ಮೇಲುಕೋಟೆಯಲ್ಲಿ ಇಂದು ರಾಜಮುಡಿ, ಅಷ್ಠತೀರ್ಥೋತ್ಸವ

| Published : Oct 31 2025, 02:00 AM IST

ಸಾರಾಂಶ

ಶ್ರೀಚೆಲುವ ನಾರಾಯಣಸ್ವಾಮಿಗೆ ಶುಕ್ರವಾರ ರಾಜಮುಡಿ ಉತ್ಸವ ಮತ್ತು ಅಷ್ಠತೀರ್ಥೋತ್ಸವ ನಡೆಯಲಿದೆ. ಅಷ್ಠತೀರ್ಥೋತ್ಸವ ಬೆಳಗ್ಗೆ ನಡೆದರೆ, ರಾತ್ರಿ ರಾಜಮುಡಿ ಉತ್ಸವ ನಡೆಯಲಿದೆ. ಮಂಡ್ಯ ಜಿಲ್ಲಾ ಖಜಾನೆಯಿಂದ ಮೇಲುಕೋಟೆಗೆ ಗುರುವಾರ ಸಂಜೆಯೇ ರಾಜಮುಡಿ ತಿರುವಾಭರಣಪೆಟ್ಟಿಗೆ ಮೇಲುಕೋಟೆಗೆ ತರಲಾಯಿತು.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ಶ್ರೀಚೆಲುವ ನಾರಾಯಣಸ್ವಾಮಿಗೆ ಶುಕ್ರವಾರ ರಾಜಮುಡಿ ಉತ್ಸವ ಮತ್ತು ಅಷ್ಠತೀರ್ಥೋತ್ಸವ ನಡೆಯಲಿದೆ.

ಅಷ್ಠತೀರ್ಥೋತ್ಸವ ಬೆಳಗ್ಗೆ ನಡೆದರೆ, ರಾತ್ರಿ ರಾಜಮುಡಿ ಉತ್ಸವ ನಡೆಯಲಿದೆ. ಮಂಡ್ಯ ಜಿಲ್ಲಾ ಖಜಾನೆಯಿಂದ ಮೇಲುಕೋಟೆಗೆ ಗುರುವಾರ ಸಂಜೆಯೇ ರಾಜಮುಡಿ ತಿರುವಾಭರಣಪೆಟ್ಟಿಗೆಯನ್ನು ಮೇಲುಕೋಟೆಗೆ ತರಲಾಯಿತು.

ವೀರಾಂಜನೇಯಸ್ವಾಮಿ ಸನ್ನಿಧಿಯಲ್ಲಿ ರಾಜಮುಡಿ ತಿರುವಾಭರಣ ಪೆಟ್ಟಿಗೆಗೆ ಪೂಜೆ ಮಾಡಿ ಪಲ್ಲಕ್ಕಿಯಲ್ಲಿರಿಸಿ ಮೆರವಣಿಗೆ ಮೂಲಕ ದೇವಾಲಯಕ್ಕೆ ತರಲಾಯಿತು. ನಂತರ ರಾತ್ರಿ 7ಗಂಟೆ ವೇಳೆಗೆ ಅಪರಜಿಲ್ಲಾಧಿಕಾರಿ ಬಿಸಿ ಶಿವಾನಂದಮೂರ್ತಿ ಸಮಕ್ಷಮ ರಾಜಮುಡಿ ಕಿರೀಟ ಮತ್ತು 16 ಬಗೆಯ ತಿರುವಾಭರಣಗಳನ್ನು ತಂದು ಪರಿಶೀಲಿಸಿ ಸ್ಥಾನೀಕರು ಮತ್ತು ಅರ್ಚಕ ಪರಿಚಾರಕರಿಗೆ ಹಸ್ತಾಂತರ ಮಾಡಲಾಯಿತು.

ಈ ವೇಳೆ ದೇವಾಲಯದ ಆಡಳಿತಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಶ್ರೀನಿವಾಸ್, ಪಾಂಡವಪುರ ತಹಸೀಲ್ದಾರ್ ಬಸವರೆಡ್ಡಪ್ಪ ರೋಣದ, ದೇವಾಲಯದ ಇಒ ಶೀಲಾ, ಅರ್ಚಕ ವರದರಾಜಭಟ್ಟರ್, ದೇವಾಲಯದ ಪಾರುಪತ್ತೇಗಾರ್ ಮತ್ತು ಸ್ಥಾನಾಚಾರ್ಯ ಶ್ರೀನಿವಾಸನರಸಿಂಹನ್‌ ಗುರೂಜಿ, ಸ್ಥಾನಾಚಾರ್ಯರಾದ ಸಜ್ಜೆಹಟ್ಟಿ ತಿರುನಾರಾಯಣ ಅಯ್ಯಂಗಾರ್, ಕೊವಿಲ್‌ ನಂಬಿ ಮುಕುಂದನ್ ಕರಗಂ ರಾಮಪ್ರಿಯ ಶ್ರೀರಾಮನ್ ಪರಿಚಾರಕ ಮತ್ತು ಪಾರುಪತ್ತೇಗಾರ್ ಪಾರ್ಥಸಾರಥಿ ಇದ್ದರು.

ಅಷ್ಠತೀರ್ಥೋತ್ಸವ ವೇಳೆ ಕಲ್ಯಾಣಿಯಲ್ಲಿ ಪಾದುಕೆಗೆ ನಡೆಯುವ ಮೊದಲ ಅಭಿಷೇಕದ ವೇಳೆ ಚೆಲುವನಾರಾಯಣಸ್ವಾಮಿಗೆ ರಾಜಮುಡಿ ಕಿರೀಟ ಧರಿಸಲಾಗುತ್ತದೆ. ರಾತ್ರಿ ರಾಜಮುಡಿ ಉತ್ಸವವನ್ನೂ ಸಾಂಪ್ರದಾಯಿಕ ಪದ್ಧತಿಯಂತೆ ನೆರವೇರಿಸಲಾಗುತ್ತಿದೆ.

ತೊಟ್ಟಿಲಮಡು ಜಾತ್ರೆಯಲ್ಲಿ ವನಬೋಜನದ ವಿಶೇಷ:

ಮಕ್ಕಳಭಾಗ್ಯ ಕರುಣಿಸುವ ತೊಟ್ಟಿಲಮಡು ಜಾತ್ರೆಯಂದೆ ಪ್ರಖ್ಯಾತ ಅಷ್ಠತೀರ್ಥೋತ್ಸವ ವೇಳೆ ಕಣಿವೆ ಬಳಿ ಇರುವ ತೊಟ್ಟಿಲಮಡು ಬಳಿ ಸಂಜೆ 4 ರಿಂದ ನಡೆಯುವ ಜಾತ್ರೆಯಲ್ಲಿ ಸಹಸ್ರಾರು ಭಕ್ತರು ಭಾಗವಹಿಸುತ್ತಾರೆ. ಮಕ್ಕಳ ಭಾಗ್ಯ ಕರುಣಿಸುವ ಚೆಲುವನಾರಾಯಣನ ಉತ್ಸವ ಎಂದೇ ಪ್ರಖ್ಯಾತವಾಗಿರುವ ಅಷ್ಠ ತೀರ್ಥೋತ್ಸವದಲ್ಲಿ ಬಹುಕಾಲ ಮಕ್ಕಳಿಲ್ಲದ ದಂಪತಿಗಳು, ಮುದ್ದಾದ ಮಗು ಅಪೇಕ್ಷಿಸುವ ನವದಂಪತಿ ವಿವಾಹಾಪೇಕ್ಷಿತರು ಭಾಗಿಯಾಗಿ ಹರಕೆ ಸಲ್ಲಿಸಲಿದ್ದಾರೆ.

ಅಷ್ಠತೀರ್ಥೋತ್ಸವ ಬೆಳಗ್ಗೆ 8 ಗಂಟೆಗೆ ಕಲ್ಯಾಣಿಯಲ್ಲಿ ಮೊದಲ ಅಭಿಷೇಕದೊಂದಿಗೆ ಆರಂಭವಾಗಿ ಸಂಜೆ 4 ಗಂಟೆಗೆ ವೈಕುಂಠಗಂಗೆ ತೊಟ್ಟಿಲಮಡುವಿನಲ್ಲಿ ಕೊನೆ ಅಭಿಷೇಕದೊಂದಿಗೆ ಮುಕ್ತಾಯವಾಗುತ್ತದೆ. ನಂತರ ಯೋಗಾನರಸಿಂಹಸ್ವಾಮಿ ಬೆಟ್ಟದ ಗಿರಿಪ್ರದಕ್ಷಿಣೆ ನಡೆದು ಮಹೋತ್ಸವ ರಾತ್ರಿ 8 ಗಂಟೆ ವೇಳೆಗೆ ಮುಕ್ತಾಯವಾಗಲಿದೆ.

ವಿವಿಧ ಸಮುದಾಯದವರು ಸಂಜೆ ರುಚಿಕರವಾದ ಕದಂಬ ಪ್ರಸಾದ ದದಿಯೋದನ ತಯಾರಿಸಿ ವನಬೋಜನ ಏರ್ಪಡಿಸಿ ಜಾತ್ರೆಗೆ ಸಹಸ್ರಾರು ಭಕ್ತರಿಗೆ ವಿತರಣೆ ಮಾಡುತ್ತಾರೆ. ಮೇಲುಕೋಟೆ ಗ್ರಾಪಂ ವತಿಯಿಂದ ಸ್ವಚ್ಚತೆ ಕುಡಿಯುವ ನೀರು, ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ.