ಸಾರಾಂಶ
ಚಾಮರಾಜನಗರ ತಾಲೂಕಿನ ಉಮ್ಮತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ರಾಜಮ್ಮ ಅವಿರೋಧವಾಗಿ ಆಯ್ಕೆಯಾದರು. ಗ್ರಾಪಂ ಅಧ್ಯಕ್ಷರಾಗಿದ್ದ ಯಮುನಾ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಗ್ರಾ.ಪಂ. ಕಚೇರಿ ಸಭಾಂಗಣದಲ್ಲಿ ಚುನಾವಣೆ ನಡೆಯಿತು.
ಮಾದರಿ ಗ್ರಾಪಂ ಗುರಿ
ಚಾಮರಾಜನಗರ: ತಾಲೂಕಿನ ಉಮ್ಮತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ರಾಜಮ್ಮ ಅವಿರೋಧವಾಗಿ ಆಯ್ಕೆಯಾದರು.ಗ್ರಾಪಂ ಅಧ್ಯಕ್ಷರಾಗಿದ್ದ ಯಮುನಾ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಗ್ರಾ.ಪಂ. ಕಚೇರಿ ಸಭಾಂಗಣದಲ್ಲಿ ಚುನಾವಣೆ ನಡೆಯಿತು. ಸಾಮಾನ್ಯ ಮಹಿಳೆಗೆ ನಿಗಧಿಯಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ರಾಜಮ್ಮ ಅವರು ಒಬ್ಬರೇ ನಾಮಪತ್ರ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಯಾಗಿದ್ದ ಪಿಡಬ್ಲುಡಿ ಇಲಾಖೆಯ ಮಾದೇಶ್ ಅಧಿಕೃತವಾಗಿ ಅಧ್ಯಕ್ಷರ ಆಯ್ಕೆಯನ್ನು ಘೋಷಣೆ ಮಾಡಿದರು.
ನೂತನ ಅಧ್ಯಕ್ಷೆ ರಾಜಮ್ಮ ಮಾತನಾಡಿ, ಉಮ್ಮತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷರನ್ನಾಗಿ ನನ್ನನ್ನು ಅವಿರೋಧವಾಗಿ ಆಯ್ಕೆ ಮಾಡಿದ ಎಲ್ಲಾ ಸದಸ್ಯರು ಹಾಗೂ ಕಾರಣಕರ್ತರಾದ ಗ್ರಾಮದ ಮುಖಂಡರು, ಹಿರಿಯರಿಗೆ ಅಭಾರಿಯಾಗಿದ್ದೇನೆ. ಮುಂದಿನ ದಿನಗಳಲ್ಲಿ ಪಂಚಾಯಿತಿ ವ್ಯಾಪ್ತಿಗೆ ಸೇರಿರುವ ಗ್ರಾಮಗಳಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಮಾದರಿ ಗ್ರಾ.ಪಂ. ಮಾಡುವ ಗುರಿ ನಮ್ಮದಾಗಿದ್ದು. ಎಲ್ಲರು ಒಗ್ಗಟ್ಟಿನಿಂದ ಪಂಚಾಯಿತಿ ಅಭಿವೃದ್ದಿಗೆ ದುಡಿಯೋಣ ಎಂದರು.ಗ್ರಾ.ಪಂ.ಮಾಜಿ ಅಧ್ಯಕ್ಷ ಶ್ರೀಕಂಠಸ್ವಾಮಿ ಮಾತನಾಡಿ, ಗ್ರಾ.ಪಂ. ಅಧ್ಯಕ್ಷರ ಅವಿರೋಧ ಆಯ್ಕೆಗೆ ಸಹಕಾರ ನೀಡಿದ ಎಲ್ಲ ಸದಸ್ಯರಿಗೂ ಅಭಿನಂದನೆಗಳು. ಇನ್ನುಳಿದ ಒಂದು ವರ್ಷಗಳ ಅವಧಿಯಲ್ಲಿ ಉಮ್ಮತ್ತೂರು ಗ್ರಾಮದ ಪ್ರತಿ ವಾರ್ಡುಗಳ ಅಭಿವೃದ್ಧಿ ಮತ್ತು ಜನರ ಆಶೋತ್ತರಗಳಿಗೆ ಸ್ಪಂದಿಸಿ ಉತ್ತಮ ಕೆಲಸ ಮಾಡುವ ಮೂಲಕ ಮಾದರಿ ಗ್ರಾಮವನ್ನಾಗಿಸಲು ಎಲ್ಲ ಸದಸ್ಯರು ಒಮ್ಮತದಿಂದ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಗ್ರಾಪಂ ಉಪಾಧ್ಯಕ್ಷ ನಂಜುಂಡಶೆಟ್ಟಿ, ಮಾಜಿ ಅಧ್ಯಕ್ಷೆ ಯಮುನಾ, ಸದಸ್ಯರಾದ ಶ್ರೀಕಂಠಸ್ವಾಮಿ, ಎಸ್.ಮಹದೇವಸ್ವಾಮಿ, ಶಿವಣ್ಣ, ನಾಗರತ್ನಮ್ಮ, ಸಿದ್ದರಾಜು, ಭವಾನಿ, ಸೌಮ್ಯ, ಪದ್ಮಮ್ಮ, ಮಾದಲಾಂಬಿಕೆ, ಚಂದ್ರು, ಚಂದ್ರ, ಪಿಡಿಒ ಮಹದೇವಪ್ರಭ, ಕಾರ್ಯದರ್ಶಿ ಶಿವಯ್ಯ, ನೌಕರರು ಹಾಗೂ ಗ್ರಾಮಸ್ಥರು ಇದ್ದರು.