ಸಾರಾಂಶ
ಮತ ಗಳ್ಳತನದ ಬಗ್ಗೆ ನುಡಿದ ಸತ್ಯಕ್ಕೆ ,ಅಸತ್ಯದ ಲೇಪನ ಮಾಡಿ ದೆಹಲಿಗೆ ಮುಟ್ಟಿಸಿ ರಾಜಣ್ಣ ಅವರನ್ನು ಸಂಪುಟದಿಂದ ಕೈ ಬಿಟ್ಟಿರುವುದು ಸರಿಯಲ್ಲ
ಕನ್ನಡಪ್ರಭ ವಾರ್ತೆ ಮಧುಗಿರಿ
ಜಾತಿ ಗಣತಿ ವಿರೋಧಿಸಿ, ಹೈ ಕಮಾಂಡ್ ಗಮನಕ್ಕೂ ತರದೆ ಪ್ರಧಾನಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ ಕಾಂಗ್ರೆಸ್ ಮುಖಂಡನ ವಿರುದ್ಧ ಕ್ರಮ ಕೈಗೊಳ್ಳದ ಕಾಂಗ್ರೆಸ್ ಪಕ್ಷ, ಕರ್ನಾಟಕದಲ್ಲಿ ಪಕ್ಷದ ಕಟ್ಟಾಳು ಮಾಜಿ ಸಚಿವ ಕೆ.ಎನ್.ರಾಜಣ್ಣ ಅವರನ್ನು ಏಕಾಏಕಿ ಸಚಿವ ಸಂಪುಟದಿಂದ ವಜಾ ಮಾಡಿರುವುದು ಯಾವ ನ್ಯಾಯ ಎಂದು ತಾಲೂಕು ಅಹಿಂದ ವೇದಿಕ ಸಂಚಾಲಕ ಹಾಗೂ ಸರ್ವಜ್ಞ ವೇದಿಕೆ ಅಧ್ಯಕ್ಷ ವೆಂಕಟರಮಣಪ್ಪ ಕಾಂಗ್ರೆಸ್ ಹೈ ಕಮಾಂಡ್ ಕಾರ್ಯ ವೈಖರಿ ವಿರುದ್ಧ ಹರಿಹಾಯ್ದರು.ಇಲ್ಲಿನ ಕನ್ನಡ ಭವನದಲ್ಲಿ ಕೆ.ಎನ್.ರಾಜಣ್ಣ ಅವರನ್ನು ವಜಾ ಮಾಡಿರುವುದನ್ನು ಖಂಡಿಸಿ ತಾಲೂಕು ಅಹಿಂದ ವೇದಿಕೆಯಿಂದ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಡಿಸಿಎಂ ಡಿ.ಕೆ.ಶಿವಕುಮಾರ್ ಈ ಮೊದಲು ರಾಹುಲ್ ಗಾಂಧಿ ಅವರಿಂದ ಅಂತರ ಕಾಯ್ದುಕೊಂಡು ಅಂಬಾನಿ, ಅದಾನಿ ಕುಟುಂಬಗಳ ವಿವಾಹ , ಜಂಗ್ಗಿ ವಾಸುದೇವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆದರೂ ಅವರನ್ನು ಪಕ್ಷ ಮತ್ತು ಸರ್ಕಾರದಲ್ಲಿ ತಮ್ಮ ಪಟ್ಟ ಉಳಿಸಿಕೊಂಡಿದ್ದಾರೆ. ಆದರೆ ಪಕ್ಷದ ಶಿಸ್ತಿನ ಸಿಪಾಯಿ ಆಗಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಕೆಲಸ ಮಾಡುತ್ತಿದ್ದ, ಸಂದರ್ಭದಲ್ಲಿ ಮತ ಗಳ್ಳತನದ ಬಗ್ಗೆ ನುಡಿದ ಸತ್ಯಕ್ಕೆ ,ಅಸತ್ಯದ ಲೇಪನ ಮಾಡಿ ದೆಹಲಿಗೆ ಮುಟ್ಟಿಸಿ ರಾಜಣ್ಣ ಅವರನ್ನು ಸಂಪುಟದಿಂದ ಕೈ ಬಿಟ್ಟಿರುವುದು ಸರಿಯಲ್ಲ ಎಂದರು.ಮಾಜಿ ಪುರಸಭೆ ಅಧ್ಯಕ್ಷ ಎಂ.ಕೆ.ನಂಜುಂಡರಾಜು ಮಾತನಾಡಿ, ರಾಜ್ಯದ ಹಿಂದುಳಿದ ವರ್ಗಗಳಿಗೆ ಸಿದ್ದರಾಮಯ್ಯ ಮೊದಲ ನಾಯಕನಾದಾರೆ ಅದು ಕೆ.ಎನ್.ರಾಜಣ್ಣ ಎರಡನೇಯವರಾಗಿ ಹೊರ ಹೊಮ್ಮಿದ್ದಾರೆ. ಇಂತಹ ಮಾಸ್ ಲೀಡರ್ ನಾಯಕರಿಗೆ ರಾಜಕೀಯ ಶಕ್ತಿ ನೀಡದಿದ್ದರೆ, ಹಿಂದುಳಿದ ವರ್ಗದವರು ಪಾಡೇನು.? ಎಂದರು.
ಮಾಜಿ ಪುರಸಭೆ ಸದಸ್ಯ ಎಂ.ಎಸ್.ಶಂಕರನಾರಾಯಣ್ ಮಾತನಾಡಿ, ರಾಜಣ್ಣರವರು ಏನೂ ತಪ್ಪು ಮಾಡಿಲ್ಲ, ಆದ್ದರಿಂದ ಹೈಕಮಾಂಡ್ ಪುನರ್ ಪರಿಶೀಲಿಸಿ ಸಂಪುಟಕ್ಕೆ ಮರು ಸೇರಿಸಿ ಕೊಳ್ಳಬೇಕು. ಹೀಗೆ ಆದರೆ ರಾಜಕೀಯದಲ್ಲಿ ಮುಂದುವರಿದವರು ನಮ್ಮನ್ನು ಬೆಳೆಯಲು ಬಿಡುವುದಿಲ್ಲ ಎಂಬ ಭಾವನೆ ಕಾರ್ಯಕರ್ತರಲ್ಲಿ ಮೂಡಲಿದೆ. ರಾಜಣ್ಣ ಅಹಿಂದ ನಾಯಕರಾಗಿ ಹಿಂದುಳಿದವರಿಗೆ ರಾಜಕೀಯ ಶಕ್ತಿ ನೀಡಿ ಬೆಳಸುವಲ್ಲಿ ಮೊದಲಿಗರು ಎಂದರು.ತಾಲೂಕು ನಾಯಕ ಸಂಘದ ಅಧ್ಯಕ್ಷ ಜಗದೀಶ್ ಕುಮಾರ್ ಮಾತನಾಡಿ, ರಾಜಣ್ಣರವರು ನಮ್ಮ ಶಕ್ತಿ, ಜಿಲ್ಲೆಯ ಅಹಿಂದ ನಾಯಕರು, ಅವರ ವಿರುದ್ಧ ಷಡ್ಯಂತ್ರ ನಡೆಸಿ ಸಂಪುಟದಿಂದ ವಜ ಮಾಡಿರುವುದು ಸರಿಯಲ್ಲ. ಪಕ್ಷದ ಹಿತ ದೃಷ್ಠಿಯಿಂದ ಮತ್ತೆ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕು. ಇಲ್ಲದಿದ್ದರೆ ಅಹಿಂದ ವರ್ಗದ ಜನರು ಉಗ್ರ ಹೋರಾಟಕ್ಕೆ ಸಜ್ಜಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮಡಿವಾಳ ಸಂಘದ ಅಧ್ಯಕ್ಷ, ಈಶ್ವರಯ್ಯ,ಮಾಜಿ ಗ್ರಾಪಂ ಅಧ್ಯಕ್ಷ ವೀರಣ್ಣ,ಮುಖಂಡರಾದ ಎಂ.ಎನ್.ಮೂರ್ತಿ, ಪುರಸಭೆ ಸದಸ್ಯ ಶ್ರೀಧರ್ ,ಸುರೇಶ, ಯಾದವ ಸಂಘದ ಕಾರ್ಯದರ್ಶಿ ಪ್ರೆಸ್ ಎಂ.ಇ.ಕರಿಯಣ್ಣ, ರಂಗಧಾಮಯ್ಯ, ದಾಸಪ್ಪ, ಸಿದ್ದಪ್ಪ, ಸತ್ಯನಾರಾಯಣ್ ರಾವ್, ಶಿವಕುಮಾರ್,ವೆಂಕಟರಾಮು ಎಂ.ಜಿ.ನಾರಾಯಣರಾಜು, ರಂಗನಾಥ, ನಾಗಣ್ಣ ಇತರರಿದ್ದರು.