಸಲ್ಲಿಸಿದ್ದು ಹೆಮ್ಮೆ ಎನಿಸಿದೆ ಎಂದರು.

ಪಂ. ಬಸವರಾಜ ರಾಜಗುರು ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಮಾತೋಶ್ರೀ ಭಾರತೀದೇವಿ ರಾಜಗುರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಕುಮಾರೇಶ್ವರ ಕಲ್ಚರಲ್ ಸೊಸೈಟಿ ಅಧ್ಯಕ್ಷ ಮಲ್ಲಿಕಾರ್ಜುನ ಚಿಕ್ಕಮಠ, ನಿಜಗುಣ ರಾಜಗುರು ವೇದಿಕೆಯಲ್ಲಿದ್ದರು. ನಂತರ ಜರುಗಿದ ಸ್ಮೃತಿ ಸಂಗೀತೋತ್ಸವದಲ್ಲಿ ವಿವೇಕ ಹೆಗಡೆ ಅವರು ಗಾಯನದಲ್ಲಿ ರಾಗ ಮದುವಂತಿ ಪ್ರಸ್ತುತಪಡಿಸಿದರು. ಹಿರಿಯ ಹಿಂದೂಸ್ತಾನಿ ಗಾಯಕ ಪಂ. ಪರಮೇಶ್ವರ ಹೆಗಡೆ ಗಾಯನ ಪ್ರಸ್ತುತಪಡಿಸಿದರು. ಯುವ ಕಲಾವಿದೆ ಸೃಷ್ಟಿ ಸುರೇಶ ಸಿತಾರ ವಾದನದಲ್ಲಿ ರಾಗ ಪೂರಿಯಾ ಕಲ್ಯಾಣ ಪ್ರಸ್ತುತ ಪಡಿಸಿದರು. ತಬಲಾದಲ್ಲಿ ಗೋಪಾಲಕೃಷ್ಣ ಹೆಗಡೆ ಕಲಭಾಗ, ಅಲ್ಲಮಪ್ರಭು ಕಡಕೋಳ ಹಾಗೂ ಸತೀಶ ಭಟ್ ಹೆಗ್ಗಾರ ಹಾರ್ಮೊನಿಯಂ ಸಾಥ್ ಸಂಗಥ್ ನೀಡಿದರು.

ಸುನಿಧಿ ಹೆಗಡೆ ಪ್ರಾರ್ಥಿಸಿದರು. ರವಿ ಕುಲಕರ್ಣಿ ನಿರೂಪಿಸಿದರು. ಡಾ. ಶಾಂತಾರಾಮ ಹೆಗಡೆ ಸ್ವಾಗತಿಸಿದರು. ಪ್ರಕಾಶ ಬಾಳಿಕಾಯಿ ವಂದಿಸಿದರು. ಗಣ್ಯರಾದ ಪಂ. ಶ್ರೀಪಾದ ಹೆಗಡೆ, ಡಾ. ಅಶೋಕ ಹುಗ್ಗಣ್ಣವರ, ಡಾ. ಮೃತ್ಯುಂಜಯ ಶೆಟ್ಟರ, ಪಂ. ಸಾತಲಿಂಗಪ್ಪ ಕಲ್ಲೂರ ದೇಸಾಯಿ, ಪಂ. ರಘುನಾಥ ನಾಕೋಡ, ವೀರಣ್ಣ ಪತ್ತಾರ, ಡಾ. ಶ್ರೀಧರ ಕುಲಕರ್ಣಿ, ವೇಣುಗೋಪಾಲ ಜೋಶಿ, ಎಂ.ವಿ. ಹೊಸಮನಿ, ಎಸ್.ಎಸ್. ಬಂಗಾರಿಮಠ, ಕೆ.ಎಚ್. ನಾಯಕ ಮತ್ತಿತರರು ಇದ್ದರು.