ಕಾಮನ್ ಸೆನ್ಸ್ ಮತ್ತು ನಾನ್ ಸೆನ್ಸ್!

| Published : Feb 17 2025, 12:32 AM IST

ಸಾರಾಂಶ

ಕೆಲಸಕ್ಕೆ ಬಾರದವರು, ದಾರಿಹೋಕರಿಗೂ ಗೊತ್ತಿರುವಂತಹ ಪ್ರಾಥಮಿಕ ವಿಚಾರ ದೊಡ್ಡ ದೊಡ್ಡ ಬ್ಯಾಡ್ಜ್ ಹಾಕಿಕೊಂಡು ಹಿಂದೆ-ಮುಂದೆ ಹತ್ತಾರು ಸಿಬ್ಬಂದಿಗಳನ್ನು ಇಟ್ಟುಕೊಂಡು ಓಡಾಡುತ್ತಿರುವ ಪೊಲೀಸರಿಗೆ ಗೊತ್ತಾಗದೇ ಇರುವುದು ವಿಷಾದಕರ ಎಂದೂ ರಾಜಣ್ಣ ಗುಡುಗಿದ್ದಾರೆ!

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರಿನ ಉದಯಗಿರಿಯ ಕಿಡಿಗೇಡಿಗಳ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ರಾಜಣ್ಣ ಕಿಡಿಕಾರಿದ್ದಾರೆ.

ಉದಯಗಿರಿಯ ಘಟನೆಗೆ ಕಾರಣನಾದ ವ್ಯಕ್ತಿಯನ್ನು, ಬಂಧಿಸಿ ಉದಯಗಿರಿ ಪೊಲೀಸ್ ಠಾಣೆಯಲ್ಲೇಕೆ ಇಡಬೇಕಿತ್ತು? ಉದಯಗಿರಿ ಪ್ರದೇಶ ಮುಸ್ಲಿಮರು ಹೆಚ್ಚಾಗಿರುವ ಸ್ಥಳ. ಪೊಲೀಸರಿಗೆ ಉದಯಗಿರಿ ಠಾಣೆ ಬದಲು ಬೇರೆ ಠಾಣೆಯಲ್ಲಿ ಇಡಲು ಏನಾಗಿತ್ತು? ಅಷ್ಟು ಕಾಮನ್ ಸೆನ್ಸ್ ಇಲ್ಲವೇ ಎಂದು ಬಡಬಡಿಸಿದ್ದಾರೆ!

ಕೆಲಸಕ್ಕೆ ಬಾರದವರು, ದಾರಿಹೋಕರಿಗೂ ಗೊತ್ತಿರುವಂತಹ ಪ್ರಾಥಮಿಕ ವಿಚಾರ ದೊಡ್ಡ ದೊಡ್ಡ ಬ್ಯಾಡ್ಜ್ ಹಾಕಿಕೊಂಡು ಹಿಂದೆ-ಮುಂದೆ ಹತ್ತಾರು ಸಿಬ್ಬಂದಿಗಳನ್ನು ಇಟ್ಟುಕೊಂಡು ಓಡಾಡುತ್ತಿರುವ ಪೊಲೀಸರಿಗೆ ಗೊತ್ತಾಗದೇ ಇರುವುದು ವಿಷಾದಕರ ಎಂದೂ ರಾಜಣ್ಣ ಗುಡುಗಿದ್ದಾರೆ!

ರಾಜಣ್ಣ ಅವರು ರಾಜ್ಯದ ಗೃಹಮಂತ್ರಿ ಅಲ್ಲ. ಮೈಸೂರು ಜಿಲ್ಲೆಯ ಉಸ್ತುವಾರಿ ಸಚಿವರೂ ಅಲ್ಲ!

ಉದಯಗಿರಿಯಲ್ಲಿ ಮುಸ್ಲಿಮರೇ ಹೆಚ್ಚಾಗಿರುವುದರಿಂದ ಗಲಭೆಗೆ ಸಂಬಂಧಿಸಿದವರನ್ನು ಬಂಧಿಸಿ ಉದಯಗಿರಿ ಠಾಣೆಯಲ್ಲಿರಿಸುವ ಬದಲಾಗಿ ಬೆಳಗಾವಿ ಪೊಲೀಸರು ಸಿ.ಟಿ. ರವಿ ಅವರನ್ನು ಅಲೆದಾಡಿಸಿದಂತೆ ಉದಯಗಿರಿಯ ಆರೋಪಿಯನ್ನೂ ಊರೆಲ್ಲಾ ಅಲೆದಾಡಿಸಬೇಕಾಗಿತ್ತೇ?

ಗಲಭೆಕೋರರನ್ನು ಉದಯಗಿರಿ ಠಾಣೆಯಲ್ಲಿರುವ ಬದಲು ಬೇರೆ ಠಾಣೆಯಲ್ಲಿರಿಸಬೇಕಿತ್ತು ಎಂಬುದು ಕಾಮನ್ ಸೆನ್ಸ್ ಅಲ್ಲ ನಾನ್ ಸೆನ್ಸ್!

ರಾಜಣ್ಣ ಅವರ ಮಾತನ್ನು ಒಪ್ಪುವುದಾದರೆ ಉದಯಗಿರಿ ಪೊಲೀಸ್ ಠಾಣೆಯನ್ನು ಉದಯಗಿರಿಯಿಂದ ಕುವೆಂಪು ನಗರಕ್ಕೆ ಸ್ಥಳಾಂತರಿಸುವುದು ಒಳಿತು!

ಈ ಗಲಭೆಯ ವಿಚಾರವಾಗಿ ಮೈಸೂರಿನ ಉದಯಗಿರಿ ವ್ಯಾಪ್ತಿಯಲ್ಲಿ ಮತ್ತೊಂದು ಪೊಲೀಸ್ ಠಾಣೆ ಸ್ಥಾಪಿಸುವ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ ಅವರೂ ತಿಳಿಸಿದ್ದಾರೆ.

ನಮ್ಮ ಪೊಲೀಸರಿಗೂ ಹುಲಿ- ಸಿಂಹ- ಚಿರತೆಗಳಂತೆ ಹೋರಾಡುವ ಶಕ್ತಿಯಿದೆ. ಆದರೆ ಮೃಗಾಲಯದಂತೆ ನಮ್ಮ ರಾಜಕಾರಣಿಗಳು ಪೊಲೀಸರನ್ನು ತಮ್ಮ ಕಪಿಮುಷ್ಟಿಯಲ್ಲಿ ಕೂಡಿಹಾಕಿ ಅವತ ಸ್ವಾತಂತ್ರ್ಯಕ್ಕೆ ತಡೆಯಾಗಿದ್ದಾರೆ. ಲಕ್ಷ್ಮಣರಂತಹವರು ಕೆಣಕುತ್ತಾರೆ. ರಾಜಣ್ಣ ಅಣಕಿಸುತ್ತಾರೆ. ಕಿಡಗೇಡಿಗಳು ಕಲ್ಲುತೂರುತ್ತಾರೆ.

ಪೊಲೀಸರು ರಾಜಕಾರಣಿಗಳ ತಾಳಕ್ಕೆ ತಕ್ಕಂತೆ ಕುಣಿದು ಅಪಹಾಸ್ಯಕ್ಕೀಡಾಗುವ ಬದಲಾಗಿ ನ್ಯಾಯಾಲಯದ ಆದೇಶ, ತೀರ್ಪು, ಆಜ್ಞೆ ಹಾಗೂ ನಿರ್ದೇಶನಕ್ಕೆ ತಕ್ಕಂತೆ ಕಾರ್ಯ ನಿರ್ವಹಿಸಿದರೆ ಸಮಾಜದಲ್ಲಿ ಕಾನೂನು ಮತ್ತು ಸುವ್ಯಸ್ಥೆ ತನ್ನಿಂದ ತಾನೇ ಸುಧಾರಿಸುತ್ತದೆ.

ಈಗ ಹೇಳಿ... ಯಾರಿಗೆ ಕಾಮನ್ ಸೆನ್ಸ್ ಇಲ್ಲ... ಪೊಲೀಸರಿಗೋ... ಸಚಿವರಿಗೋ... ಅಥವಾ ನಮಗೋ? ಕುವೆಂಪು ನಗರ ಪೊಲೀಸ್ ಠಾಣೆಯು ಕುವೆಂಪುನಗರದಲ್ಲಿಲ್ಲ. ಅದು ರಾಮಕೃಷ್ಣ ನಗರದಲ್ಲಿದೆ. ಅಶೋಕ‌ಪುರಂ ಪೊಲೀಸ್ ಠಾಣೆ ಅಶೋಕ‌ಪುರಂ ನಲ್ಲಿಲ್ಲ. ಅದು ಕುವೆಂಪು ನಗರದಲ್ಲಿದೆ.

ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯು ವಿದ್ಯಾರಣ್ಯಪುರದಲ್ಲಿಲ್ಲ.ಅದು ಜೆ.ಪಿ. ನಗರದಲ್ಲಿದೆ. ಜಯಲಕ್ಷ್ಮೀ ಪುರಂ ಪೊಲೀಸ್ ಠಾಣೆಯು ಜಯಲಕ್ಷ್ಮೀಪುರಂನಲ್ಲಿಲ್ಲ. ಅದು ವಿಜಯನಗರದಲ್ಲಿದೆ. ಬಹುಶಃ ರಾಜಣ್ಣನಂತಹವರ ಕಾಮನ್ ಸೆನ್ಸ್ ಮಾತುಗಳಿಗೆ ಇದೇ ಸ್ಫೂರ್ತಿಯಾಗಿರಬಹುದು.

- ಪಿ.ಜೆ. ರಾಘವೇಂದ್ರ, ನ್ಯಾಯವಾದಿ, ಮೈಸೂರು